ಮಡಿಕೇರಿ, ಜು. 22: ನಗರದ ಸೈನಿಕರ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಕಚೇರಿ ದುರಸ್ತಿ ಕೈಗೊಳ್ಳದೆ ಹಣ ಪಡೆದು ನಿರ್ಲಕ್ಷಿಸಿರುವ ಆರೋಪ ಮೇರೆಗೆ; ಭೂಸೇನಾ ನಿಗಮದ ಅಧಿಕಾರಿಗಳಿಂದ ಹಣ ಮರುಪಾವತಿಸಲು ಕ್ರಮಕೈಗೊಂಡಿರುವದಾಗಿ ವಿಶ್ವಾಸನೀಯ ಮೂಲಗಳಿಂದ ಗೊತ್ತಾಗಿದೆ.

ನಗರದ ಸೈನಿಕ ಕಲ್ಯಾಣ ಇಲಾಖೆ ಕಟ್ಟಡದಲ್ಲಿ ಮಳೆಗಾಲ ಸಣ್ಣಪುಟ್ಟ ಸೋರುವಿಕೆ ಇತ್ಯಾದಿ ತಡೆಗಟ್ಟಿ; ಸಂಬಂಧಿಸಿದ ಕಟ್ಟಡವನ್ನು ಸಂಪೂರ್ಣ ದುರಸ್ತಿಗೊಳಿಸಲು ಸುಮಾರು ರೂ. 32 ಲಕ್ಷ ಹಣ ಭೂ ನಿಗಮ ಅಧಿಕಾರಿಗಳಿಗೆ ಪಾವತಿಯಾಗಿತ್ತು ಎಂದು ಗೊತ್ತಾಗಿದೆ.

ಹಣ ಪಡೆದಿರುವ ನಿಗಮ ಮಂದಿ ಕಟ್ಟಡದ ಒಂದಿಷ್ಟು ಗೋಡೆಗಳಿಗೆ ಸುಣ್ಣ ಬಣ್ಣ ಬಳಿದು ಅನಂತರ ಎರಡು ವರ್ಷಗಳಿಂದ ಅತ್ತ ತಲೆ ಹಾಕಿರಲಿಲ್ಲವೆಂದು ಗೊತ್ತಾಗಿದೆ. ಈ ಸಂಬಂಧ ಸೈನಿಕ ಕಲ್ಯಾಣ ಇಲಾಖೆಯ ಅಧಿಕಾರಿಗಳು ಕ್ರಮ ಜರುಗಿಸುವದರೊಂದಿಗೆ; ಕಾಮಗಾರಿ ನಿರ್ವಹಿಸದ ಕಾರಣ; ಈ ಹಿಂದೆ ಇಲಾಖೆಯಿಂದ ಪಡೆದಿರುವ ಹಣವನ್ನು ಇಲಾಖೆಯ ಖಾತೆಗೆ ಮರು ಪಾವತಿಸಲು ಆದೇಶಿಸಿರುವದಾಗಿ ತಿಳಿದು ಬಂದಿದೆ.