ಜಿಲ್ಲಾಧಿಕಾರಿ ಎಚ್ಚರಿಕೆ ಮಡಿಕೇರಿ, ಜು. 23: ಸಾಮಾಜಿಕ ಜಾಲತಾಣಗಳಲ್ಲಿ ಭೂಕಂಪನ ಆಗಿದೆ. ವೀರಾಜಪೇಟೆ ಶಾಲೆಗಳಿಗೆ ರಜೆ ಅಂತೆಲ್ಲ ಸುಳ್ಳು ಸುದ್ದಿ ಹರಿದಾಡುತ್ತಿರುವದು ಜಿಲ್ಲಾಡಳಿತದ ಗಮನಕ್ಕೆ ಬಂದಿರುತ್ತದೆ. ಆದರೆ ಜಿಲ್ಲೆಗೆ ಅತೀ ಹೆಚ್ಚು ಮಳೆ ಬೀಳುವದಾಗಿ ರೆಡ್ ಅಲರ್ಟ್ ಮಾತ್ರ ಘೋಷಣೆ ಯಾಗಿದ್ದು, ಜಿಲ್ಲಾಡಳಿತ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದು, ಜನರು ಯಾವದೇ ಭಯಪಡುವ ಅಗತ್ಯ ಇರುವದಿಲ್ಲ. ಜಿಲ್ಲೆಯ ಯಾವದೇ ಭಾಗದಲ್ಲಿ ಭೂಕಂಪನವಾಗಿರುವದಿಲ್ಲ. ಜಿಲ್ಲೆಯಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿರುವದಿಲ್ಲ. ಜನರು ಯಾವದೇ ಆತಂಕಗಳಿಗೆ ಒಳಗಾಗದೇ, ಸುಳ್ಳು ವದಂತಿಗಳಿಗೆ ಕಿವಿಗೊಡದೆ ಜಿಲ್ಲಾಡಳಿತದೊಂದಿಗೆ ಸಹಕರಿಸಲು ಜಿಲ್ಲಾಡಳಿತ ಮನವಿ ಮಾಡುತ್ತದೆ. ಸುಳ್ಳು ಸುದ್ದಿ ಹರಡುವವರ ವಿರುದ್ಧ ನಿಯಮಾನುಸಾರ ಕಾನೂನು ಕ್ರಮವಹಿಸಲಾಗುವದು ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಎಚ್ಚರಿಸಿದ್ದಾರೆ.