ಮಡಿಕೇರಿ, ಜು. 23: ಕೊಡಗು ಜಿಲ್ಲಾ ಶಾಲಾ ವಾಹನ ಚಾಲಕರ ಸಂಘ ನೂತನವಾಗಿ ರಚನೆಗೊಂಡಿದ್ದು, ಸಂಘದ ಅಧ್ಯಕ್ಷರಾಗಿ ಹರೀಶ್ ಜಿ. ಆಚಾರ್ಯ, ಕಾರ್ಯದರ್ಶಿಯಾಗಿ ಟಿ.ಎಲ್.ವಿಶ್ವನಾಥ್ ಹಾಗೂ ಖಜಾಂಚಿಯಾಗಿ ಬಿ.ಡಿ.ರವಿ ಆಯ್ಕೆಯಾಗಿದ್ದಾರೆ. ನಗರದ ಶ್ರೀ ಚೌಡೇಶ್ವರಿ ದೇವಾಲಯದ ಸಭಾಂಗಣದಲ್ಲಿ ನಡೆದ ಚಾಲಕರ ಸಭೆಯಲ್ಲಿ ನೂತನ ಸಮಿತಿಯನ್ನು ರಚಿಸಿ ಹರೀಶ್ ಜಿ. ಆಚಾರ್ಯ ಮಾರ್ಗದರ್ಶನದಲ್ಲಿ ಸಂಘವನ್ನು ಮುನ್ನಡೆಸಲು ನಿರ್ಧರಿಸಲಾಯಿತು.

ಈ ಸಂದರ್ಭ ಮಾತನಾಡಿದ ನೂತನ ಅಧ್ಯಕ್ಷರು ಗುಡ್ಡಗಾಡು ಪ್ರದೇಶವಾಗಿರುವ ಕೊಡಗಿನ ವಿದ್ಯಾರ್ಥಿಗಳು ಶಾಲೆಗೆ ತೆರಳಲು ಅನಿವಾರ್ಯವಾಗಿ ಖಾಸಗಿ ವಾಹನಗಳನ್ನು ಅವಲಂಬಿಸಲೇಬೇಕಾಗಿದೆ. ಸರಕಾರಿ ಮತ್ತು ಖಾಸಗಿ ಬಸ್‍ಗಳು ಮುಖ್ಯ ರಸ್ತೆಗಳಲ್ಲಿ ಮಾತ್ರ ಸಂಚರಿಸಲು ಸಾಧ್ಯವಿದ್ದು, ಗ್ರಾಮೀಣ ಹಾಗೂ ಕಡಿದಾದ ಬಡಾವಣೆಗಳ ವಿದ್ಯಾರ್ಥಿಗಳು ಖಾಸಗಿ ವಾಹನಗಳಲ್ಲೇ ಶಾಲೆಗಳಿಗೆ ತೆರಳುತ್ತಾರೆ. ಈ ವ್ಯವಸ್ಥೆಯಿಂದ ವಿದ್ಯಾರ್ಥಿಗಳಿಗೆ ಮಾತ್ರ ಅನುಕೂಲವಾಗುವದಲ್ಲದೆ ವಾಹನ ಚಾಲಕರಿಗೂ ಉದ್ಯೋಗ ಸೃಷ್ಟಿಯಾದಂತಾಗುತ್ತದೆ ಎಂದು ಅಭಿಪ್ರಾಯಪಟ್ಟರು. ತಮ್ಮ ವಾಹನಗಳ ನಿತ್ಯ ಸಂಚಾರಕ್ಕೆ ವಿನಾಕಾರಣ ಅಡ್ಡಿ, ಆತಂಕಗಳು ಎದುರಾದರೆ ಅದಕ್ಕೆ ಕಾನೂನಿನ ಚೌಕಟ್ಟಿನಲ್ಲಿ ಸೂಕ್ತ ಪರಿಹಾರಗಳಿರುತ್ತವೆ ಎಂದು ಹರೀಶ್ ಜಿ. ಆಚಾರ್ಯ ಸಲಹೆ ನೀಡಿದರು.

ಸಂಘದ ಉಳಿದ ಪದಾಧಿಕಾರಿಗಳನ್ನು ಮುಂದಿನ ಸಭೆಯಲ್ಲಿ ಆಯ್ಕೆ ಮಾಡಲು ನಿರ್ಧರಿಸಲಾಯಿತು. ಸಂಘದ ಸದಸ್ಯರುಗಳಾದ ಷರೀಫ್, ದಾನೇಶ್, ಜೋಸೆಫ್, ಕೃಷ್ಣ, ರಮೇಶ್ ಮತ್ತಿತರರು ಹಾಜರಿದ್ದರು.