ಮಡಿಕೇರಿ, ಜು. 22: ಕೊಡಗು ಸೇರಿದಂತೆ ದೇಶದಲ್ಲಿ ಬಿಎಸ್ಎನ್ಎಲ್ ಆರ್ಥಿಕ ಸಂಕಷ್ಟಕ್ಕೆ ಸಿಲುಕುವದರೊಂದಿಗೆ; ಪ್ರಧಾನಿ ನರೇಂದ್ರ ಮೋದಿ ಕನಸಿನ ‘ಡಿಜಿಟಲ್ ಇಂಡಿಯಾ’ ಯೋಜನೆಯು ಅನುಷ್ಠಾನಕ್ಕೆ ತೀವ್ರ ಆಘಾತ ಎದುರಾಗಿದೆ. ಕೊಡಗಿನಂತಹ ಪುಟ್ಟ ಜಿಲ್ಲೆಯಲ್ಲಿ ಬಿಎಸ್ಎನ್ಎಲ್ ಉದ್ಯೋಗದಲ್ಲಿರುವ ಸುಮಾರು 200 ಮಂದಿ ಖಾಯಂ ಸಿಬ್ಬಂದಿ ಹಾಗೂ 150 ತಾತ್ಕಾಲಿಕ ಉದ್ಯೋಗಿಗಳು ಮೂರು ತಿಂಗಳಿನಿಂದ ಮಾಸಿಕ ವೇತನವಿಲ್ಲದೆ ಅತಂತ್ರರಾಗಿದ್ದಾರೆ.ಬಿಎಸ್ಎನ್ಎಲ್ ಕೇಂದ್ರ ವಲಯದಿಂದ ಕೊಡಗಿಗೆ ಯಾವದೇ ಅನುದಾನ ಲಭಿಸದಿರುವ ಪರಿಣಾಮ; ಈ ಪುಟ್ಟ ಜಿಲ್ಲೆಯಲ್ಲಿ ಸರಕಾರಿ ಕಚೇರಿಗಳು ಸೇರಿದಂತೆ ಗ್ರಾಹಕರು ಕೂಡ ಸಮಸ್ಯೆಯ ಸುಳಿಯಲ್ಲಿ ಸಿಲುಕುವಂತಾಗಿದೆ. ಪ್ರಧಾನಿ ಮೋದಿ ಕನಸಿನಂತೆ ಕಾಗದ ಪತ್ರ ರಹಿತ ಎಲ್ಲವನ್ನೂ ಜಾಲತಾಣಗಳಲ್ಲಿ ನಿರ್ವಹಿಸಲು ರಾಷ್ಟ್ರಮಟ್ಟದಲ್ಲಿ ಚಿಂತನೆ ಹರಿಸಲಾಗಿದೆ.ಆದರೆ ಕೊಡಗಿನ ಮಟ್ಟಿಗೆ ಅಂತರ್ಜಾಲ ನಿರ್ವಹಣೆಯ ಸಮಸ್ಯೆಯಿಂದ ದೈನಂದಿನ ಕೆಲಸಗಳಿಗೆ ತೀವ್ರ ಹಿನ್ನೆಡೆಯಾಗಿದೆ. ಜನವಲಯದಲ್ಲಿ ಈ ಸಂಬಂಧ ಉಂಟಾಗಿರುವ ಅಸಮಾಧಾನ ಕುರಿತು ‘ಶಕ್ತಿ’ ಭಾರತ ಸಂಚಾರ ನಿಗಮದ ಜಿಲ್ಲಾ ಪ್ರಬಂಧಕ ಎಂ.ಪಿ. ಸುಬ್ಬಯ್ಯ ಅವರ ಗಮನ ಸೆಳೆಯಿತು.
ಸಮಸ್ಯೆಗಳ ಸರಮಾಲೆ : ಈ ಅಧಿಕಾರಿಯ ಮಾಹಿತಿ ಪ್ರಕಾರ ಕೊಡಗಿನಲ್ಲಿ ಸುಮಾರು 86 ಕಡೆಗಳಲ್ಲಿ ದೂರವಾಣಿ ವಿನಿಮಯ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಈ ಪೈಕಿ ಕೇವಲ 33
(ಮೊದಲ ಪುಟದಿಂದ) ಮಾತ್ರ ಸ್ವಂತ ಕಟ್ಟಡದೊಂದಿಗೆ ಉಳಿದ 53 ರಷ್ಟು ಬಾಡಿಗೆ ಕಟ್ಟಡಗಳಲ್ಲಿ ನಿರ್ವಹಿಸಲ್ಪಡುತ್ತಿವೆ. ಅಲ್ಲದೆ 2‘ಜಿ’ಯ 126 ಟವರ್ (ಬಿಜೆಎಸ್) ಹಾಗೂ 122 3‘ಜಿ’ಯ ಟವರ್ಗಳಿದ್ದು, ಬಹುತೇಕ ಬಾಡಿಗೆಗೆ ಖಾಸಗಿಯವರ ಜಾಗದಲ್ಲಿ ಸ್ಥಾಪಿಸಲ್ಪಟ್ಟಿವೆ.
ಬಾಡಿಗೆ ಪಾವತಿಸಿಲ್ಲ : ಇಂತಹ ಬಹುತೇಕ ಕಟ್ಟಡಗಳ ಬಾಬ್ತು ಮಾಸಿಕ ಬಾಡಿಗೆ 4.30 ಲಕ್ಷ ರೂ. ಗಳಂತೆ ಕಳೆದ ಆರು ತಿಂಗಳಿನಿಂದ ಪಾವತಿ ಬಾಕಿ ಉಳಿದುಕೊಂಡಿದೆಯಂತೆ. ಈ ಬಾಬ್ತು ಸುಮಾರು 25.80 ಲಕ್ಷ ಭರಿಸಬೇಕಿದೆ.
ವಿದ್ಯುತ್ ಬಿಲ್ : ಇನ್ನು ಜಿಲ್ಲೆಯ ಎಲ್ಲಾ ಬಿಎಸ್ಎನ್ಎಲ್ ವಿನಿಮಯ ಕೇಂದ್ರಗಳಿಂದ ಕ್ರೋಢೀಕೃತ ಮಾಸಿಕ ವಿದ್ಯುತ್ ಬಿಲ್ ಸರಾಸರಿ ರೂ. 32 ಲಕ್ಷದಂತೆ ಚೆಸ್ಕಾಂಗೆ ಪಾವತಿಸಬೇಕಿದೆ. ಈ ಮೊತ್ತ ಅಂದಾಜು 1 ಕೋಟಿಯಷ್ಟು ಬಾಕಿ ಇದೆ ಎಂದು ಗೊತ್ತಾಗಿದೆ.
ವೇತನ ವಿಲ್ಲ : ಇದರೊಂದಿಗೆ ಜಿಲ್ಲೆಯ ಸುಮಾರು 200 ಮಂದಿ ಬಿಎಸ್ಎನ್ಎಲ್ ಉದ್ಯೋಗಿಗಳು ಮತ್ತು ಸುಮಾರು 150 ಮಂದಿ ತಾತ್ಕಾಲಿಕ ಸಿಬ್ಬಂದಿಯ ಮಾಸಿಕ ವೇತನ ಪಾವತಿಸಿಲ್ಲ. ಸಿಬ್ಬಂದಿಯ ವೇತನ ಅಂದಾಜು ರೂ. 60 ಲಕ್ಷ ಮೊತ್ತ ಬಾಕಿಯಿದ್ದು; ಆರ್ಥಿಕ ಸ್ಥಿತಿ ನೋಡಿಕೊಂಡು ವೇತನವನ್ನು ಆಗಿಂದಾಗ್ಗೆ ಪಾವತಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅಧಿಕಾರಿ ಸ್ಪಷ್ಟಪಡಿಸಿದ್ದಾರೆ.
ಪೈಪೋಟಿಯ ಹೊಡೆತ : ಒಂದೊಮ್ಮೆ ಜಿಲ್ಲೆಯಲ್ಲಿ ಸುಮಾರು 2.50 ಲಕ್ಷ ಬಿಎಸ್ಎನ್ಎಲ್ ಮೊಬೈಲ್ ಗ್ರಾಹಕರಿದ್ದು; ರೂ. 3.25 ಕೋಟಿಯಷ್ಟು ಬರುತ್ತಿದ್ದ ಆದಾಯ ಈಗ ರೂ. 1.25 ಕೋಟಿಗೆ ಕುಸಿದಿದೆ ಎಂದು ಪ್ರಬಂಧಕ ಸುಬ್ಬಯ್ಯ ವಿಷಾದ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಸ್ಥಿರ ದೂರವಾಣಿ 11,500ಕ್ಕೆ ಸೀಮಿತಗೊಂಡಿದ್ದು, ಈ ಬಾಬ್ತು ಬಹುತೇಕ ಸರಕಾರಿ ಕಚೇರಿಗಳನ್ನು ಅವಲಂಭಿಸಿವೆ ಎಂದು ಬೊಟ್ಟು ಮಾಡಿದ್ದಾರೆ. ಆ ಮೂಲಕ ರೂ. 60 ಲಕ್ಷ ಆದಾಯ ಲಭ್ಯವಿರುವದಾಗಿ ವಿವರಿಸಿದ್ದಾರೆ.
ನಿರ್ವಹಣೆ ವೆಚ್ಚ ಸವಾಲು : ಇಂತಹ ಪರಿಸ್ಥಿತಿಯ ನಡುವೆ ಕೊಡಗಿನಲ್ಲಿ ಮಳೆಗಾಲ ಸಂದರ್ಭ ವಿದ್ಯುತ್ ಕಣ್ಣಾ ಮುಚ್ಚಾಲೆಯಿಂದ ಬಹುತೇಕ ಜನರೇಟರ್ಗಳನ್ನು ಅವಲಂಬಿಸಿ ವಿನಿಮಯ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸಬೇಕಿದೆ. ಡೀಸೆಲ್ ಬಾಬ್ತು ಅಂದಾಜು 10 ಲಕ್ಷ ವ್ಯಯಿಸಬೇಕಿದ್ದು; ಕೇವಲ 2 ರಿಂದ 3 ಲಕ್ಷ ವೆಚ್ಚ ಮಾತ್ರ ಕೇಂದ್ರ ವಲಯ ಭರಿಸಲಿದೆ ಎಂದು ಅಸಹಾಯಕತೆ ತೋಡಿಕೊಂಡಿದ್ದಾರೆ. -ಶ್ರೀಸುತ