ಮಡಿಕೇರಿ, ಜು. 22: ಸಹಮತ ವೇದಿಕೆ ವತಿಯಿಂದ ಆ. 5 ರಂದು ನಡೆಯಲಿರುವ “ಮತ್ತೆ ಕಲ್ಯಾಣ ಆಂದೋಲನ” ಕಾರ್ಯಕ್ರಮದ ಕುರಿತು ನಗರದ ಪತ್ರಿಕಾ ಭವನದಲ್ಲಿ ಪ್ರಮುಖರ ಸಭೆ ನಡೆಯಿತು.
ಸಹಮತ ವೇದಿಕೆಯ ಅಧ್ಯಕ್ಷ ಟಿ.ಪಿ. ರಮೇಶ್ ಕಾರ್ಯಕ್ರಮದ ರೂಪುರೇಷೆಗಳ ಕುರಿತು ಚರ್ಚಿಸಿ ಅಭಿಪ್ರಾಯ ಸಂಗ್ರಹಿಸಿದರು.
ಮಹದೇವಪೇಟೆಯ ಬಸವೇಶ್ವರ ದೇವಾಲಯದಿಂದ ಕಾವೇರಿ ಹಾಲ್‍ವರೆಗೆ ಎಲ್ಲಾ ಸಮುದಾಯಗಳನ್ನೊಳಗೊಂಡ ಸಾಮರಸ್ಯ ನಡಿಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳ ಲಾಗುವದು. ಸಾಣೆ ಮಠದ ಪಂಡಿತರಾದ್ಯ ಶಿವಾಚಾರ್ಯ ಸ್ವಾಮೀಜಿಗಳ ನೇತೃತ್ವದಲ್ಲಿ ಎಲ್ಲಾ ಧರ್ಮದ ಪ್ರಮುಖರನ್ನು ಒಂದೆಡೆ ಸೇರಿಸಿ ಕಾರ್ಯಕ್ರಮ ನಡೆಸ ಲಾಗುವದು. ಆ. 5 ರಂದು ನಗರದಲ್ಲಿ ನಡೆಯುವ ಸಮಾವೇಶಕ್ಕೆ ಜಿಲ್ಲೆಯ ಎಲ್ಲಾ ಧರ್ಮದ ಮುಖಂಡರನ್ನು ಹಾಗೂ ಉಪನ್ಯಾಸ ಕಾರ್ಯಕ್ರಮಕ್ಕೆ ಇಬ್ಬರು ಅತಿಥಿ ಉಪನ್ಯಾಸಕರನ್ನು ಆಹ್ವಾನಿಸಲು ಸಭೆ ನಿರ್ಧರಿಸಿತು.
ಪೂರ್ವಭಾವಿಯಾಗಿ ಸೋಮವಾರಪೇಟೆ ಹಾಗೂ ವೀರಾಜಪೇಟೆ ಕೇಂದ್ರ ಸ್ಥಾನದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ನಡೆಯಲಿದೆ. ನಂತರ ಸಮಾವೇಶದ ದಿನ ಮಡಿಕೇರಿ ನಗರದಲ್ಲಿರುವ ಎಲ್ಲಾ ಶಾಲಾ ಕಾಲೇಜು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುವ ಕುರಿತು ಪ್ರಮುಖರು ಸಮಾಲೋಚನೆ ನಡೆಸಿದರು. ಕೊಡಗಿನ ಎಲ್ಲಾ ಧರ್ಮದ ಮುಖಂಡರು, ರಾಜಕೀಯ ನಾಯಕರು ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಲಾಗುವದೆಂದು ಟಿ.ಪಿ. ರಮೇಶ್ ತಿಳಿಸಿದರು.
ಸಹಮತ ವೇದಿಕೆಯ ಕಾರ್ಯಕಾರಿ ಸಮಿತಿ ಸದಸ್ಯ ಎಂ.ಇ. ಮೊಹಿದ್ದೀನ್, ಕೋಶಾಧಿಕಾರಿ ಟಿ.ಎಂ. ಮುದ್ದಯ್ಯ, ಗೊಲ್ಲ ಸಮಾಜದ ಅಧ್ಯಕ್ಷÀ ಎ.ಎಸ್. ನಾಣಯ್ಯ, ಅಹಿಂದ ಒಕ್ಕೂಟದ ಭಾಗಮಂಡಲ ಅಧ್ಯಕ್ಷÀ ಬಿ.ಎನ್. ರಂಗಪ್ಪ, ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಕೆ.ಎ. ಯಾಕುಬ್, ನಗರಸಭಾ ಮಾಜಿ ಸದಸ್ಯ ಎಂ.ಎ. ಉಸ್ಮಾನ್, ಹೆಚ್.ಎಸ್. ಯತೀಶ್, ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಹೆಚ್.ಎಲ್. ದಿವಾಕರ್, ಜಿ.ಪಂ. ಸದಸ್ಯೆ ಕುಮುದಾ ಧರ್ಮಪ್ಪ ಪ್ರಮುಖರಾದ ಆರ್.ಪಿ. ಚಂದ್ರಶೇಖರ್ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.