ಮಡಿಕೇರಿ, ಜು. 22: ‘ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು... ‘ನೆಲವ ಬಿಟ್ಟು ನೀರ ಮೇಲೆ ಬಂಡಿ ಹೋಗದು....’ ಇದು ‘ಹೊಂಬಿಸಿಲು’ ಚಲನಚಿತ್ರದ ಅರ್ಥಪೂರ್ಣವಾದ ಹಾಡು. ಅದರಂತೆ ಮಡಿಕೇರಿ ನಗರದ ಎಲ್ಲ ರಸ್ತೆಗಳ ಎರಡು ಬದಿಗಳಲ್ಲಿ ಚರಂಡಿಗಳಿದ್ದರೂ, ಇಲ್ಲದಿದ್ದರೂ ಮಳೆಗಾಲದಲ್ಲಿ ‘ರಸ್ತೆ ಬಿಟ್ಟು ಚರಂಡಿ ಒಳಗೆ ನೀರು ಹರಿಯದು....! ಎಂಬಂತೆ ನಗರದ ಯಾವದೇ ಚರಂಡಿಗಳಲ್ಲಿ ನೀರು ಹರಿಯದೆ ರಸ್ತೆಗಳ ಮೇಲೆಯೇ ನೀರು ಹರಿಯುತ್ತಿದೆ. ಆಡಳಿತಕ್ಕೆ ‘ಛೀ ಥೂ’ ಎಂದು ಹೊಗಳುತ್ತ ಗುಣಗಾನ ಮಾಡುವರು.ನಗರಸಭೆಯ ಹಿಂದಿನ ಅಧ್ಯಕ್ಷ ಪಿ.ಡಿ,ಪೊನ್ನಪ್ಪ ಅವರು ಅಧ್ಯಕ್ಷರಾಗಿದ್ದಾಗ ನಗರೋತ್ಥಾನ ಯೋಜನೆಯ ಅನುದಾನದಲ್ಲಿ ನಗರದ ಬಹುತೇಕ ಕಡೆಗಳಲ್ಲಿ ಕಾಂಕ್ರಿಟ್ ಚರಂಡಿಗಳನ್ನೇನೋ ನಿರ್ಮಿಸಿದರು. ಆದರೆ, ಗುತ್ತಿಗೆದಾರರು ನಿರ್ಮಿಸಿದ ಚರಂಡಿಗಳಿಗೆ ನೀರು ಹರಿಯಲು ಸಂಪರ್ಕ ಕಲ್ಪಿಸಲಿಲ್ಲ. ಅವೈಜ್ಞಾನಿಕವಾಗಿ ಚರಂಡಿಗಳನ್ನು ನಿರ್ಮಿಸಿ ಸರಕಾರದ ಅನುದಾನವನ್ನು ವೆಚ್ಚ ಮಾಡಿದರು.
ಅವೈಜ್ಞಾನಿಕವಾಗಿ ನಿರ್ಮಿಸಿದ ಚರಂಡಿಗಳಲ್ಲಿ ನೀರು ಹರಿಯುತ್ತಿಲ್ಲ ಎಂಬದು ಸಾರ್ವಜನಿಕರು ಹೆಜ್ಜೆ ಹೆಜ್ಜೆಗೂ ಅಸಮಾಧಾನದಿಂದ ಹಿಡಿಶಾಪ ಹಾಕುತ್ತ ‘ಮಾಡಿದ ಕೆಲಸವನ್ನು ಅಚ್ಚುಕಟ್ಟಾಗಿ, ಕ್ರಮ ಬದ್ಧವಾಗಿ ಪ್ರಯೋಜನವಾಗುವಂತೆ ಮಾಡಿದ್ದರೆ ಇಂದು ಹೀಗೆ ಅವ್ಯವಸ್ಥೆಯ ಆಗರವಾಗುತ್ತಿರಲಿಲ್ಲ’ ಎಂದು ಹೇಳುತ್ತಿದ್ದಾರೆ.
ಚರಂಡಿಗಳ ಮೇಲೆ ಹಾಸಿರುವ ಸ್ಲ್ಯಾಬ್‍ಗಳ ಮೇಲೆ ಕಾಡು ಬೆಳೆದು ಕಣ್ಮರೆಯಾಗಿವೆ. ಅವುಗಳ ಮೇಲೆ ಯಾರೂ ನಡೆಯಲಾಗದಷ್ಟು ಕಾಡು ಪಾಲಾಗಿವೆ. ಮತ್ತೆ ಎಷ್ಟೋ ಕಡೆಗಳಲ್ಲಿ ರಸ್ತೆ ಬದಿ ಮಣ್ಣು ಕುಸಿದು ಸ್ಲ್ಯಾಬ್‍ಗಳನ್ನೇ ಮುಚ್ಚಿಕೊಂಡಿವೆ.
ರೇಸ್‍ಕೋರ್ಸ್ ರಸ್ತೆಯುದ್ದಕ್ಕೂ ಚರಂಡಿ ವ್ಯೆವಸ್ಥೆಯಿಲ್ಲದೆ ಮಳೆ ನೀರು ಇತ್ತೀಚೆಗೆ ಡಾಮರೀಕರಣ ಮಾಡಿದ ರಸ್ತೆ ಮೇಲೆಯೇ ಹರಿಯುತ್ತಿದೆ. ಇತ್ತೀಚೆಗೆ ರಸ್ತೆ ಅಗಲೀಕರಣ ಸಂದರ್ಭ ಮಣ್ಣು ತೆಗೆಯಲ್ಪಟ್ಟಿದ್ದರಿಂದ ಮುಖ್ಯವಾಗಿ ರಸ್ತೆ ಅಗಲೀಕರಣ ಸಂದರ್ಭ ಚರಂಡಿ ನಿರ್ಮಿಸದೆ ಇರುವದರಿಂದ ಮಣ್ಣು ಮಳೆನೀರಿನೊಂದಿಗೆ ಕೊಚ್ಚಿ ರಸ್ತೆ ಮೇಲೆಲ್ಲ ಹರಿಯುತ್ತಿದೆ. ಇದು ಹೀಗೆಯೇ ಮುಂದುವರಿದರೆ ಚೆನ್ನಾಗಿರುವ ರಸ್ತೆ ದುರಸ್ತಿಗೊಳಗಾಗುವದು ಖಚಿತ.
ವಾಹನಗಳು ಚಲಿಸುವಾಗ ಚಕ್ರಗಳ ಅಡಿಗೆ ಸಿಕ್ಕ ಕೆಸರಿನ ನೀರು ರಸ್ತೆ ಬದಿಗಳಲ್ಲಿ ನಡೆದುಹೋಗುವವರ ಮೇಲೆ ಸಿಂಚನಗೊಳ್ಳುತ್ತ ವಾಹನಗಳ ಚಾಲಕರುಗಳಿಗೆ ಬೈಗಳ ಸುರಿಮಳೆಯಾಗುತ್ತದೆ.
ರೇಸ್‍ಕೋರ್ಸ್ ರಸ್ತೆಯಲ್ಲಿ ಹರಿದ ನೀರು ಕೆಳಗಿನ ಹಳೇ ಇಂಡಿಯನ್ ಗ್ಯಾಸ್ ರಸ್ತೆಗೆ ಹರಿದು ಆ ಕೆಳಗಿನ ರಸ್ತೆ ಕೂಡ ಹಾನಿಯಾಗುತ್ತಿದೆ. ಅಷ್ಟಲ್ಲದೆ, ಇಲ್ಲಿ ಮೇಲಿನಿಂದ ಹರಿದು ಬಂದ ನೀರು ರಸ್ತೆಯಲ್ಲೇ ಸಂಗ್ರಹಗೊಂಡು ರಸ್ತೆಯಲ್ಲಿ ಹೋಗಿ-ಬರುವವರ ಮೇಲೆ ರಾಚುತ್ತಿದೆ. ಪಕ್ಕದ ಮನೆಗಳ ಮೇಲೂ ನೀರು ರಾಚುತ್ತಿದೆ.
ಇದೇ ಪರಿಸ್ಥಿತಿಯನ್ನು ನಗರದ ಬಹುತೇಕ ಕಡೆಗಳಲ್ಲಿ ಕಾಣಬಹುದು. ಇದಕ್ಕೆ ನಗರಸಭೆ ಆಡಳಿತ ವೈಖರಿಯೇ ನೇರ ಹೊಣೆಯಾಗುತ್ತದೆ. ರಸ್ತೆ ಮತ್ತು ಚರಂಡಿಗಳ ನಿರ್ವಹಣೆ ಸಮರ್ಪಕವಾಗಿದ್ದರೆ ಇಂದು ಈ ಸ್ಥಿತಿ ಬರುತ್ತಿರಲಿಲ್ಲ.
ಮುಂದಾದರೂ ನಗರಸಭೆಯ ಆಡಳಿತಾಧಿಕಾರಿಯವರು ಇಂತಹ ಅವೈಜ್ಞಾನಿಕದಿಂದ ನಿರ್ಮಾಣಗೊಂಡ ಚರಂಡಿಗಳನ್ನು ಪರಿಶೀಲನೆ ಮಾಡಿ ಸೂಕ್ತ ಕ್ರಮ ಕೈಗೊಂಡು ರಸ್ತೆಗಳ ಮೇಲೆ ಮಳೆ ನೀರು ಹರಿಯದಂತೆ ಚರಂಡಿಗಳಿಗೆ ಮಳೆ ನೀರು ಸಂಪರ್ಕಿಸುವಂತೆ ಮಾಡಬೇಕಾಗುತ್ತದೆ.
ರಸ್ತೆಗಳಲ್ಲಿ ಪಾಚಿ
ಮಡಿಕೇರಿ ನಗರದೊಳಗೆ ಸಾಕಷ್ಟು ಬೀದಿಗಳು, ಗಲ್ಲಿಗಳು ಇದ್ದು ಅಲ್ಲಿ ಮೆಟ್ಟಿಲುಗಳಿಗೆ, ಈಗ ಕಾಂಕ್ರಿಟ್ ಮಾಡಲಾಗಿದೆ. ಅವುಗಳು ಪಾಚಿ ಅಂಟಿ ನಡೆಯಲಾಗದಷ್ಟು ಜಾರುತ್ತಿದೆ. ಇದರೊಂದಿಗೆ ಈ ಬೀದಿಗಳ ಮತ್ತು ಗಲ್ಲಿಗಳ ಸಂಪರ್ಕ ರಸ್ತೆಗಳ ಎರಡೂ ಬದಿಗಳಲ್ಲಿ ಕಾಡು ತುಂಬಿಕೊಂಡಿವೆ. ಈ ರಸ್ತೆಗಳಲ್ಲಿ ಹೆಚ್ಚಾಗಿ ಶಾಲಾ- ಕಾಲೇಜುಗಳಿಗೆ ತೆರಳುವ, ಕಚೇರಿ ಕೆಲಸಗಳಿಗೆ ಹೋಗಿ- ಬರುವದರಿಂದ ಈ ರಸ್ತೆ, ದಾರಿಗಳಿಗೆ ‘ಬ್ಲೀಚಿಂಗ್’ ಪುಡಿ ಹಾಕಿ ಜಾರದಂತೆ ಮಾಡಬೇಕು ಮತ್ತು ಬೆಳೆದು ನಿಂತಿರುವ ಕಾಡನ್ನು ಕಡಿದು ಸ್ವಚ್ಛಗೊಳಿಸಬೇಕೆಂದು ಸಾರ್ವಜನಿಕರು ಸಲಹೆ ಮಾಡಿದ್ದಾರೆ.
-ಶ್ರೀವತ್ಸ