*ಗೋಣಿಕೊಪ್ಪಲು, ಜು. 22: ಬಾಳೆಲೆ ವಿಜಯಲಕ್ಷ್ಮಿ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಸೋಮವಾರ ಮಳೆ ನೀರು ಸಂಗ್ರಹ ಮತ್ತು ಸಂರಕ್ಷಣೆ ಬಗ್ಗೆ ಬೃಹತ್ ಜನ ಜಾಗೃತಿ ಜಾಥಾ ನಡೆಯಿತು.

ಗ್ರಾಮ ಪಂಚಾಯತಿ ಸಹಯೋಗದೊಂದಿಗೆ ನಡೆದ ಜಾಥಾವನ್ನು ಬಾಳೆಲೆ ಸೆಂಟರ್ ಎಜುಕೇಷನ್ ಸೊಸೈಟಿ ಅಧ್ಯಕ್ಷ ಅಳಮೇಂಗಡ ಬೋಸ್ ಮಂದಣ್ಣ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಅಲ್ಲಲ್ಲೆ ಕೃಷಿಹೊಂಡ ಮತ್ತು ಇಂಗು ಗುಂಡಿಗಳನ್ನು ನಿರ್ಮಿಸಿ ಮಳೆ ನೀರನ್ನು ಸಂರಕ್ಷಿಸಬೇಕಾಗಿದೆ. ಇದರ ಜತೆಗೆ ನೀರಿನ ಶುದ್ಧೀಕರಣವೂ ಮುಖ್ಯವಾಗಿದೆ. ಕೆಲವರು ತ್ಯಾಜ್ಯಗಳನ್ನು ನದಿಗೆ ಎಸೆದು ಹೋಗುತ್ತಿದ್ದಾರೆ. ಇದರಿಂದ ನೀರು ಮಲಿನಗೊಂಡು ಹಲವು ರೋಗ ರುಜಿನಗಳಿಗೆ ದಾರಿಯಾಗುತ್ತದೆ. ಇದರ ಬಗೆಗೂ ಜನತೆಗೆ ಅರಿವು ಮೂಡಿಸಬೇಕಾಗಿದೆ ಎಂದರು.

ಎಜುಕೇಷನ್ ಸೊಸೈಟಿ ನಿರ್ದೇಶಕ ಮಾಚಂಗಡ ಸುಜಾ ಪೂಣಚ್ಚ ಮಾತನಾಡಿ ಹಿಂದೆ ಕೊಡಗಿನಲ್ಲಿ 100 ಅಡಿ ಕೊಳವೆ ಬಾವಿ ತೋಡಿದ್ದರೆ ಸಾಕಾಗುವಷ್ಟು ನೀರು ಲಭಿಸುತಿತ್ತು. ಇಂದು 300 ಅಡಿ ಆಳ ಕೊರೆದರೂ ನೀರು ಲಭಿಸುವದಿಲ್ಲ. ಮಳೆಗಾಲದಲ್ಲಿ ವ್ಯರ್ಥವಾಗಿ ಹರಿದು ಹೋಗುವ ನೀರನ್ನು ತಡೆಗಟ್ಟಿ ಭೂಮಿಗೆ ಇಂಗಿಸದಿದ್ದರೆ ಮುಂದೆ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಳ್ಳಲಿದೆ. ಇಂತಹ ಸಮಸ್ಯೆ ಉದ್ಭವವಾಗದಂತೆ ನೀರಿನ ಸಂರಕ್ಷಣೆ ಬಗ್ಗೆ ಗಮನಹರಿಸುವದು ಮುಖ್ಯ ಎಂದರು.

ಪಿಡಿಒ ಮನಮೋಹನ್ ಮಾತನಾಡಿ ಮಳೆ ನೀರು ಸಂರಕ್ಷಣೆಗಾಗಿ ಇಂಗು ಗುಂಡಿಗಳನ್ನು ತೋಡಲು ಗ್ರಾಮ ಪಂಚಾಯಿತಿಯಿಂದ ಸಹಕಾರ ನೀಡಲಾಗುವದು. ಕೃಷಿಹೊಂಡ, ಕೆರೆಗಳ ಹೂಳೆತ್ತುವದು ಮೊದಲಾದ ಕಾಮಗಾರಿಗಳಿಗೆ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಅವಕಾಶವಿದೆ. ಇದರ ನೆರವು ಪಡೆದುಕೊಂಡು ನೀರಿನ ಸಂರಕ್ಷಣೆಗೆ ಮುಂದಾಗಬೇಕು ಎಂದು ತಿಳಿಸಿದರು.

ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮಹೇಶ್ ಕೊಕ್ಕೆಂಗಡ ಮಾತನಾಡಿ ಸಾರ್ವಜನಿಕರು ನೀರನ್ನು ಮಿತವಾಗಿ ಬಳಸಬೇಕು ಎಂದು ನುಡಿದರು.

ಅಧ್ಯಕ್ಷೆ ಕಾಂಡೇರ ಕುಸುಮಾ ಶೇಖರ್, ಸದಸ್ಯೆ ಬಿ.ಆರ್.ಸುಶೀಲಾ, ಬಾಳೆಲೆ ಸೆಂಟರ್ ಎಜುಕೇಷನ್ ಸೊಸೈಟಿ ನಿರ್ದೇಶಕ ಪೋಡಮಾಡ ಮೋಹನ್, ಪ್ರಾಂಶುಪಾಲ ಡಾ.ಜೆ. ಸೋಮಣ್ಣ, ಮುಖ್ಯ ಶಿಕ್ಷಕ ಕೆ. ಚಂದ್ರಶೇಖರ್, ಬೋಧಕರಾದ ಎಂ.ಪಿ. ರಾಘವೇಂದ್ರ ಹಾಜರಿದ್ದರು.

ವಿದ್ಯಾರ್ಥಿಗಳು, ಅಧ್ಯಾಪಕರು ಹಾಗೂ ಸಾರ್ವಜನಿಕರು ನೀರಿನ ಸಂರಕ್ಷಣೆ ಬಗ್ಗೆ ವಿವಿಧ ಘೋಷಣೆಗಳಿದ್ದ ಬ್ಯಾನರ್ ಮತ್ತು ಫಲಕಗಳನ್ನು ಹಿಡಿದು ಘೋಷಣೆ ಕೂಗುತ್ತಾ ಗ್ರಾಮದ ಮುಖ್ಯ ರಸ್ತೆಯಲ್ಲಿ ಜಾಥಾ ನಡೆಸಿದರು.