ಮಡಿಕೇರಿ, ಜು. 22: ನಗರದ ಹೊಟೇಲ್ ಚಾಯ್ಸ್ ಸಭಾಂಗಣದಲ್ಲಿ ಜಿಲ್ಲಾ ಟ್ಯಾಕ್ಸಿ ಚಾಲಕರ ಸಮಿತಿ ರಚನೆ ಸಭೆ ನಡೆಯಿತು. ರಾಜ್ಯ ಟೂರಿಸ್ಟ್ ಟ್ಯಾಕ್ಸಿ ಡ್ರೈವರ್ ಸಂಸ್ಥೆಯ ರಕ್ಷಣಾಧಿಕಾರಿ ಮಹಮ್ಮದ್ ಇಕ್ಬಾಲ್ ಮಾತನಾಡಿ; ಟ್ಯಾಕ್ಸಿ ಚಾಲಕರಿಗೆ, ರಾಜ್ಯ ಸಮಿತಿ ಸಹಕಾರ ನೀಡಲಿದೆ. ದಿನದ 24 ಗಂಟೆಯೂ ನಿಮಗೆ ಸೇವೆ ಸಲ್ಲಿಸಲು ಬದ್ಧವಾಗಿದ್ದೇವೆ ಎಂದು ಭರವಸೆ ನೀಡಿದರು.
ರಾಜ್ಯದಾದ್ಯಂತ ಪ್ರತಿಯೊಂದು ಜಿಲ್ಲೆಯಲ್ಲಿಯೂ ವಿಭಾಗೀಯ ಸಮಿತಿ ನೇಮಿಸಿದ್ದು; ಟ್ಯಾಕ್ಸಿ ಚಾಲಕರು ಸಂಘಟಿತರಾಗಬೇಕು. ಜತೆಗೆ ಟ್ಯಾಕ್ಸಿ ಚಾಲಕರು ಸಂಚಾರಿ ನೀತಿ - ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಕರೆ ನೀಡಿದರು.
ಟೂರಿಸ್ಟ್ ಟ್ಯಾಕ್ಸಿ ಡ್ರೈವರ್ ಸಂಸ್ಥೆಯ ರಾಜ್ಯ ಘಟಕದ ಅಧ್ಯಕ್ಷ ರಮೇಶ್ ಕುಂದಾಪುರ ಮಾತನಾಡಿ, ಟ್ಯಾಕ್ಸಿ ಚಾಲಕರು ಹಗಲು, ರಾತ್ರಿ ಕಷ್ಟಪಟ್ಟು ದುಡಿದು ಸರ್ಕಾರಕ್ಕೆ ತೆರಿಗೆ ಸಲ್ಲಿಸುತ್ತಾರೆ. ಆದರೆ, ಸರ್ಕಾರ ಟ್ಯಾಕ್ಸಿ ಚಾಲಕರನ್ನು ನಿರ್ಲಕ್ಷಿಸುತ್ತಿದ್ದು, ಯಾವದೇ ಸೌಲಭ್ಯ ನೀಡುತ್ತಿಲ್ಲ ಎಂದು ವಿಷಾದಿಸಿದರು. ಇದೇ ಸಂದರ್ಭ ಅಪಘಾತಕ್ಕೀಡಾಗಿದ್ದ ಟ್ಯಾಕ್ಸಿ ಚಾಲಕರೊಬ್ಬರ ಕುಟುಂಬಕ್ಕೆ ಸಹಾಯಧನ ವಿತರಣೆ ಮಾಡಲಾಯಿತು.
ಸಭೆಯಲ್ಲಿ ರಾಜ್ಯ ಖಜಾಂಚಿ ಹರೀಶ್, ರಾಜ್ಯ ಪದಾಧಿಕಾರಿ ಪ್ರಸಾದ್, ರಾಜ್ಯ ಪ್ರಧಾನ ಕಾರ್ಯದರ್ಶಿ ಆರಿಫ್, ಮಡಿಕೇರಿ ತಾಲೂಕು ಅಧ್ಯಕ್ಷ ಸಂಪತ್ ಸೇರಿದಂತೆ ಕೊಡಗು ಜಿಲ್ಲೆಯ ಟ್ಯಾಕ್ಸಿ ಚಾಲಕರು ಪಾಲ್ಗೊಂಡಿದ್ದರು.