ಮಡಿಕೇರಿ, ಜು. 22: ಒಂದು ಕಾಲದಲ್ಲಿ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಪುಸ್ತಕಗಳನ್ನು ಓದುವವರಿದ್ದರು. ಎಲ್ಲಾ ರೀತಿಯ ಪುಸ್ತಕವನ್ನು ಕೊಂಡು ಓದುತ್ತಿದ್ದರು. ಪುಸ್ತಕಕ್ಕಾಗಿ ಮತ್ತು ಪತ್ರಿಕೆಗಳಿಗಾಗಿ ಕಾದು ನಿಂತುಕೊಂಡು ಓದುವ ಹವ್ಯಾಸವನ್ನು ಬೆಳೆಸಿಕೊಂಡಿದ್ದರು. ಆದರೆ, ಈಗ ಯಾವದೇ ಪುಸ್ತಕಗಳನ್ನಾಗಲೀ, ಹಲವು ಪತ್ರಿಕೆಗಳನ್ನಾಗಲೀ ಓದುವವರಿಲ್ಲ...... ಕೊಳ್ಳುವವರಿಲ್ಲ.... ಇತ್ತ ಮುಖ ಹಾಕುವವರೇ ಇಲ್ಲ.
ಊಟ, ನಿದ್ದೆಯನ್ನು ಸಮಯಕ್ಕೆ ಸರಿಯಾಗಿ ಮಾಡದಿದ್ದರೂ ಪುಸ್ತಕಗಳನ್ನು ಮತ್ತು ಪತ್ರಿಕೆಗಳನ್ನು ಬಿಡುತ್ತಿರಲಿಲ್ಲ. ಬಹುತೇಕ ಮಂದಿಗೆ ಮುಂಜಾನೆ ವೇಳೆ ದಿನ ಪತ್ರಿಕೆಗಳ ಮೇಲೆ ಕಣ್ಣಾಡಿಸದಿದ್ದಲ್ಲಿ ಬೆಳಗಿನ ಪ್ರಕ್ರಿಯೆ ಸರಿಯಾಗಿ ನಡೆಯುತ್ತಿರಲಿಲ್ಲ. ಕುಡಿದ ಕಾಫಿ, ತಿಂಡಿ ಮೈಗೆ ಸೇರುತ್ತಿರಲಿಲ್ಲ. ಏನನ್ನೋ ಕಳೆದು ಕೊಂಡವರಂತೆ ಕಸಿವಿಸಿ ಗೊಳಗಾಗುತ್ತಿದ್ದರು. ಏನಿದ್ದರೂ ಅಂದಿನ ದಿನ ಪತ್ರಿಕೆಗಳನ್ನು ಓದಿದ ನಂತರವೇ ಮುಂದಿನ ಚಟುವಟಿಕೆ ಗಳತ್ತ ಮನಸ್ಸು ಮಾಡುತ್ತಿದ್ದರು.
ಇನ್ನು ಕೆಲವರಿಗೆ ವಾರ, ಮಾಸಿಕ ಮತ್ತು ತ್ರೈಮಾಸಿಕಗಳನ್ನು ಓದುವ ಹವ್ಯಾಸವಿದ್ದು ಅವುಗಳನ್ನು ಕೂಡ ನಿಗದಿತ ಸಮಯದಲ್ಲಿ ಓದದಿದ್ದರೆ ಮೌಲ್ಯವುಳ್ಳ ವಸ್ತುಗಳನ್ನು ಕಳೆದು ಕೊಂಡವರಂತೆ ಮತ್ತು ಏನನ್ನೋ ಮರೆತವರಂತೆ ಗಲಬಿಲಿ ಗೊಳ್ಳುತ್ತಿದ್ದರು.
ಪುಸ್ತಕಗಳ ಮತ್ತು ಪತ್ರಿಕೆಗಳ ಮಳಿಗೆಗಳು ಜ್ಞಾನ ಭಂಡಾರವಿದ್ದಂತೆ. ಎಲ್ಲಿ ಪುಸ್ತಕಗಳು ಮತ್ತು ಪತ್ರಿಕೆಗಳು ಇರುತ್ತವೋ ಅಲ್ಲಿ ಸಾಕ್ಷಾತ್ ಸರಸ್ವತಿ ಮಾತೆಯಿದ್ದಂತೆ, ಶಾಲೆಗಳು ವಿದ್ಯಾ ಮಂದಿರಗಳಿದ್ದಂತೆ ಇಲ್ಲಿಂದ ಪ್ರತಿಯೊಬ್ಬರಿಗೂ ಜ್ಞಾನದ ಉದಯವಾಗುವ ‘ಸನ್ನಿಧಿ’ಯಾಗಿದೆ ಎಂದು ಶಿಕ್ಷಣ ತಜ್ಞರ, ಹಿರಿಯರ ಅಂಬೋಣವಾಗಿದೆ.
ಮಡಿಕೇರಿ ಹಳೆಯ ಖಾಸಗಿ ಬಸ್ ನಿಲ್ದಾಣದಲ್ಲಿ ಶ್ರೀ ನೀಲಕಂಠೇಶ್ವರ ಬುಕ್ ಸ್ಟೋರ್ ಎಂಬ ಪುಸ್ತಕಾಲಯ ವಿದೆ. ಇದು ನಿನ್ನೆ ಮೊನ್ನೆಯದಲ್ಲ. ಸುಮಾರು 57 ವರ್ಷಗಳನ್ನು ಪೂರೈಸಿದೆ. ಇಲ್ಲಿ ವಿವಿಧ ಪುಸ್ತಕಗಳು ಮತ್ತು ದಿನಪತ್ರಿಕೆ, ವಾರಪತ್ರಿಕೆ, ಮಾಸಿಕ, ತ್ರೈಮಾಸಿಕÀ ಮತ್ತು ವಾರ್ಷಿಕ ಹೀಗೆ ವಿವಿಧ ಬಗೆಯ ಮ್ಯಾಗಝೀನ್ಗಳ ಸಂಗ್ರಹವಿದ್ದು, ಒಂದು ಕಾಲದಲ್ಲಿ ಇಲ್ಲಿ ಬಿಡುವಿಲ್ಲದ ಪುಸ್ತಕಗಳ ಮತ್ತು ವಿವಿಧ ಪತ್ರಿಕೆಗಳ ಮಾರಾಟದ ವಹಿವಾಟು ಜೋರಾಗಿಯೇ ಇತ್ತು.
ಆದರೆ, ಇದೀಗ ಆಗಿನ ಮಾರಾಟದ ಶೇ. 10 ರಷ್ಟು ವಹಿವಾಟು ಈಗಿಲ್ಲ. ಪತ್ರಿಕೆಗಳ ಮತ್ತು ಮ್ಯಾಗಝೀನ್ಗಳ ಮಾರಾಟ ತೀರಾ ಕ್ಷೀಣಿಸಿದೆ ಎಂದು ಮಾಲೀಕ ಎಂ.ಎನ್. ಸುರೇಶ್ ತಮ್ಮ ಅನಿಸಿಕೆಯನ್ನು ಬಿಚ್ಚಿಟ್ಟಿದ್ದಾರೆ.
ಬಹುಶಃ ಕೊಡಗಿನ ಪ್ರಪ್ರಥಮ ಬುಕ್ ಸ್ಟೋರ್ ಆಗಿದ್ದ ಶ್ರೀ ನೀಲಕಂಠೇಶ್ವರ ಬುಕ್ ಸ್ಟೋರ್ನ್ನು 1962ರಲ್ಲಿ ಎಂ.ಆರ್. ಮಂಜಪ್ಪ ಅವರು ಆರಂಭಿಸಿದ್ದರು. ಅವರು ಸುಮಾರು 15 ವರ್ಷಗಳ ಕಾಲ ನಡೆಸಿದ ಬುಕ್ ಸ್ಟೋರ್ ಅನ್ನು ಆನಂತರ ಅವರ ಪುತ್ರ ಎಂ.ಎಂ. ನೀಲಕಂಠ ಅವರು ಅಲ್ಪಕಾಲದವರೆಗೆ ನಡೆಸಿ 1977 ರಿಂದ ಅವರ ಮತ್ತೊಬ್ಬ ಪುತ್ರ ಎಂ.ಎನ್. ಸುರೇಶ್ ಅವರು ಮುಂದುವರೆಸಿ ಇದುವರೆಗೂ ಯಶಸ್ವಿಯಾಗಿ ಮುನ್ನಡೆಸಿದ್ದಾರೆ.
ಆರಂಭದ ದಿನಗಳಲ್ಲಿ ಆಗಿನ ಖ್ಯಾತ ಆಂಗ್ಲ ಪತ್ರಿಕೆಗಳಾದ ‘ಇಲ್ಲೆಸ್ಟ್ರೆಡ್ ವೀಕ್ಲಿ’, ‘ಫೆಮಿನಾ’ ಫ್ರೆಂಟ್ ಲೈನ್, ವೀಕ್, ಹೆಚ್ಚು ಸೇಲಾಗುತ್ತಿತ್ತು. ಆಗ 1,500ಕ್ಕೂ ಹೆಚ್ಚು ಪ್ರಸಾರವಿದ್ದ ‘ಪ್ರಜಾಮತ’ ಮತ್ತು 1,700ಕ್ಕೂ ಪ್ರಸಾರವಿದ್ದ ‘ತರಂಗ’ ‘ಸುಧಾ’, ‘ಕರ್ಮವೀರ’, ‘ಕಸ್ತೂರಿ’, ತುಷಾರ ಹೀಗೆ ಉತ್ತಮ ಮ್ಯಾಗಝಿನ್ಗಳನ್ನು ಓದುಗರು ಅಂದು ಕಾದುನಿಂತು ಖರೀದಿಸುತ್ತಿದ್ದರು.
ಆನಂತರದ ವರ್ಷಗಳಲ್ಲಿ ‘ಮಂಗಳ’ ‘ಹಾಯ್ ಬೆಂಗಳೂರು’ ಪೊಲೀಸ್ ನ್ಯೂಸ್, ಲಂಕೇಶ್, ಖ್ಯಾತ ಪತ್ತೇದಾರಿ ಕಾದಂಬರಿಕಾರರಾದ ಬಿ.ವಿ. ಅನಂತರಾಮ್, ಇನ್ನೂ ಹಲವಾರು ಖ್ಯಾತ ಕಾದಂಬರಿಕಾರರು ರಚಿಸಿದ ಕಾದಂಬರಿಗಳನ್ನು, ಕಥೆ ಪುಸ್ತಕಗಳನ್ನು, ಇನ್ನಿತರ ಲೇಖನಗಳ ಪುಸ್ತಕಗಳನ್ನು ನೂರಾರು ಸಂಖ್ಯೆಯಲ್ಲಿ ಖರೀದಿಸುತ್ತಿ ದ್ದರು. ಆದರೆ, ಈಗ ಅವುಗಳನ್ನು ಕೂಡ ಕಾದು ಖರೀದಿಸುತ್ತಿದ್ದ ಓದುಗರ ಸಂಖ್ಯೆ ಕ್ಷೀಣಗೊಂಡಿದೆ. ಒಟ್ಟಾಗಿ ಆಗಿದ್ದ ಸೇಲ್ಸ್ ಇದೀಗ ಶೇ. 10 ರಷ್ಟಕ್ಕೆ ಇಳಿದಿದೆ. ಈಗ ಪತ್ರಿಕೆಗಳಿಗಾಗಿ ಕಾಯುವವರಿಲ್ಲ, ಖರೀದಿಸುವವರಿಲ್ಲ ಎನ್ನಲು ನೋವಾಗುತ್ತಿದೆ ಎಂದು ಸುರೇಶ್ ಅವರು ವಿಷಾದ ವ್ಯಕ್ತಪಡಿಸುತ್ತಾರೆ.
ಪ್ರಸ್ತುತ ಆಗಿನ ಕೆಲವೇ ಮಂದಿಯಿದ್ದ ಓದುಗರು ಮಾತ್ರ ದಿನಪತ್ರಿಕೆಗಳನ್ನು, ಮ್ಯಾಗಝೀನ್ ಗಳನ್ನು ಖರೀದಿಸಲು ಬರುತ್ತಾರೆ ಎಂದು ಸುರೇಶ್ ಹೇಳುತ್ತಾರೆ.
ಹಿಂದಿನ ಕಾಲದಲ್ಲಿದ್ದ ಚಂದ ಮಾಮ, ಬಾಲಮಿತ್ರ, ಬೊಂಬೆಮನೆ ಇನ್ನಿತರ ಮಕ್ಕಳ ಮ್ಯಾಗಝೀನ್ ಗಳನ್ನು ಓದುತ್ತಿದ್ದ ಮಕ್ಕಳು ಈಗ ಈ ಮ್ಯಾಗಝೀನ್ಗಳನ್ನು ಖರೀದಿಸಲು ಬರುವದಿಲ್ಲ. ಮಿಗಿಲಾಗಿ ಇಂತಹ ಪುಸ್ತಕಗಳನ್ನು ಓದುವ ಹವ್ಯಾಸವನ್ನೇ ಮೈಗೂಡಿಸಿ ಕೊಂಡಂತಿಲ್ಲ. ಬದಲಾಗಿ ಈಗ ಮನೆಗಳಲ್ಲಿ ಕೇವಲ ಮೊಬೈಲ್ಗಳಲ್ಲೇ ಮೈಮರೆಯುತ್ತಿದ್ದಾರೆ ಎಂದು ವಿಶ್ಲೇಷಿಸುತ್ತಾರೆ.
ಆಗಿನ ಕಾಲದಲ್ಲಿ ಆಸಕ್ತ ಕಾದಂಬರಿ ಓದುಗರು ಸೇರಿದಂತೆ ಹೆಚ್ಚಾಗಿ ಮಹಿಳೆಯರು ಆ ಕಾಲದ ಖ್ಯಾತ ಕಾದಂಬರಿಕಾರರಾದ ಹೆಚ್.ಜಿ. ರಾಧದೇವಿ, ಸಿ.ಎನ್. ಮುಕ್ತ, ಸಾಯಿಸುತೆ, ಉಷಾ ನವರತ್ನರಾವ್, ತಾರಾಸು, ಬಿ.ಎ. ಮಧು, ಯಂಡಮೂರಿ ವಿಶ್ವನಾಥ್ ಇನ್ನಿತರ ಖ್ಯಾತ ಕಾದಂಬರಿಕಾರರು ಬರೆಯುತ್ತಿದ್ದ ಕಾದಂಬರಿಗಳನ್ನು ಅಂದಾಜು 100ಕ್ಕೂ ಹೆಚ್ಚು ಮಂದಿ ಕುತೂಹಲದಿಂದ ಕಾದಂಬರಿಗಳ ಬೆಲೆ 15-20-30 ರೂ.ಗಳನ್ನು ನೀಡಿ ಕೊಂಡು ಓದುತ್ತಿದ್ದರು. ಈಗ 150-200 ರೂ.ಗಳನ್ನು ನೀಡಿ ಕಾದಂಬರಿ ಗಳನ್ನು ಕೊಂಡು ಓದುವವರು ಈಗ ಶೇ. 10 ರಷ್ಟಿಲ.
‘ಶಕ್ತಿ’ ಬೇಕು!: ಪತ್ರಿಕೆಗಳ ಬಗ್ಗೆ ಮಾತನಾಡುವದಾದರೆ ಸ್ಥಳೀಯ ದಿನಪತ್ರಿಕೆಗಳಲ್ಲಿ ‘ಶಕ್ತಿ’ ದಿನ ಪತ್ರಿಕೆಯನ್ನೇ ಜಿಲ್ಲೆಯ ಬಹುತೇಕ ಪತ್ರಿಕೆಗಳನ್ನು ಓದುವವರು ಕೇಳುತ್ತಾರೆ. ಪ್ರತಿದಿನವೂ ಗ್ರಾಮ ಮತ್ತು ನಗರ ಪ್ರದೇಶಗಳಿಂದ ಬರುವವರು ಎಲ್ಲರೂ ಮೊದಲು ‘ಶಕ್ತಿ’ ಪತ್ರಿಕೆಯನ್ನೇ ಕೇಳುತ್ತಾರೆ. ಕೆಲವರು ಗ್ರಾಮಾಂತರ ಪ್ರದೇಶಗಳ ಪತ್ರಿಕೆ ಓದುವವರು ಬೆಳಿಗ್ಗೆಯೇ ‘ಶಕ್ತಿ’ ಪತ್ರಿಕೆಯನ್ನು ಕಾದಿರಿಸಿ ಸಂಜೆ ಶಾಲಾ-ಕಾಲೇಜು ಗಳನ್ನು ಮುಗಿಸಿ ಮನೆಗಳಿಗೆ ತೆರಳುವಾಗ ಕೊಂಡೊಯ್ಯುವ ಕಾಲ ಈಗಲೂ ಇದೆ.
ಸ್ಟಾಲ್ನ್ನು ಮುಚ್ಚಿ ಮನೆಲಿ ಸುಮ್ನೆ ಇದ್ದು ಬಿಡುವ ಅಂತನ್ನಿಸುತ್ತಿದೆ
ವ್ಯಾಪಾರವಿಲ್ಲದೆ ಅಂಗಡಿಲಿ ಸುಮ್ನೆ ಕೂತು ಬೇಸರವುಂಟಾಗಿದೆ. ಸುಮಾರು 57 ವರ್ಷಗಳ ಕಾಲ ಮುನ್ನಡೆಸಿದ ಬುಕ್ ಸ್ಟೋರ್ಲ್ಲಿ ಇದೀಗ ವ್ಯಾಪಾರವಿಲ್ಲದೆ ಅಂಗಡಿ ಯನ್ನು ಮುಚ್ಚಿ ಮನೆಯಲ್ಲಿ ಸುಮ್ನೆ ಇದ್ದು ಬಿಡುವ ಎಂದೆನಿಸುತ್ತಿದೆ ಎನ್ನುತ್ತಾರೆ ಸುರೇಶ್.
-ಶ್ರೀಧರ್ ಹೂವಲ್ಲಿ