ಮಡಿಕೇರಿ, ಜು. 22: ಜಿಲ್ಲೆಯ ಕೆಲವೆಡೆ ಇಂದು ಮಳೆಯಾಗಿದೆ. ಮಡಿಕೇರಿ, ಭಾಗಮಂಡಲ, ಸಂಪಾಜೆ, ನಾಪೋಕ್ಲು, ಕರಿಕೆ, ಸಿದ್ದಾಪುರ ವ್ಯಾಪ್ತಿಯಲ್ಲಿ ಮಳೆ ಸುರಿದಿದೆ. ಅಯ್ಯಂಗೇರಿ ನಿವಾಸಿ ಮಹಮ್ಮದ್ ಎಂಬವರ ಮನೆಗೆ ಹಾನಿಯಾಗಿದ್ದು, ಕಂದಾಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿರುವದಾಗಿ ತಿಳಿದು ಬಂದಿದೆ. ಭಾಗಮಂಡಲ ವ್ಯಾಪ್ತಿಯಲ್ಲಿ ಎಡೆಬಿಡದೆ ಮಳೆ ಮುಂದುವರೆದಿದ್ದು, ಸಂಗಮದಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ನಾಪೋಕ್ಲು-ಭಾಗಮಂಡಲ ರಸ್ತೆಯಲ್ಲಿ ಒಂದು ಅಡಿ ನೀರು ಹರಿಯುತ್ತಿದೆ. ಮೇಲ್ಸೇತುವೆ ಕಾಮಗಾರಿ ಹಿನ್ನೆಲೆ ಅಲ್ಲಲ್ಲಿ ಹೊಂಡಗಳಾಗಿದ್ದು, ವಾಹನ ಸಂಚಾರಕ್ಕೆ ತೊಂದರೆಯುಂಟಾಗಿದೆ.
ಸಿದ್ದಾಪುರದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಕಾವೇರಿ ನದಿಯ ನೀರಿನ ಮಟ್ಟ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಅಮ್ಮತ್ತಿ ಹೋಬಳಿ ಕಂದಾಯ ಪರಿವೀಕ್ಷಕ ಅನಿಲ್ ಕುಮಾರ್ ಕರಡಿಗೋಡು ಗ್ರಾಮದ ನದಿ ತಟಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೂಡಿಗೆ ವ್ಯಾಪ್ತಿಯಲ್ಲಿ ಮೋಡ ಕವಿದ ವಾತಾವರಣ ದೊಂದಿಗೆ ತುಂತುರು ಮಳೆಯಾಗಿದೆ.
ವೀರಾಜಪೇಟೆ: ವೀರಾಜಪೇಟೆ ವಿಭಾಗದಲ್ಲಿ ಬೆಳಗಿನಿಂದಲೇ ಮೋಡ ಕವಿದ ವಾತಾವರಣ ಮುಂದುವರೆದಿದ್ದು ಅಲ್ಪ ಸಮಯ ಬಿಡುವು ನೀಡಿದ ನಂತರ ಮಳೆ ನಿರಂತರವಾಗಿ ಮುಂದುವರೆದಿದೆ.
ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯ ಪರಿಣಾಮ ಇಲ್ಲಿನ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿರುವ
(ಮೊದಲ ಪುಟದಿಂದ) ಬಾವಿಗಳಲ್ಲಿ ನೀರಿನ ಮಟ್ಟ ಏರುತ್ತಿದೆ. ಇಲ್ಲಿನ ಮಾಂಸ ಮಾರುಕಟ್ಟೆ ಬಳಿಯಿರುವ ರಾಜಾ ಕಾಲುವೆಯೂ ನೀರಿನಿಂದ ತುಂಬಿ ಹರಿಯುತ್ತಿದೆ. ಮೊಗರಗಲ್ಲಿ, ಮೂರ್ನಾಡು ರಸ್ತೆಯ ಮಠದ ತೋಡು, ಸಂತ ಅನ್ನಮ್ಮ ದೇವಾಲಯಕ್ಕೆ ಸೇರಿದ ಜಾಗದ ಬಳಿಯ ತೋಡು ನೀರಿನಿಂದ ತುಂಬಿ ಹರಿಯುತ್ತಿದೆ.
ಸೋಮವಾರಪೇಟೆಯ ಪಶ್ಚಿಮ ವ್ಯಾಪ್ತಿಯಲ್ಲಿ ಮಳೆ ಮುಂದುವರೆದಿದೆ. ಪುಷ್ಪಗಿರಿ ಬೆಟ್ಟಶ್ರೇಣಿ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಕೃಷಿ ಕಾರ್ಯ ಚುರುಕುಗೊಂಡಿದೆ. ತಾಲೂಕಿನ ಪೂರ್ವ ಭಾಗದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಮಳೆಯಾಗದೇ ಕೃಷಿ ಚಟುವಟಿಕೆ ಮಂದಗತಿಯಲ್ಲಿ ಸಾಗುತ್ತಿದೆ.
ತಾಲೂಕಿನ ಶಾಂತಳ್ಳಿ ಹೋಬಳಿ, ಸೋಮವಾರಪೇಟೆ ಕಸಬ, ಕೊಡ್ಲಿಪೇಟೆ, ಶನಿವಾರಸಂತೆ, ಸುಂಟಿಕೊಪ್ಪ ಹೋಬಳಿಯ ಗರ್ವಾಲೆ, ಸೂರ್ಲಬ್ಬಿ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗುತ್ತಿದ್ದರೆ, ಕುಶಾಲನಗರ ಹೋಬಳಿಯಲ್ಲಿ ಮಳೆ ಕ್ಷೀಣಗೊಂಡಿದೆ.
ಈಗಾಗಲೇ ಸುರಿದಿರುವ ಮಳೆಗೆ ಸಣ್ಣಪುಟ್ಟ ತೋಡುಗಳಲ್ಲಿ ನೀರಿನ ಹರಿವು ಕಂಡುಬರುತ್ತಿದೆ. ಸೋನೆ ಮಳೆಯಿಂದಾಗಿ ಮೋಡ ಕವಿದ ವಾತಾವರಣ ಮುಂದುವರೆದಿದ್ದು, ಆಗಾಗ್ಗೆ ಭಾರೀ ಗಾಳಿಯೊಂದಿಗೆ ಮಳೆ ಸುರಿಯುತ್ತಿದೆ.
ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಗೆ ಗ್ರಾಮೀಣ ಭಾಗದ ರಸ್ತೆಗಳು ಸಂಚಾರಕ್ಕೆ ಅಯೋಗ್ಯವಾಗಿ ಪರಿಣಮಿಸಿವೆ. ರಸ್ತೆಗಳಲ್ಲಿ ಗುಂಡಿ ನಿರ್ಮಾಣವಾಗಿದ್ದು, ಕೆಸರಿನ ನೀರು ಸಂಗ್ರಹವಾಗಿದೆ.
ತಾಲೂಕಿನ ತೋಳೂರುಶೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂತಿ ಗ್ರಾಮದಲ್ಲಿ ಕೃಷಿ ಚಟುವಟಿಕೆ ಬಿರುಸುಗೊಂಡಿದೆ. ಕಳೆದ ನಾಲ್ಕೈದು ದಿನದಿಂದ ಈ ಭಾಗದಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆ ರೈತರು ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
ತಾಲೂಕಿನ 11,600 ಹೆಕ್ಟೇರ್ ಭತ್ತ ಭೂಮಿಯಲ್ಲಿ ಪ್ರಸಕ್ತ ವರ್ಷ 10ಸಾವಿರ ಹೆಕ್ಟೇರ್ನಲ್ಲಿ ಭತ್ತ ಬೆಳೆಯುವ ಗುರಿ ಹೊಂದಲಾಗಿದೆ. ಮಳೆಯಾಶ್ರಿತ ಪ್ರದೇಶದಲ್ಲಿ 7600ಹೆ., ಹಾಗೂ ಹಾರಂಗಿ ಮತ್ತು ಚಿಕ್ಲಿಹೊಳೆ ಅಚ್ಚುಕಟ್ಟು ಪ್ರದೇಶದಲ್ಲಿ 2400 ಹೆ.ನಲ್ಲಿ ಭತ್ತ ಬೆಳೆಯುವ ಪ್ರಯತ್ನ ನಡೆಯುತ್ತಿವೆ.
ರೈತರು ತಮ್ಮ ಗದ್ದೆಗಳಲ್ಲಿ ನಾಟಿ ಮಾಡುವಾಗ 25-30 ದಿನಗಳ ಸಸಿಯನ್ನು ನಾಟಿ ಮಾಡಬೇಕು. ಒಂದು ಚದರ ಮೀಟರ್ಗೆ 50 ಗುಣಿ ಬರುವಂತೆ ಪ್ರತಿ ಗುಣಿಗೆ 2, 3 ಸಸಿಯನ್ನು ಸೇರಿಸಿ 2 ಇಂಚು ಆಳದಲ್ಲಿ ನಾಟಿ ಮಾಡಿದರೆ ಉತ್ತಮ ಇಳುವರಿ ಪಡೆಯಬಹುದು ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರಾಜಶೇಖರ್ ಮಾಹಿತಿ ಒದಗಿಸಿದ್ದಾರೆ.
ಉಳುಮೆ ಮಾಡಿರುವ ಗದ್ದೆಗಳಲ್ಲಿ ನಾಟಿ ಕಾರ್ಯ ನಡೆಯುತ್ತಿದ್ದರೆ, ಹಲವರು ಗದ್ದೆ ಉಳುಮೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕಾಫಿ ತೋಟಗಳಲ್ಲೂ ಕೆಲಸ ಕಾರ್ಯಗಳು ಚುರುಕುಗೊಂಡಿವೆ. ಹೊಸ ಚಿಗುರು ಕತ್ತರಿಸುವದು, ಗೊಬ್ಬರ, ಕ್ರಮಿನಾಶ ಹಾಕುವದು, ಬೋರರ್ ಗಿಡಗಳನ್ನು ತೆಗೆಯುವದು, ಹೊಸ ಕಾಫಿ ಗಿಡಗಳನ್ನು ನೆಡುವ ಕಾರ್ಯ ನಡೆಯುತ್ತಿದೆ.
ಮನೆ ಜಖಂ: ಸಮೀಪದ ಗರಗಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸತೋಟ ಗ್ರಾಮದಲ್ಲಿ ಮಳೆಗೆ ವಾಸದ ಮನೆಯ ಗೋಡೆ ಕುಸಿದುಬಿದ್ದಿದೆ. ಹೊಸತೋಟ ಗ್ರಾಮದ ಹಸೀನಾ ಮುಜೀಬ್ ಎಂಬವರ ಮನೆಯ ಗೋಡೆ ಅತೀ ಶೀತಕ್ಕೆ ಕುಸಿದು ಬಿದ್ದಿದೆ. ಸ್ಥಳಕ್ಕೆ ಗ್ರಾಮ ಲೆಕ್ಕಾಧಿಕಾರಿ ನಾಗೇಶ್ರಾವ್, ಸಹಾಯಕ ಮಾಂಕು, ಗ್ರಾ.ಪಂ. ಸದಸ್ಯ ಗೌತಮ್ ಶಿವಪ್ಪ, ಪ್ರಮುಖರಾದ ಸಲೀಂ ಅವರುಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.