ಮಡಿಕೇರಿ, ಜು. 22: ಕೊಡಗು ಜಿಲ್ಲಾಧಿಕಾರಿ ಹೆಸರಿನಲ್ಲಿ ನಕಲಿ ಪತ್ರವೊಂದನ್ನು ಬರೆದು ಗುಜರಾತ್ ರಾಜ್ಯದ ಗಾಂಧಿನಗರದಿಂದ ಗೋವುಗಳನ್ನು ನಮ್ಮ ಜಿಲ್ಲೆಗೆ ತರುವ ದಿಸೆಯಲ್ಲಿ ಕುತಂತ್ರ ರೂಪಿಸಿದ ಕೃತ್ಯವೊಂದು ತಡವಾಗಿ ಬೆಳಕಿಗೆ ಬಂದಿದೆ.

ಈ ಪ್ರಸಂಗದಿಂದ ತೀವ್ರ ಅಚ್ಚರಿಗೊಂಡಿರುವ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು, ನಗರ ಪೊಲೀಸ್ ಠಾಣೆಯಲ್ಲಿ ಖುದ್ದು ಮೊಕದ್ದಮೆ ದಾಖಲಿಸುವದರೊಂದಿಗೆ ಈ ಕೃತ್ಯದ ಹಿಂದಿನ ಜಾಲವನ್ನು ಬಯಲಿಗೆಳೆದು ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಪೊಲೀಸ್ ಇಲಾಖೆಗೆ ನಿರ್ದೇಶನ ಮಾಡಿದ್ದಾರೆ. ಆ ಮೇರೆಗೆ ಮಡಿಕೇರಿ ನಗರ ಠಾಣೆಯ ಠಾಣಾಧಿಕಾರಿ ಎಂ. ಷಣ್ಮುಗಂ ಅವರಿಗೆ ಸೂಕ್ತ ತನಿಖೆ ನಡೆಸಿ ವರದಿಯನ್ನು ಸಲ್ಲಿಸುವಂತೆ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಿ. ಸೂಚಿಸಿದ್ದಾರೆ. ವಿಶ್ವಾಸನೀಯ ಮೂಲಗಳ ಪ್ರಕಾರ ತಾ. 4 ರಂದು ಈ ಕೃತ್ಯ ಜಿಲ್ಲಾಧಿಕಾರಿ ಅವರ ಗಮನಕ್ಕೆ ಬಂದಿದೆ. ಅಂದು ಗುಜರಾತ್ ರಾಜ್ಯದ ಪಶುಪಾಲನೆ ಇಲಾಖೆಯ ಕಚೇರಿಯು ಇ-ಮೇಲ್ ಮುಖಾಂತರ ಪತ್ರವೊಂದನ್ನು ರವಾನಿಸುವ ಮೂಲಕ ಆ ಪತ್ರದ ಒಕ್ಕಣೆ ಹಾಗೂ ಸಹಿ ಬಗ್ಗೆ ಮಾಹಿತಿ ಬಯಸಿದೆ. ಆ ವೇಳೆ ವಿಷಯ ಬಹಿರಂಗಗೊಂಡಿದೆ. ಆ ಪತ್ರದ ಪ್ರಕಾರ ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ಇದೆಯೆನ್ನಲಾದ ಆಯುರ್ವೇದ ಯೋಗ ಕೇಂದ್ರದ ಶಾಖೆಯೊಂದನ್ನು ಕೊಡಗಿನಲ್ಲಿ ಆರಂಬಿಸಿರುವದಾಗಿ ಉಲ್ಲೇಖ ಮಾಡಲಾಗಿದೆ. ಈ ಸಂಬಂಧ ಗುಜರಾತ್ ತಳಿಯ ಗೋವುಗಳು ಅವಶ್ಯಕವಾಗಿದೆ. ಗೋವುಗಳನ್ನು ಕೊಡಗು ಜಿಲ್ಲೆಗೆ ಸಾಗಿಸುವ ಸಲುವಾಗಿ ಅವಕಾಶ ಮಾಡಿಕೊಡುವಂತೆ ಅಲ್ಲಿನ ಆಡಳಿತ ಅವಕಾಶ ಕಲ್ಪಿಸುವ ಕುರಿತು ಜಿಲ್ಲಾಧಿಕಾರಿ ಕೋರಿರುವಂತೆ ಪ್ರಸ್ತಾಪವನ್ನು ಮಾಡಲಾಗಿದೆ. ಅಲ್ಲದೇ ಈ ಪತ್ರದಲ್ಲಿ ಜಿಲ್ಲಾಧಿಕಾರಿ ಅವರ ಹೆಸರು, ಸಹಿ, ಲೆಟರ್ ಹೆಡ್ ಬಳಸಲಾಗಿದೆ.

ಈ ಪತ್ರದೊಂದಿಗೆ ಗುಜರಾತ್ ರಾಜ್ಯದ ಗಾಂಧಿ ನಗರದಿಂದ ಗೋವುಗಳನ್ನು ತರಲು ಯತ್ನಿಸಿದ ದಾಖಲೆಗಳಲ್ಲಿ ಕೇರಳ ಮೂಲದ ವೈದ್ಯ ಎಂದು ಉಲ್ಲೇಖ ಮಾಡಿರುವ ಡಾ. ಆರ್. ಸತ್ಯಜಿತ್‍ಎಂಬ ಹೆಸರಿದೆ. ಈ ಎಲ್ಲವನ್ನು ಪರಿಶೀಲನೆ ಮಾಡುತ್ತಿರುವ ಪೊಲೀಸ್ ಇಲಾಖೆ ಬಿರುಸಿನ ತನಿಖೆ ಕೈಗೊಂಡಿದೆ. ಈ ಪ್ರಕರಣ ಕುರಿತು ಜಿಲ್ಲಾಧಿಕಾರಿ ಅಭಿಪ್ರಾಯ ಬಯಸಿದಾಗ ಪೊಲೀಸ್ ಇಲಾಖೆ ತನಿಖೆ ಬಳಿಕ ವಾಸ್ತವ ತಿಳಿಯುತ್ತದೆ ಎಂದು ಸೂಚ್ಯವಾಗಿ ನುಡಿದರು. ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಅವರು ಈಗಷ್ಟೇ ವಿಷಯ ಕಲೆ ಹಾಕುತ್ತಿದ್ದು ತನಿಖೆಯಿಂದ ಸತ್ಯಾಂಶ ಬಯಲಿಗೆಳೆ ಯಲಾಗುವದು ಎಂದು ಪ್ರತಿಕ್ರಿಯೆ ನೀಡಿದ್ದಾರೆ.