ಕೂಡಿಗೆ, ಜು. 22: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬ್ಯಾಡಗೊಟ್ಟ ಗ್ರಾಮದ ಪರಿಶಿಷ್ಟ ಜಾತಿ ಕಾಲೋನಿಯನ್ನು ಅಭಿವೃದ್ಧಿ ಪಡಿಸಲು ಕಳೆದ ನಾಲ್ಕು ವರ್ಷಗಳಿಂದ ಅನುದಾನ ಮೀಸಲಿಡದೆ, ಯಾವದೇ ಮೂಲಭೂತ ಸೌಕರ್ಯಗಳನ್ನು ಒದಗಿಸದ ಬಗ್ಗೆ ಕಾಲೋನಿಯ ನಿವಾಸಿಗಳು ನ್ಯಾಯಾಲಯದ ಮೊರೆ ಹೋಗಲು ನಿರ್ಧರಿಸಿದ್ದಾರೆ.
ಕೂಡಿಗೆ ಗ್ರಾಮ ಪಂಚಾಯಿತಿಯು ಪರಿಶಿಷ್ಟ ಜಾತಿಯ ಕಾಲೋನಿಗೆ ಅನ್ಯಾಯವೆಸಗಿದ್ದಾರೆ. ಈ ನಿವಾಸಿಗಳ 10 ಕ್ಕೂ ಹೆಚ್ಚು ಮನೆಗಳು ಬೀಳುವ ಹಂತಕ್ಕೆ ತಲಪಿದ್ದು, ಇದರ ಬಗ್ಗೆ ಯಾವದೇ ರೀತಿಯಲ್ಲಿ ಗಮನಹರಿಸಿಲ್ಲ. ಜಿಲ್ಲಾಧಿಕಾರಿಗಳು ಸಹ ಸ್ಥಳಕ್ಕೆ ಭೇಟಿ ನೀಡಿ ಮನೆಗಳನ್ನು ನಿರ್ಮಿಸಿಕೊಡುವಂತೆ ಹಾಗೂ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಸೂಚನೆ ನೀಡಿದ್ದರು.
ಗ್ರಾಮ ಪಂಚಾಯಿತಿಯ ನಾಲ್ಕು ವರ್ಷಗಳ ಎಂಟು ಗ್ರಾಮಸಭೆಗಳಲ್ಲಿ ಈ ವಿಷಯ ಪ್ರಸ್ತಾವನೆಯಾಗಿ, ಪಂಚಾಯಿತಿ ಎದುರು ಪ್ರತಿಭಟನೆ ನಡೆಸಿದ್ದು, ಜಿಲ್ಲಾ ಕಾರ್ಯನಿರ್ವಹಣಾಧಿಕಾರಿ, ತಾಲೂಕು ಕಾರ್ಯ ನಿರ್ವಹಣಾಧಿಕಾರಿಯವರಿಗೆ ಮನವಿ ಪತ್ರ ಸಲ್ಲಿಸಲಾಗಿತ್ತು. ಈ ಬಗ್ಗೆ ಜನಪ್ರತಿನಿಧಿಯಾಗಲೀ, ಅಧಿಕಾರಿಗಳಾಗಲೀ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.