ಶ್ರೀಮಂಗಲ, ಜು. 23: ಗೋಣಿಕೊಪ್ಪ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎ.ಪಿ.ಎಂ.ಸಿ) ಆವರಣದಲ್ಲಿ ವಿಯೆಟ್ನಾಂ ಕಾಳು ಮೆಣಸು ಆಮದು ಪ್ರಕರಣದಲ್ಲಿ ಮುಟ್ಟುಗೋಲು ಹಾಕಿಕೊಂಡ 1,045 ಕಾಳುಮೆಣಸು ಪುಡಿ ದಾಸ್ತಾನಿನ ಗುಣಮಟ್ಟ ಪರೀಕ್ಷೆ ಮತ್ತು ಆಹಾರ ಪದಾರ್ಥವಾಗಿ ಬಳಕೆಗೆ ಯೋಗ್ಯವಲ್ಲವೆಂಬ ವಿಶ್ಲೇಷಣಾ ವರದಿ ಹಿನ್ನೆಲೆಯಲ್ಲಿ ಕಳಪೆ ಗುಣಮಟ್ಟದ ಆಹಾರ ಪದಾರ್ಥ ಮಾರಾಟ ಮಾಡುತ್ತಿರುವ ಆರೋಪದಡಿ ರೋಸ್ ಮೇರಿ ಇಂಟರ್ ನ್ಯಾಷನಲ್ ಹೆಸರಿನಲ್ಲಿ ಕಾಳುಮೆಣಸು ಆಮದು ವ್ಯಾಪಾರಿ ಸೌರವ್ ಬಂಕ ಅವರ ಮೇಲೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯಿದೆ ಉಲ್ಲಂಘನೆಯಡಿ ದಂಡ ವಿಧಿಸಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ತೀರ್ಪು ನೀಡಿದ್ದು, ಇದರಿಂದ ವಿಯೆಟ್ನಾಂ ಕರಿಮೆಣಸು ಕಳಪೆ ಹಾಗೂ ಮಾನವ ಸೇವನೆಗೆ ಯೋಗ್ಯವಲ್ಲ ಎಂಬವದು ಸಾಬೀತಾಗಿದೆ. ಕಾನೂನು ದುರುಪಯೋಗ ಮಾಡಿಕೊಂಡು ದೇಸೀಯ ಕರಿಮೆಣಸು ಬೆಳೆಗಾರರಿಗೆ ವಂಚನೆ ಮಾಡುತ್ತಿರುವ, ಕಳಪೆ ಕರಿಮೆಣಸು ಆಮದಿನಿಂದ ತೀವ್ರ ಬೆಲೆಕುಸಿತದಿಂದ ಸ್ಥಳೀಯ ಬೆಳೆಗಾರರನ್ನು ಸಂಕಷ್ಟಕ್ಕೆ ದೂಡಿರುವ ಅಕ್ರಮ ಆಮದು ಮೇಲೆ ಕೇಂದ್ರ ಸರಕಾರ ನಿರ್ಬಂಧ ವಿಧಿಸಬೇಕು. ಈ ಪ್ರಕರಣವನ್ನು ಆಧಾರದಲ್ಲಿಟ್ಟುಕೊಂಡು ದೇಶಾದ್ಯಂತ ಅಕ್ರಮ ಆಮದಿನಲ್ಲಿ ತೊಡಗಿರುವ ವ್ಯಾಪಾರಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಕೊಡಗು

(ಮೊದಲ ಪುಟದಿಂದ) ಬೆಳೆಗಾರರ ಒಕ್ಕೂಟ ಒತ್ತಾಯಿಸಿದೆ. ಗೋಣಿಕೊಪ್ಪ ಸಿಲ್ವರ್‍ಸ್ಕೈ ಸಭಾಂಗಣದಲ್ಲಿ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಕೈಬುಲೀರ ಹರೀಶ್ ಅಪ್ಪಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ದೀರ್ಘ ಸಮಾಲೋಚನೆ ನಡೆಸಲಾಯಿತು. ರೋಸ್ ಮೇರಿ ಇಂಟರ್ ನ್ಯಾಷನಲ್ ಸಂಸ್ಥೆಯ ವ್ಯಾಪಾರಿ ಸೌರವ್ ಬಂಕ ಅವರು ಕಳಪೆ ಕಾಳುಮೆಣಸು ಆಮದು ಮಾಡಿಕೊಂಡ ಪ್ರಕರಣ ಅಲ್ಲದೆ ಎ.ಪಿ.ಎಂ.ಸಿ.ಗೆ ಲಕ್ಷಾಂತರ ರೂ. ತೆರಿಗೆ ವಂಚಿಸಿರುವ ಬಗ್ಗೆಯೂ ಸಭೆಯಲ್ಲಿ ದಾಖಲೆ ಬಿಡುಗಡೆ ಮಾಡಿ, ಇಂತಹ ವ್ಯಾಪಾರಿಗಳಿಗೆ ದಂಡ ವಿಧಿಸಿದರೆ ಸಾಕಾಗುವದಿಲ್ಲ. ಅವರ ವ್ಯಾಪಾರ ಪರವಾನಗಿಯನ್ನು ಮುಟ್ಟುಗೋಲು ಹಾಕಿಕೊಂಡು ಈ ಹಗರಣದ ಸಮಗ್ರ ತನಿಖೆ ನಡೆಸಿದ್ದಲ್ಲಿ ದೊಡ್ಡ ಮಟ್ಟದ ಅವ್ಯವಹಾರ ಬೆಳಕಿಗೆ ಬರಲಿದೆ. ಆದ್ದರಿಂದ ಈ ಬಗ್ಗೆ ಸ್ವಯಂ ಪ್ರೇರಿತರಾಗಿ ಎಸ್.ಐ.ಟಿ, ಜಾರಿ ನಿರ್ದೇಶನಾಲಯ (ಇ.ಡಿ) ಮತ್ತು ಆದಾಯ ತೆರಿಗೆ ಇಲಾಖೆ ತನಿಖೆ ನಡೆಸಬೇಕೆಂದು ಬೆಳೆಗಾರರ ಒಕ್ಕೂಟ ಒತ್ತಾಯಿಸಿದೆ.

2017 ರ ಆಗಸ್ಟ್‍ನಲ್ಲಿ ಗೋಣಿಕೊಪ್ಪ ಎ.ಪಿ.ಎಂ.ಸಿ. ನಿರ್ದೇಶಕರಾಗಿದ್ದ ಕಡೇಮಾಡ ಕುಸುಮಾ ಜೋಯಪ್ಪ, ಮಾಲೇಟಿರ ಬೋಪಣ್ಣ, ಅಜ್ಜಿಕುಟ್ಟೀರ ನರೇನ್ ಕಾರ್ಯಪ್ಪ ಅವರು ವಿಯೆಟ್ನಾಂ ಕಳಪೆ ಕಾಳುಮೆಣಸು ಎ.ಪಿ.ಎಂ.ಸಿ. ಗೆ ಬರುತ್ತಿದ್ದು, ಅದನ್ನು ಕೊಡಗಿನ ಕರಿಮೆಣಸಿನೊಂದಿಗೆ ಬೆರೆಸಿ ಮಾರಾಟ ಮಾಡುತ್ತಿರುವದು, ಕಾಳುಮೆಣಸು ಹುಡಿ ಮಾಡುತ್ತಿರುವ ಮಿಲ್ ಸ್ಥಾಪನೆ, ಪ್ಯಾಕಿಂಗ್ ಘಟಕ ಇತ್ಯಾದಿ ಅವ್ಯವಹಾರದ ಬಗ್ಗೆ ಬೆಳಕಿಗೆ ತಂದಿದ್ದರು. ನಂತರ ಬೆಳೆಗಾರರ ಒಕ್ಕೂಟ ಎ.ಪಿ.ಎಂ.ಸಿ.ಗೆ ಮುತ್ತಿಗೆ ಹಾಕಿ ಅಕ್ರಮ ಕಳಪೆ ಕಾಳುಮೆಣಸು ದಾಸ್ತಾನು ಪತ್ತೆಹಚ್ಚಿ ಪೊಲೀಸರು ಹಾಗೂ ತಹಶೀಲ್ದಾರರ ಸಮ್ಮುಖದಲ್ಲಿ 1045 ಚೀಲ ಮುಟ್ಟುಗೋಲು ಹಾಕಿಕೊಂಡು ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದ ಬಗ್ಗೆ ಸಭೆಗೆ ಒಕ್ಕೂಟದ ಅಧ್ಯಕ್ಷ ಹರೀಶ್ ಅಪ್ಪಯ್ಯ ಸ್ಮರಿಸಿದರು.

ಈ ಪ್ರಕರಣದ ತನಿಖೆಗೆ ಕಳೆದ ಅವಧಿಯ ಸರ್ಕಾರದಲ್ಲಿ ಉಸ್ತುವಾರಿ ಸಚಿವರಾಗಿದ್ದ ಎಂ.ಆರ್. ಸೀತಾರಾಂ ಅವರಿಗೆ ಮನವಿ ಸಲ್ಲಿಸಿದ ಸಂದರ್ಭ ಸಿ.ಓ.ಡಿ. ತನಿಖೆಗೆ ಇದನ್ನು ಹಸ್ತಾಂತರಿಸಲಾಗಿದೆ ಎಂದು ಭರವಸೆ ನೀಡಿದ್ದರೂ ತನಿಖೆ ಕೈಗೊಳ್ಳಲಿಲ್ಲ ಏಕೆ ಎಂಬವದು ಗೊತ್ತಾಗಲಿಲ್ಲ ಎಂದು ಹರೀಶ್ ಅಪ್ಪಯ್ಯ ಅಸಮಾಧಾನ ವ್ಯಕ್ತಪಡಿಸಿದರು.

ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಅಣ್ಣೀರ ಹರೀಶ್ ಮಾದಪ್ಪ ಅವರು ಅಕ್ರಮ ವ್ಯವಹಾರದ ದಾಖಲೆ ಸಹಿತ ಸಭೆಯಲ್ಲಿ ವಿವರಿಸಿ ಬೆಳೆಗಾರರ ಒಕ್ಕೂಟ ದಾಖಲಿಸಿದ ದೂರಿನ ತನಿಖೆ ಹಿನ್ನೆಲೆಯಲ್ಲಿ ಕಳಪೆ ಕರಿಮೆಣಸು ಮತ್ತು ಆಮದು ಮಾಡಿಕೊಂಡ ಕಾಳುಮೆಣಸು ಉತ್ಪನ್ನದ ಮೇಲೆ ಮಾತ್ರ ಶುಲ್ಕ ತುಂಬಿದ್ದು, ನಂತರದಲ್ಲಿ ಅದನ್ನು ಮಾರಾಟ ಮಾಡಿರುವದಕ್ಕೆ ಶುಲ್ಕ ಪಾವತಿಸದೆ ವ್ಯಾಪಾರಿ ಸೌರವ್ ಬಂಕ ಅವರು ಎ.ಪಿ.ಎಂ.ಸಿ.ಗೆ ವಂಚಿಸಿರು ವದು ಬೆಳಕಿಗೆ ಬಂದಿದೆ. ಇವೆರಡು ಪ್ರಕರಣದಡಿ ಪಾವತಿಸಬೇಕಾದ ಶುಲ್ಕ ಹಾಗೂ ಅದಕ್ಕೆ ದಂಡವನ್ನು ಕಟ್ಟುವಂತೆ ಆದೇಶ ನೀಡಿದ್ದು, ಇದು ಕೊಡಗು ಬೆಳೆಗಾರರ ಒಕ್ಕೂಟದ ಹೋರಾಟಕ್ಕೆ ಆರಂಭಿಕ ಜಯ ಎಂದು ಬಣ್ಣಿಸಿದರು.

ಗೋಣಿಕೊಪ್ಪ ಎ.ಪಿ.ಎಂ.ಸಿ.ಯ ರೋಸ್ ಮೇರಿ ಇಂಟರ್ ನ್ಯಾಷನಲ್ ಸಂಸ್ಥೆಯ ಸೌರವ್ ಬಂಕ ಒಂದನೇ ಪ್ರಕರಣದಲ್ಲಿ 4,535 ಕ್ವಿಂಟಾಲ್ ವಿಯೆಟ್ನಾಂ ಕಾಳುಮೆಣಸನ್ನು ರೂ 10,50,91,355.50ಗಳ ಮೌಲ್ಯಕ್ಕೆ ಆಮದು ಮಾಡಿಕೊಂಡು ಅದನ್ನು ರೂ 19,13,24,525.00ಗಳ ಮೌಲ್ಯಕ್ಕೆ ಮಾರಾಟ ಮಾಡಲಾಗಿದೆ. ಇದಕ್ಕೆ ಆಮದು ಮಾಡಿಕೊಂಡ ಕಾಳು ಮೆಣಸಿಗೆ ಮಾರಾಟ ಮೌಲ್ಯದ ಮೇಲೆ ಆಗುವ ಶುಲ್ಕ ರೂ 28,69,868 ಗಳು ಆಗಿದ್ದು,ಇದರ ಬದಲಿಗೆ ಕೇವಲ ರೂ 15,76,006 ಗಳನ್ನು ಪಾವತಿಸಿದ್ದು, ರೂ 12,93,862 ಗಳಷ್ಟು ವಂಚಿಸಿರುವುದು ಬೆಳಕಿಗೆ ಬಂದಿದೆ. ಈ ಪ್ರಕರಣದಡಿ ಎ.ಪಿ.ಎಂ.ಸಿ. ಗೆ ಕೂಡಲೇ ರೂ 12,93,862 ಗಳು ಮತ್ತು ಇದಕ್ಕೆ ದಂಡ ರೂ. 38,81,59 ಗಳು. ಒಟ್ಟು ರೂ 16,82,021 ಗಳನ್ನು ವಸೂಲಿ ಮಾಡುವಂತೆ ಬೆಂಗಳೂರಿನ ಕೃಷಿ ಮಾರಾಟ ನಿರ್ದೇಶಕರು, ಗೋಣಿಕೊಪ್ಪ ಎ.ಪಿ.ಎಂ.ಸಿ. ಕಾರ್ಯದರ್ಶಿಯವರಿಗೆ ಆದೇಶ ನೀಡಿದ್ದು, ವ್ಯಾಪಾರಿ ಸೌರವ್ ಬಂಕ ಅವರಿಗೆ ನೋಟೀಸು ಜಾರಿ ಮಾಡಿದ್ದಾರೆ.

ಇದರ ಇನ್ನೊಂದು ಪ್ರಕರಣದಡಿ ತೆರಿಗೆ ವಂಚನೆ ನಡೆದಿದ್ದು, 6,600 ಕ್ವಿ. ವಿಯೆಟ್ನಾಂ ಕಾಳುಮೆಣಸು ಅಮದನ್ನು ರೂ 20,50,03,962.07 ಗಳಿಗೆ ಖರೀದಿಸಿ ಇದನ್ನು ರೂ 25,87,04,933 ಗಳಿಗೆ ಮಾರಾಟ ಮಾಡಿದ್ದು, ಇದಕ್ಕೆ ರೂ 38,80, 574 ಗಳ ತೆರಿಗೆ ಪಾವತಿಸುವ ಬದಲು ಕೇವಲ 30,87,059.43 ಮಾತ್ರ ಪಾವತಿಸಿ ರೂ 79,35,14.57 ಗಳನ್ನು ವಂಚಿಸಲಾಗಿದೆ. ಈ ಪ್ರಕರಣದಡಿ ರೂ 79,35,515.00 ಗಳನ್ನು ಮತ್ತು ಅದಕ್ಕೆ ದಂಡ ರೂ 23,80,55.00 ಗಳು ಒಟ್ಟು ರೂ 10,31,570.00 ಗಳನ್ನು ವಸೂಲಿ ಮಾಡಲು ಆದೇಶ ನೀಡಲಾಗಿದೆ. ಇವೆರಡೂ ಪ್ರಕರಣದಡಿ ದಂಡ ರೂ. 6,26,214.00 ಗಳು ಸೇರಿ ಒಟ್ಟು ರೂ 27,19,591.00ಗಳನ್ನು ವಸೂಲಿ ಮಾಡುವಂತೆ ಆದೇಶ ನೀಡಲಾಗಿದ್ದು, ತಪ್ಪಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳುವದಾಗಿ ನೋಟೀಸಿನಲ್ಲಿ ಸೂಚಿಸಲಾಗಿದೆ ಎಂದು ಹರೀಶ್ ಮಾದಪ್ಪ ಅವರು ವಿವರಿಸಿದರು.

ಒಕ್ಕೂಟದ ಮಾಜಿ ಕಾರ್ಯದರ್ಶಿ ಜಮ್ಮಡ ಮೋಹನ್ ಮಾದಪ್ಪ ಮಾತನಾಡಿ, ವಿಯೆಟ್ನಾಂ ಕಾಳುಮೆಣಸು ಆಮದು ಪ್ರಕರಣದಲ್ಲಿ ಒಕ್ಕೂಟಕ್ಕೆ ದೊರೆತಿರುವ ದಾಖÀಲೆ ಪ್ರಕಾರ ಅಲ್ಪಾವಧಿಯಲ್ಲಿ ವ್ಯಾಪಾರಿ ಸೌರವ್ ಬಂಕ ಅವರು ರೂ 11,135 ಕ್ವಿ. ಕಾಳುಮೆಣಸನ್ನು ರೂ 31,08,95,318 ಗಳಿಗೆ ಆಮದು ಮಾಡಿಕೊಂಡು ಅದೇ ಕಾಳುಮೆಣಸನ್ನು ರೂ 45,00,29,458 ಕ್ಕೆ ಮಾರಾಟ ಮಾಡಿದ್ದು, ರೂ 13,91,34,140 ಗಳ ಲಾಭ ಗಳಿಸಿದ್ದಾರೆ. ಇಲ್ಲಿ ಅಕ್ರಮ ವ್ಯಾಪಾರಿಗಳು ಕೋಟ್ಯಾಂತರ ಲಾಭ ಗಳಿಸುತ್ತಿದ್ದು, ಕಷ್ಟಪಟ್ಟು ಕರಮೆಣಸು ಬೆಳೆಯುತ್ತಿರುವ ಬೆಳೆಗಾರ ಬೆಲೆ ಕುಸಿತದಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ತೀವ್ರ ಅಸಮಾಧಾನ ವ್ಯಕ್ತ ಪಡಿಸಿದರು.

ಒಕ್ಕೂಟದ ಖಜಾಂಚಿ ಮಾಣೀರ ವಿಜಯ್ ನಂಜಪ್ಪ ಅವರು ಮಾತನಾಡಿ ಗೋಣಿಕೊಪ್ಪ ಎ.ಪಿ.ಎಂ.ಸಿ.ಯಲ್ಲಿ ಬೆಳೆಗಾರರಿಗೆ ವಂಚಿಸುತ್ತಿರುವ ಇಂತಹ ಪ್ರಕರಣ ಎ.ಪಿ.ಎಂ.ಸಿ. ಆಡಳಿತ ಮಂಡಳಿಯ ಮೂಗಿನ ನೇರಕ್ಕೆ ನಡೆಯುತ್ತಿದ್ದರೂ, ಬೆಳೆಗಾರರ ಮತ ಪಡೆದು ಪ್ರತಿನಿಧಿಯಾಗಿ ಬೆಳೆಗಾರರ ಹಿತ ಕಾಪಾಡುವಲ್ಲಿ ಸಮಿತಿಯ ಆಡಳಿತ ಮಂಡಳಿ ವಿಫಲವಾಗಿದೆ. ಇಷ್ಟೆಲ್ಲಾ ಅಕ್ರಮ ಮಾಡಿರುವ ಈ ವ್ಯಾಪಾರಿಯನ್ನು ಕೊಡಗು ಬೆಳೆಗಾರರ ಒಕ್ಕೂಟದಿಂದ ಪ್ರತಿಭಟನೆ ನಡೆಸಿ, ಆತನ ಲೈಸೆನ್ಸ್ ರದ್ದುಪಡಿಸಲು ಒತ್ತಾಯಿಸಿದ್ದರೂ ಮೈಸೂರಿನಲ್ಲಿ ವ್ಯಾಪಾರ ನಡೆಸಲು ಅವಕಾಶ ಕಲ್ಪಿಸುವಲ್ಲಿ ಆಡಳಿತ ಮಂಡಳಿಯ ಕೈವಾಡವಿದೆ. ಎಂದು ಆರೋಪಿಸಿದರು.

ಒಕ್ಕೂಟ ತಾಂತ್ರಿಕ ಸಲಹೆಗಾರ ಚೆಪ್ಪುಡೀರ ಶೆರಿ ಸುಬ್ಬಯ್ಯ ಮಾತನಾಡಿ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ತೀರ್ಪಿನಲ್ಲಿ ಕಳಪೆ ಗುಣಮಟ್ಟ ಎಂದು ಧೃಡಪಟ್ಟಿರುವ ಸ್ವತ್ತುಗಳನ್ನು ಅಹಾರ ಪದಾರ್ಥವಾಗಿ ಉಪಯೋಗಿಸಲು ಯೋಗ್ಯವಲ್ಲ. ಆದ್ದರಿಂದ ಮುಟ್ಟುಗೋಲು ಹಾಕಿಕೊಂಡ 1,045 ಚೀಲ ವಿಯೆಟ್ನಾಂ ಕಾಳುಮೆಣಸು ಪುಡಿಗಳನ್ನು ನಾಶಪಡಿಸಲು ತೀರ್ಪು ನೀಡಿದೆ. ಆದರೆ ಬೆಳೆಗಾರರ ಒಕ್ಕೂಟದಿಂದ ಈ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಒತ್ತಾಯ ಮಾಡುತ್ತಿರುವ, ಸದರಿ ಪ್ರಕರಣದ ಬಗ್ಗೆ ನ್ಯಾಯಾಲಯದಲ್ಲಿ ಹೋರಟ ನಡೆಸಲು ಮುಂದಾಗಿರುವ ಹಿನ್ನಲೆಯಲ್ಲಿ ಈ ಸ್ವತ್ತನ್ನು ನಾಶಪಡಿಸದಂತೆ ಸಂಬಂಧಿಸಿದ ಇಲಾಖೆ ಕ್ರಮ ಕೈಗೊಳ್ಳಬೇಕೆಂದು ಒತ್ತ್ತಾಯಿಸಿದೆ.

ಈ ಸಂದರ್ಭ ಒಕ್ಕೂಟದ ಉಪಾಧ್ಯಕ್ಷ ಕೇಚಂಡ ಕುಶಾಲಪ್ಪ, ಜಂಟಿ ಕಾರ್ಯದರ್ಶಿ ಬಾಚಂಗಡ ದಾದಾ ದೇವಯ್ಯ ವೇದಿಕೆಯಲ್ಲಿ ಹಾಜರಿದ್ದರು.