ಗೋಣಿಕೊಪ್ಪ ವರದಿ, ಜು. 23 ; ಮತ್ತೂರು ಗ್ರಾಮದಲ್ಲಿ ಕಳೆದ 15 ದಿನಗಳಿಂದ 3 ಆನೆಗಳ ಹಿಂಡು ಗ್ರಾಮದಲ್ಲಿ ಕೃಷಿ ಬೆಳೆಗಳನ್ನು ನಾಶ ಪಡಿಸುತ್ತಿದೆ. ತೋಟದಲ್ಲಿ ಕಾಫಿ, ಬಾಳೆ, ತೆಂಗು, ಅಡಿಕೆ ಬೆಳೆ ನಾಶ ಮಾಡಿವೆ.
ಸೋಮವಾರ ರಾತ್ರಿ ಅಲ್ಲಿನ ಪುತ್ತಮನೆ ಸ್ಮರಣ್ ಅವರ ತೋಟಕ್ಕೆ ಲಗ್ಗೆ ಇಟ್ಟಿವೆ. ಬಾಳೆ ಗಿಡಗಳನ್ನು ಸಂಪೂರ್ಣ ತಿಂದು, ತುಳಿದು ನಾಶ ಮಾಡಿವೆ. ಕೆರೆಗೆ ಇಳಿದು ಪಂಪ್ ಮೂಲಕ ಅಳವಡಿಸಿದ್ದ ನೀರಿನ ಎಚ್ಡಿ ಪೈಪ್ ತುಳಿದಿದೆ. ಇದರಿಂದ ಸುಮಾರು 45 ಸಾವಿರ ನಷ್ಟ ಉಂಟಾಗಿದೆ ಎಂದು ಸ್ಮರಣ್ ಇಲಾಖೆಗೆ ಅರ್ಜಿ ಸಲ್ಲಿಸಿದ್ದಾರೆ. ಸ್ಥಳಕ್ಕೆ ಪೊನ್ನಂಪೇಟೆ ವಲಯ ಅರಣ್ಯ ಇಲಾಖೆ ಅಧಿಕಾರಿಗಳು ಬೇಟಿ ನೀಡಿ ಪರಿಶೀಲನೆ ನಡೆಸಿದರು. ಸೂಕ್ತ ಪರಿಹಾರ ನೀಡುವ ಭರವಸೆ ನೀಡಿದರು.
ಐಕೊಳದಲ್ಲಿ ಬೆಳೆನಾಶ
ಕೊಂಡಗೇರಿ ಸಮೀಪದ ಐಕೊಳ ಗ್ರಾಮದಲ್ಲಿ ಕಾಡಾನೆಗಳ ಹಿಂಡು ಬೀಡುಬಿಟ್ಟು ಕೃಷಿ ಫಸಲುಗಳನ್ನು ದ್ವಂಸಗೊಳಿಸಿದೆ. ಮೂರ್ನಾಡು ವಲಯ ಅರಣ್ಯ ವ್ಯಾಪ್ತಿಗೆ ಒಳಪಡುವ ಐಕೊಳ ಗ್ರಾಮದ ನಿವಾಸಿ ಮಿತ್ತೂರು ಸುಬ್ರಮಣಿ ಎಂಬವರು ಬೆಳೆಸಿದ್ದ ಬಾಳೆ ಕೃಷಿ ಮಾಡಿದ ತೋಟಕ್ಕೆ 10 ಕ್ಕೂ ಹೆಚ್ಚು ಕಾಡಾನೆಗಳ ಹಿಂಡು ದಾಳಿ ನಡೆಸಿದ್ದು ಬಾಳೆ ಫಸಲುಗಳನ್ನು ನಾಶಗೊಳಿಸಿದೆ. ಇದರಿಂದ ಲಕ್ಷಾಂತರ ರೂಪಾಯಿ ನಷ್ಟವಾಗಿದೆ ಎಂದು ಸುಬ್ರಮಣಿ ‘ಶಕ್ತಿ’ಗೆ ತಿಳಿಸಿದರು. ಕಾಡಾನೆಗಳು ದಾಂಧಲೆ ನಡೆಸಿ ನಷ್ಟಪಡಿಸಿರುವ ಬಗ್ಗೆ ಸುಬ್ರಮಣಿ ಅವರು ಅರಣ್ಯ ಇಲಾಖೆಗೆ ದೂರು ನೀಡಿದ ಮೇರೆಗೆ ಸ್ಥಳಕ್ಕೆ ಮೂರ್ನಾಡು ವಲಯ ಉಪವಲಯ ಅರಣ್ಯ ಅಧಿಕಾರಿ ದೇವಯ್ಯ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು. ನಂತರ ಕಾಫಿ ತೋಟಗಳಲ್ಲಿ ಬೀಡು ಬಿಟ್ಟಿದ್ದ ಕಾಡಾನೆಗಳನ್ನು ಸಮೀಪದ ಅರಣ್ಯಕ್ಕೆ ಅಟ್ಟಿದರು.