ಸಿದ್ದಾಪುರ, ಜು. 23: ಕೊಡಗಿನ ಪರಿಸರ ಹಾಗೂ ರಸ್ತೆ ಸುರಕ್ಷತೆಯ ನಿಟ್ಟಿನಲ್ಲಿ ಜಿಲ್ಲಾದಿಕಾರಿಗಳ ಆದೇಶದಂತೆ ಜಿಲ್ಲಾದ್ಯಂತ ಮರ, ಮರಳು ಇತರೆ ಸರಕುಗಳನ್ನು ಹೊತ್ತ ಬಾರಿ ವಾಹನಗಳ ಸಾಗಾಟ ಮಳೆಗಾಲ ಕಳೆಯುವವರೆಗೆ ನಿಷೇದಿಸಲಾಗಿದೆ.
ಜಿಲ್ಲಾಧಿಕಾರಿಗಳ ಆದೇಶದನ್ವಯ ಲಾರಿ ಸಮೇತ 16 ಟನ್ ತೂಕದ ಮರ , ಮರಳನ್ನು ಹಾಗೂ ಇತರೆ ಸರಕುಗಳನ್ನು ಸಾಗಾಟ ಮಾಡಿದರೆ ಅಂತಹ ವಾಹನಗಳ ಮೇಲೆ ಕ್ರಮ ಕೈಗೊಳ್ಳಬಹುದು. ಆದರೆ ಈ ಆದೇಶ ಆದೇಶಕ್ಕೆ ಮಾತ್ರ ಸೀಮಿತವಾಗಿದೆಯಾ ಎಂಬ ಪ್ರಶ್ನೆ ಇದೀಗ ಸಾರ್ವಜನಿಕ ವಲಯದಿಂದ ಎದ್ದಿದೆ. ಮರ, ಸಿಮೆಂಟ್, ಕಬ್ಬಿಣ, ಗೊಬ್ಬರ ಸೇರಿದಂತೆ ಇತರೆ ಸರಕುಗಳನ್ನು ತುಂಬಿದ ಭಾರಿ ವಾಹನಗಳ ಸಂಚಾರ ಜಿಲ್ಲಾದ್ಯಂತ ನಡೆಯುತ್ತಿದ್ದರೂ ಜಿಲ್ಲಾಧಿಕಾರಿಗಳ ಆದೇಶದಂತೆ ಕ್ರಮ ಕೈಗೊಳ್ಳಬೇಕಾದ ಅಧಿಕಾರಿಗಳು ಮಾತ್ರ ಮೌನವಾಗಿದ್ದಾರೆ.
ಮಳೆಗಾಲದಲ್ಲಿ ಗುಡ್ಡಗಾಡು ಪ್ರದೇಶವಾದ ಕೊಡಗಿನಲ್ಲಿ ಅತಿ ಹೆಚ್ಚು ಮಳೆ ಬೀಳುತ್ತಿದ್ದು ಭೂಮಿಯು ಹದವಾಗಿದ್ದು ನೀರಿನ ತೇವಾಂಶ ಹೆಚ್ಚಾಗಿ ಹಲವು ಕಡೆಗಳಲ್ಲಿ ರಸ್ತೆಗಳು ಬಿರುಕು ಬೀಳ ತೊಡಗಿದೆ ಮತ್ತು ಕೆಲವೊಂದು ಕಡೆಗಳಲ್ಲಿ ಮಣ್ಣು ಕುಸಿತವು ಸಂಭವಿಸುತ್ತಿದೆ. ಕಳೆದ ವರ್ಷದ ಪ್ರಕೃತಿ ವಿಕೋಪದಿಂದ ತತ್ತರಿಸಿರುವ ಕೊಡಗಿನ ಜನತೆ ಮತ್ತೊಂದು ಆಘಾತ ಎದುರಿಸಲು ಸಿದ್ದರಿಲ್ಲ ಹಾಗೂ ಕೊಡಗಿನಲ್ಲಿ ಆಗಿರುವ ದುರಂತಗಳಿಗೆ ಪ್ರಕೃತಿಯ ಮೇಲೆ ಮಾನವನ ಹಸ್ತಕ್ಷೇಪ ಕೂಡ ಕಾರಣವಾಗಿದೆ ಎಂಬ ವರದಿಗಳು ಕೂಡ ಬಂದಿದೆ.
ಈ ಎಲ್ಲಾ ವರದಿಗಳಂತೆ ಜಿಲ್ಲಾಧಿಕಾರಿಗಳು ರಸ್ತೆ ಸುರಕ್ಷತೆಯ ದೃಷ್ಟಿಯಿಂದ ಹಾಗೂ ಪರಿಸರ ಸಂರಕ್ಷಣೆಗಾಗಿ ಕೊಡಗಿನಲ್ಲಿ ಮುಂದೆ ಅನಾಹುತಗಳು ಸಂಭವಿಸುವದನ್ನು ತಪ್ಪಿಸಲು ಮಳೆಗಾಲದ 3 ತಿಂಗಳಿನಲ್ಲಿ ಭಾರಿ ಸರಕು ವಾಹನಗಳ ಸಾಗಾಟ ನಿಷೇಧಿಸಿ ಆದೇಶ ಹೊರಡಿಸಿದ್ದರು. ಆದರೆ ಅಧಿಕಾರಿಗಳಿಗೆ ಈ ಆದೇಶ ವರದಾನವಾಗಿದ್ದು ಇಂತಿಷ್ಟು ಹಣವನ್ನು ಪಡೆದು ಮರದ ನಾಟಾಗಳನ್ನು ತುಂಬಿದ ಭಾರಿ ಲಾರಿಗಳನ್ನು ರಾತೋರಾತ್ರಿ ಮಾಲ್ದಾರೆ ಮತ್ತು ಕುಶಾಲನಗರ ಚೆಕ್ ಪೋಸ್ಟ್ ಮೂಲಕ ಬಿಡಲಾಗುತ್ತಿದೆ ಹಾಗೆಯೇ ಮೈಸೂರು ಕಡೆಯಿಂದ ಜಿಲ್ಲೆಗೆ ಬರುವ ಸಿಮೆಂಟ್, ಕಬ್ಬಿಣ, ಅಕ್ಕಿ ಮುಂತಾದ ಪದಾರ್ಥಗಳನ್ನು ತುಂಬಿದ ಭಾರಿ ಲಾರಿಗಳನ್ನು ರಾತ್ರಿಗಳಲ್ಲಿ ಜಿಲ್ಲೆಗೆ ಪ್ರವೇಶಿಸಲು ಬಿಟ್ಟು ಒಂದು ಲೋಡಿಗೆ ಇಷ್ಟು ಎಂದು ಹಣ ಪಡೆದು ನೀಡಲಾಗುತ್ತಿದೆ ಎಂಬ ಆರೋಪಗಳು ಸಾರ್ವಜನಿಕ ವಲಯದಿಂದ ಕೇಳಿ ಬರುತಿದೆ.
ಮಂಗಳವಾರಂದು 16 ಚಕ್ರದ ಬಾರಿ ವಾಹನವೊಂದು ಸರಕನ್ನು ತುಂಬಿಸಿಕೊಂಡು ಸಿದ್ದಾಪುರದ ಮಡಿಕೇರಿ ರಸ್ತೆಯ ಮುಖ್ಯ ರಸ್ತೆಯಲ್ಲಿಯೆ ನಿಂತಿದ್ದು ನಂತರ ರಾಜಾರೋಷವಾಗಿ ಮೈಸೂರು ರಸ್ತೆಯಲ್ಲಿರುವ ದಿನಸಿ ಅಂಗಡಿಯೊಂದಕ್ಕೆ ಅಕ್ಕಿಯನ್ನು ಇಳಿಸುತ್ತಿತ್ತು. ಜಿಲ್ಲೆಯಲ್ಲಿ ಇಂತಹ ಲಾರಿಗಳ ಸಂಚಾರಕ್ಕೆ ನಿರ್ಬಂಧವಿದ್ದರು 2 ಚೆಕ್ ಪೋಸ್ಟ್ಗಳನ್ನು ದಾಟಿ ಈ ಲಾರಿ ಹೇಗೆ ಸಿದ್ದಾಪುರವರೆಗೆ ಬರುತಿದೆ ಎಂದು ಸಾರ್ವಜನಿಕರು ಪ್ರಶ್ನೆ ಮಾಡಿಕೊಳ್ಳುತಿದ್ದಾರೆ. ಇಂತಹದೇ ರೀತಿಯಲ್ಲಿ ಅದೆಷ್ಟೊ ಲಾರಿಗಳು ಪ್ರತಿನಿತ್ಯ ಮಿತಿಗಿಂತ ಹೆಚ್ಚು ಬಾರ ಹೊತ್ತು ಜಿಲ್ಲಾದ್ಯಂತ ಸಂಚರಿಸುತ್ತಿದ್ದು ಅಧಿಕ ಭಾರ ಹೊತ್ತ ಈ ಘನ ವಾಹನಗಳ ಸಂಚಾರದಿಂದ ಜಿಲ್ಲೆಯ ರಸ್ತೆಗಳು ಹಾಳಾಗುತ್ತಿವೆ.
ಈ ಬಗ್ಗೆ ಮಾತನಾಡಿದ ಕಾರ್ಮಿಕ ಮುಖಂಡ ಪಿ.ಆರ್ .ಭರತ್ ಜಿಲ್ಲಾಧಿಕಾರಿಗಳ ಆದೇಶವನ್ನು ಅನುಷ್ಠಾನಕ್ಕೆ ತರುವಲ್ಲಿ ಅಧಿಕಾರಿಗಳು ವಿಫಲರಾಗಿದ್ದು ಅಧಿಕಾರಿಗಳೇ ಸಂಚಾರಕ್ಕೆ ನೆರವಾಗುತ್ತಿದ್ದಾರೆ. ಮರಗಳ ಸಾಗಾಟಕ್ಕೆ ಮಾತ್ರ ಸ್ವಲ್ಪ ಮಟ್ಟಿನ ನಿಯಂತ್ರಣ ಮಾಡುತ್ತಿದ್ದು ಉಳಿದ ಸರಕುಗಳನ್ನು ಟನ್ಗಟ್ಟಲೆ ತುಂಬಿ ಸಾಗಾಟ ಮಾಡುತ್ತಿರುವದನ್ನು ಯಾರು ತಡೆಯುತ್ತಿಲ್ಲ. ಅಧಿಕಾರಿಗಳು ಡಿ ಸಿ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಿದೆ ಹಾಗೂ ಜಿಲ್ಲಾಧಿಕಾರಿಯವರು ಈ ಬಗ್ಗೆ ಗಮನ ಹರಿಸಿ ತಮ್ಮ ಆದೇಶವನ್ನು ಪಾಲಿಸದ ಅಧಿಕಾರಿಗಳ ವಿರುದ್ದ ಮತ್ತು ಆದೇಶವನ್ನು ಧಿಕ್ಕರಿಸಿ ಸಂಚರಿಸುತ್ತಿರುವ ಭಾರೀ ವಾಹನಗಳನ್ನು ಮುಟ್ಟುಗೋಲು ಹಾಕಿಕೊಂಡು ಕಠಿಣ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದ್ದಾರೆ. -ಸುಬ್ರಮಣಿ, ಸಿದ್ದಾಪುರ