ನಾಪೋಕ್ಲು, ಜು. 23: ಕೊಡಗಿನಲ್ಲಿ ಪರಿಸರ ಸಂರಕ್ಷಣೆಗೆ ದೆಹಲಿ ಮೂಲದ ಮೋಬಿಯಸ್ ಫೌಂಡೇಶನ್ ಪಣತೊಟ್ಟಿದೆ. ನಾಪೋಕ್ಲುವಿನ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸೋಮವಾರಪೇಟೆ ತಾಲೂಕಿನ ದೊಡ್ಡಬೆಟ್ಟದಲ್ಲಿ ಸುಮಾರು ಆರು ಸಾವಿರ ಹಣ್ಣಿನ ಗಿಡಗಳನ್ನು ನೆಡುವ ಕಾರ್ಯ ಆರಂಭಿಸಿದೆ.

ನಾಪೋಕ್ಲುವಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದ ಪ್ರದೇಶದಲ್ಲಿ ಜೆಸಿಬಿ ಯಂತ್ರದ ಸಹಾಯದಿಂದ ಕಾಡುಗಿಡಗಳನ್ನು ತೆರವುಗೊಳಿಸಲಾಗಿದೆ. ಸುಮಾರು ಐವತ್ತು ವರ್ಷಗಳಿಂದ ಕಾಲೇಜು ಸುತ್ತಮುತ್ತಲಿನಲ್ಲಿ ಬೆಳೆದಂತಹ ಕಾಡು ರಸ್ತೆ ಆವರಣಕ್ಕೂ ಚಾಚಿ ಕಾಲೇಜು ರಸ್ತೆ ಕಾಣದಂತಿತ್ತು. ಇದೀಗ ಮೋಬಿಯಸ್ ಫೌಂಡೇಶನ್ ವತಿಯಿಂದ ಸುಮಾರು 15 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಕಾಡುಕಡಿದು ಕಾಲೇಜು ಆವರಣದ ಆರು ಏಕರೆಯಷ್ಟು ಪ್ರದೇಶದಲ್ಲಿ ಅರಣ್ಯ ಇಲಾಖೆಯಿಂದ ಖರೀದಿಸಿದ ಜಂಬುನೇರಳೆ, ಬೇವು, ನೆಲ್ಲಿ, ನೇರಳೆ ಮುಂತಾದ ಹಣ್ಣಿನ ಗಿಡಗಳನ್ನು ನೆಡಲಾಗುತ್ತಿದ್ದು, ಮುಂದಿನ 5 ವರ್ಷಗಳವರೆಗೆ ಫೌಂಡೇಶನ್ ವತಿಯಿಂದ ಗಿಡಗಳನ್ನು ಪೋಷಿಸಲಾಗುವದು. ಇದರಿಂದಾಗಿ ಕೆಲವೇ ವರ್ಷಗಳಲ್ಲಿ ನಾಪೋಕ್ಲು ವಿದ್ಯಾದೇಗುಲದ ಆವರಣದಲ್ಲಿ ವಿವಿಧ ಬಗೆಯ ಆಕರ್ಷಕ ಹಣ್ಣಿನ ಮರಗಳು ಕಂಗೊಳಿಸಿ ಹಣ್ಣುಗಳ ಘಮ ಸುತ್ತಲಿನಲ್ಲಿ ಪಸರಿಸಲಿದೆ.

ಮೋಬಿಯಸ್ ಫೌಂಡೇಶನ್ ವತಿಯಿಂದ ದೇಶದ ಹಲವೆಡೆಗಳಲ್ಲಿ ವೃತ್ತಿಪರ ತರಬೇತಿಯನ್ನು ನಡೆಸಲಾಗುತ್ತಿದ್ದು; ತರಬೇತಿಯೊಂದಿಗೆ ಉದ್ಯೋಗದ ಖಾತರಿಯನ್ನು ಸಂಸ್ಥೆಯೇ ನೀಡುತ್ತದೆ. ವೃತ್ತಿಪರ ತರಬೇತಿಯನ್ನು ನಡೆಸಲು ಕಟ್ಟಡದ ಅಗತ್ಯತೆ ಕುರಿತು ನಾಪೋಕ್ಲು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರ ಗಮನಕ್ಕೆ ತರಲಾಗಿದ್ದು, ಕಟ್ಟಡ ನೀಡುವ ಬಗ್ಗೆ ಆಶ್ವಾಸನೆ ನೀಡಿದರೆ ನಾಪೋಕ್ಲುವಿನಲ್ಲಿ ವೃತ್ತಿಪರ ತರಬೇತಿ ಕೋರ್ಸ್‍ಗಳನ್ನು ಆರಂಭಿಸಲಿದ್ದು ಇದರಿಂದ ಗ್ರಾಮೀಣ ಪ್ರದೇಶಗಳ ಮಕ್ಕಳಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂಬದು ಫೌಂಡೇಶನ್ ಆಶಯವಾಗಿದೆ.

- ದುಗ್ಗಳ ಸದಾನಂದ