ಶನಿವಾರಸಂತೆ, ಜು. 22: ಗ್ರಾಮೀಣ ಮಾರುಕಟ್ಟೆ ನಿರ್ಮಾಣಕ್ಕಾಗಿ ನಬಾರ್ಡ್ ವತಿಯಿಂದ ನಿರ್ಮಿಸಲಾಗುವ ಯೋಜನೆಯ ಸಂಬಂಧಿಸಿದಂತೆ ಗ್ರಾಮೀಣ ಸಮಿತಿ ರಚನೆ ಮತ್ತು ಸದರಿ ಯೋಜನೆಯ ಅನುಷ್ಠಾನಕ್ಕಾಗಿ ನಡೆದ ಸಭೆಯ ಅದ್ಯಕ್ಷತೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹಮ್ಮದ್ ಗೌಸ್ ವಹಿಸಿದ್ದರು.
ನಬಾರ್ಡ್ ಯೋಜನೆಯ ಸಹಾಯಕ ವ್ಯವಸ್ಥಾಪಕ ಎಂ.ಸಿ. ನಾಣಯ್ಯ ಮಾತನಾಡಿ, ಮೊದಲಿಗೆ ಸಮಿತಿಯನ್ನು ರಚನೆ ಮಾಡಿ ಈ ಯೋಜನೆಯ ಮೊದಲ ಕಂತಿನ ಹಣವನ್ನು ನಬಾರ್ಡ್‍ನಿಂದ ಬಿಡುಗಡೆ ಮಾಡಬೇಕಾದರೆ ಗ್ರಾಮ ಪಂಚಾಯಿತಿಯ ಬಾಪ್ತು ಮುಂಗಡ ಠೇವಣಿ ಫಲಾನುಭವಿಯ ರೂಪದಲ್ಲಿ ರೂ. 1.50 ಲಕ್ಷ ಮೊದಲು ಭರಿಸಬೇಕು ಎಂದರು.
ಇದಕ್ಕೆ ಪೂರಕವಾಗಿ ಮೊದಲಿಗೆ ಗ್ರಾಮ ಪಂಚಾಯಿತಿ ವತಿಯಿಂದ ಗ್ರಾಮೀಣ ಮಾರುಕಟ್ಟೆ ಸಮಿತಿಗೆ ಸಂಬಂಧಿಸಿದಂತೆ ಅಧ್ಯಕ್ಷರು ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅವರ ಹೆಸರಿನಲ್ಲಿ ಪ್ರತ್ಯೇಕವಾದ ಬ್ಯಾಂಕ್ ಖಾತೆಯನ್ನು ತೆರೆಯಬೇಕು. ನಂತರ ನಿಯಮಾನು ಸಾರ ನಬಾರ್ಡ್ ವತಿಯಿಂದ ನೀಡಲಾಗುವ ಮೊತ್ತವನ್ನು ಸದರಿ ಜಂಟಿ ಖಾತೆಗೆ ಒದಗಿಸಲು ಕ್ರಮ ವಹಿಸಲಾಗುವದು ಎಂದರು.
ಸಭೆಯಲ್ಲಿ ಸ್ಥಳೀಯ ಬ್ಯಾಂಕ್ ವ್ಯವಸ್ಥಾಪಕ ಗಣೇಶ್, ಸಹಾಯಕ ಕೃಷಿ ನಿರ್ದೇಶಕ ರಾಜಶೇಖರ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿ.ಜಿ. ಲೋಕೇಶ್, ಗ್ರಾ.ಪಂ. ಉಪಾಧ್ಯಕ್ಷೆ ಗೀತಾ ಹರೀಶ್, ಸದಸ್ಯರು, ಕಾರ್ಯದರ್ಶಿ ತಮ್ಮಯ್ಯಚಾರ್ ಉಪಸ್ಥಿತರಿದ್ದು, ವಿ.ಜಿ. ಲೋಕೇಶ್ ಸ್ವಾಗತಿಸಿ, ವಂದಿಸಿದರು.