ಗೋಣಿಕೊಪ್ಪ ವರದಿ, ಜು. 22: ಬಿದಿರು ಬೆಳೆ ಕೇವಲ ಕೃಷಿಯಲ್ಲ. ಉದ್ದಿಮೆ ಎಂದು ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯ ಮುಖ್ಯಸ್ಥ ಡಾ. ಚೆಪ್ಪುಡೀರ ಕುಶಾಲಪ್ಪ ಅಭಿಪ್ರಾಯಪಟ್ಟರು.

ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರ ಹಾಗೂ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯ ಸಹಯೋಗದಲ್ಲಿ ಕೆವಿಕೆ ಸಭಾಂಗಣದಲ್ಲಿ ಆಯೋಜಿಸಿದ್ದ ಬಿದಿರು ಕೃಷಿ ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾತನಾಡಿದರು.

ಹವಾಮಾನ ಅಸಮತೋಲನದಿಂದ ವಾರ್ಷಿಕ ಬೆಳೆಯಿಂದ ಸ್ಥಳೀಯ ಕೃಷಿಕರು ಹೆಚ್ಚು ನಷ್ಟ ಎದುರಿಸುತ್ತಿದ್ದಾರೆ. ಇದನ್ನು ಸರಿದೂಗಿಸಲು ಹೆಚ್ಚಾಗಿ ಬಹುವಾರ್ಷಿಕ ಬೆಳೆಗೆ ಕೃಷಿಕರು ಮುಂದಾಗುತ್ತಿದ್ದಾರೆ. ಬಿದಿರು ಕೂಡ ಬಹು ವಾರ್ಷಿಕ ಬೆಳೆಯಾಗಿರುವದರಿಂದ ಲಾಭವಿದೆ. ಭಾರತ ದೇಶಕ್ಕೆ ಬಿದಿರು ಆಮದು ಆಗುತ್ತಿರುವದರಿಂದ ಹೆಚ್ಚು ನಷ್ಟವಾಗುತ್ತಿದೆ. ನಾವು ಹೆಚ್ಚು ಬೆಳೆದಷ್ಟು ಆಮದು ಅಗುತ್ತಿರುವದನ್ನು ನಿಯಂತ್ರಿಸಬಹುದು. ಬಿದಿರು ಕೃಷಿ ಮಾತ್ರವಲ್ಲ, ಉದ್ದಿಮೆಯಾಗಿ ಬೆಳವಣಿಗೆ ಕಾಣಲು ಅವಕಾಶವಿದೆ ಎಂದರು.

ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯ ಕೃಷಿ ವಿಜ್ಞಾನಿ ಡಾ. ರಾಮಕೃಷ್ಣ ಹೆಗ್ಡೆ ಪವರ್ ಪಾಯಿಂಟ್ ಮೂಲಕ ಬಿದಿರು ಕೃಷಿ ಮಾಹಿತಿ ನೀಡಿದರು. ಬೇಸಾಯ ಕ್ರಮ, ತಳಿಗಳ ಅಯ್ಕೆ, ಗೊಬ್ಬರ, ಪೋಷಕಾಂಶ ನಿರ್ವಹಣೆ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭ ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರ ಮುಖ್ಯಸ್ಥ ಡಾ. ಸಾಜು ಜಾರ್ಜ್, ವಿಜ್ಞಾನಿ ಡಾ. ಪ್ರಭಾಕರ್ ಉಪಸ್ಥಿತರಿದ್ದರು.