ಸೋಮವಾರಪೇಟೆ, ಜು. 22: ದಕ್ಷಿಣ ಕನ್ನಡ, ಹಾಸನ ಜಿಲ್ಲೆಗಳ ಗಡಿಯನ್ನು ಹೊಂದಿಕೊಂಡಿರುವ ಕೊಡಗಿನ ಪಶ್ಚಿಮಘಟ್ಟ ಪ್ರದೇಶದಲ್ಲಿ ನಕ್ಸಲ್ ಹೆಜ್ಜೆಗಳ ಶಂಕೆ ಮೂಡಿರುವ ಹಿನ್ನೆಲೆ ನಕ್ಸಲ್ ನಿಗ್ರಹ ಪಡೆಯ ಸಿಬ್ಬಂದಿಗಳು ತಾಲೂಕಿನ ಪುಷ್ಪಗಿರಿ ಅರಣ್ಯ ಪ್ರದೇಶದಲ್ಲಿ ಕೂಂಬಿಂಗ್ ನಡೆಸುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಕಳೆದ ಕೆಲ ವರ್ಷಗಳಿಂದ ಕೊಡಗು ಜಿಲ್ಲೆಯಲ್ಲಿ ನಕ್ಸಲರ ಹೆಜ್ಜೆಗಳು ಕಾಣಿಸಿಕೊಂಡು ಆತಂಕ ಸೃಷ್ಟಿಸಿರುವ ಘಟನೆಗಳು ನಡೆದಿದ್ದು, ಪುಷ್ಪಗಿರಿ ಬೆಟ್ಟಶ್ರೇಣಿಯ ತಳಭಾಗದ ಗ್ರಾಮಗಳಲ್ಲಿ ನಕ್ಸಲರು ಆಗಮಿಸಿದ್ದ ಮಾಹಿತಿಯ ಮೇರೆಗೆ ಈ ಹಿಂದೆಯೂ ಕೂಂಬಿಂಗ್ ನಡೆಸಲಾಗಿತ್ತು.

ಇಂದು ಬೆಳಿಗ್ಗೆ 7 ಗಂಟೆ ಸುಮಾರಿಗೆ ಪುಷ್ಪಗಿರಿ ಬೆಟ್ಟದ ತಟದಲ್ಲಿರುವ ಶ್ರೀ ಶಾಂತಮಲ್ಲಿ ಕಾರ್ಜುನ ದೇವಾಲಯಕ್ಕೆ ಆಗಮಿಸಿದ ನಕ್ಸಲ್ ನಿಗ್ರಹ ಪಡೆಯ ಒಂದು ತುಕಡಿ, ಅಲ್ಲಿಂದ ಕೆಲ ದೂರದವರೆಗೆ ಅರಣ್ಯ ಪ್ರದೇಶದಲ್ಲಿ ಪರಿಶೀಲನೆ ನಡೆಸಿದೆ ಎನ್ನಲಾಗಿದೆ.

ಇದೀಗ ಮಳೆಗಾಲ ಎದುರಾಗಿರುವ ಹಿನ್ನೆಲೆ ನಕ್ಸಲರು ಆಹಾರ ಸಾಮಗ್ರಿ ಸಂಗ್ರಹಿಸಲು ಗ್ರಾಮಗಳಿಗೆ ಆಗಮಿಸುವ ಸಂಶಯದಿಂದ ಪುಷ್ಪಗಿರಿ ಅರಣ್ಯ ವ್ಯಾಪ್ತಿಯಲ್ಲಿ ನಕ್ಸಲ್ ನಿಗ್ರಹ ಪಡೆಯ ಸಿಬ್ಬಂದಿಗಳು ಕೂಂಬಿಂಗ್ ನಡೆಸುತ್ತಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಇದರೊಂದಿಗೆ ಸ್ಥಳೀಯ ಅರಣ್ಯ ಇಲಾಖಾ ಸಿಬ್ಬಂದಿಗಳು ಒಂಟಿ ಮನೆಗಳಿಗೆ ತೆರಳಿ ನಕ್ಸಲರ ಆಗಮನದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ. ಮಳೆಗಾಲ ಆಗಮಿಸಿರುವ ಹಿನ್ನೆಲೆ ನಕ್ಸಲರು ಆಹಾರ ಸಾಮಗ್ರಿಗಳಿಗಾಗಿ ಅರಣ್ಯಕ್ಕೆ ಒತ್ತಿಕೊಂಡಂತೆ ಇರುವ ಒಂಟಿ ಮನೆಗಳಿಗೆ ಆಗಮಿಸಬಹುದು ಎಂಬ ಸಂಶಯದಿಂದ ಎಎನ್‍ಎಫ್ ಸಿಬ್ಬಂದಿಗಳು ಮುಂಜಾಗ್ರತೆಗಾಗಿ ‘ಅಲರ್ಟ್’ ಆಗಿದ್ದಾರೆ.

ಇಂದು ಪುಷ್ಪಗಿರಿ ವ್ಯಾಪ್ತಿಗೆ ಆಗಮಿಸಿದ

(ಮೊದಲ ಪುಟದಿಂದ) ತಂಡ ಭಾರೀ ಮಳೆಯ ಹಿನ್ನೆಲೆ ಅರಣ್ಯದೊಳಗೆ ತೆರಳಲು ಅಸಾಧ್ಯವಾಗಿದ್ದು, ಮುಂದಿನ ವಾರ ಪುಷ್ಪಗಿರಿಗೆ ಆಗಮಿಸುವ ನಿರೀಕ್ಷೆಯಿದೆ. ಪುಷ್ಪಗಿರಿಯಿಂದ ತೆರಳಿದ ತಂಡ ಹಾಸನ ಜಿಲ್ಲೆಗೆ ಒಳಗೊಂಡ ಬಿಸಿಲೆಗೆ ತೆರಳಿದೆ. ಬಿಸಿಲೆಯಿಂದ ಕೆಲ ಕಿ.ಮೀ. ಮುಂದಕ್ಕೆ ಸಾಗಿದರೆ ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯ ಎದುರಾಗಲಿದ್ದು, ಮೂರು ಜಿಲ್ಲೆಗಳ ಸಂಗಮ ಸ್ಥಳವಾದ ಪಶ್ಚಿಮಘಟ್ಟದಲ್ಲಿ ನಕ್ಸಲ್ ಚಲನವಲನದ ಬಗ್ಗೆ ನಿಗಾ ಇರಿಸಿದೆ ಎನ್ನಲಾಗಿದೆ.

ಒಟ್ಟಿನಲ್ಲಿ ಪಶ್ಚಿಮಘಟ್ಟ ಪ್ರದೇಶದಲ್ಲಿ ನಕ್ಸಲ್ ಚಟುವಟಿಕೆಗೆ ಕಡಿವಾಣ ಹಾಕಲು ನಿಗ್ರಹ ಪಡೆಯ ಸಿಬ್ಬಂದಿಗಳು ಈಗಾಗಲೇ ಕಾರ್ಯರೂಪಕ್ಕೆ ಇಳಿದಿದ್ದಾರೆ. ಸ್ಥಳೀಯ ಅರಣ್ಯ ಇಲಾಖಾ ಸಿಬ್ಬಂದಿಗಳು, ಪುಷ್ಪಗಿರಿ ವೈಲ್ಡ್ ಲೈಫ್‍ನ ಸಿಬ್ಬಂದಿಗಳ ಸಹಿತ ಸ್ಥಳೀಯರಿಂದ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ನಕ್ಸಲ್ ಹೆಸರು ಕೇಳುತ್ತಿದ್ದಂತೆ ಈ ಭಾಗದ ಸಾರ್ವಜನಿಕರು ಭಯಾತಂಕಕ್ಕೆ ಒಳಗಾಗಿದ್ದಾರೆ.

ಕಳೆದ 2012ರಲ್ಲಿ ಪುಷ್ಪಗಿರಿ ಅರಣ್ಯ ಪ್ರದೇಶದಲ್ಲಿ ಎಎನ್‍ಎಫ್‍ನ ಶಸ್ತ್ರ ಸಜ್ಜಿತ ಸಿಬ್ಬಂದಿಗಳು ಕೂಂಬಿಂಗ್ ನಡೆಸಿದ್ದರು. ಅದಾದ ನಂತರ ಈ ಭಾಗದಲ್ಲಿ ನಕ್ಸಲರ ಹೆಜ್ಜೆಗಳು ಪತ್ತೆಯಾಗಿರಲಿಲ್ಲ. ಕಳೆದ 2016ರಲ್ಲಿ ನಕ್ಸಲರು ಅರಣ್ಯದೊಳಗೆ ಬಂದಿದ್ದಾರೆ ಎಂಬ ಊಹಾಪೋಹ ಕೇಳಿಬಂದಿದ್ದನ್ನು ಹೊರತುಪಡಿಸಿದರೆ ಇಲ್ಲಿಯವರೆಗೆ ಅಂತಹ ಆತಂಕ ಇರಲಿಲ್ಲ. ನಕ್ಸಲರು ಓಡಾಡುವ ಸಂಶಯದ ಹಿನ್ನೆಲೆ ಎಎನ್‍ಎಫ್ ಸಿಬ್ಬಂದಿಗಳು ಕೂಂಬಿಂಗ್ ನಡೆಸುವದು ಮಾಮೂಲಿ ಪ್ರಕ್ರಿಯೆ ಎಂದು ಅರಣ್ಯ ಇಲಾಖಾ ಸಿಬ್ಬಂದಿಯೋರ್ವರು ಅಭಿಪ್ರಾಯಿಸಿದ್ದಾರೆ.

- ವಿಜಯ್ ಹಾನಗಲ್