ಮಡಿಕೇರಿ, ಜು. 21: 2018ರ ಆಗಸ್ಟ್ ತಿಂಗಳಿನಲ್ಲಿ ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ ಪ್ರಕೃತಿ ವಿಕೋಪ ಸಂದರ್ಭ ಸಂಕಷ್ಟಕ್ಕೀಡಾದ ಕುಟುಂಬದ ವಿದ್ಯಾರ್ಥಿಗಳಿಗೆ ಕೊಡಗು ಸೇವಾ ಭಾರತಿ ಹಾಗೂ ಬೆಂಗಳೂರಿನ ಉತ್ತರ ಕರ್ನಾಟಕ ಸ್ನೇಹ ಲೋಕ ಸಂಸ್ಥೆಯ ವತಿಯಿಂದ ವಿದ್ಯಾನಿಧಿ ಸಹಾಯಧನವನ್ನು ವಿತರಿಸಲಾಯಿತು.

ನಗರದ ಕಾಫಿ ಕೃಪಾ ಕಟ್ಟಡದಲ್ಲಿರುವ ಸೇವಾ ಭಾರತಿ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಉತ್ತರ ಕರ್ನಾಟಕ ಸ್ನೇಹ ಲೋಕ ಸಂಸ್ಥೆಯ ಖಜಾಂಚಿ ಪ್ರಕಾಶ್ ಸಿ. ರಾಜಗೊಳಿ ವಿದ್ಯಾರ್ಥಿಗಳಿಗೆ ಸಹಾಯಧನದ ಚೆಕ್ ವಿತರಿಸಿ ಮಾತನಾಡಿ, ನಮ್ಮ ಸಂಸ್ಥೆಯು ಇಲ್ಲಿನ ಸೇವಾ ಭಾರತಿ ಸಂಸ್ಥೆಯ ಸಹಯೋಗದೊಂದಿಗೆ ಎಲ್ಲಾ ವಿದ್ಯಾರ್ಥಿಗಳ ಮನೆಯ ಪರಿಸ್ಥಿತಿ ಯನ್ನು ಅವಲೋಕಿಸಿ ಇಂದು ವಿತರಣೆ ಮಾಡುತ್ತಿದ್ದೇವೆ. ಸಮಾಜದ ಹಣವನ್ನು ಪ್ರಾಮಾಣಿಕತೆಯಿಂದ ಇಂದು ಸಮಾಜದ ನಿರಾಶ್ರಿತ ಬಂಧುಗಳಿಗೆ ತಲುಪಿಸುವ ಕೆಲಸವನ್ನು ಮಾತ್ರ ನಮ್ಮ ಸಂಸ್ಥೆ ಮಾಡುತ್ತಿದ್ದು, ಸಮಾಜದ ನೋವಿಗೆ ಸ್ಪ್ಪಂಧಿಸುವದು ಎಲ್ಲರ ಕರ್ತವ್ಯ ಎಂದರು.

ಸೇವಾ ಭಾರತಿ ಸಂಸ್ಥೆಯ ಉಪಾಧ್ಯಕ್ಷ ಕೆ.ಕೆ. ಮಹೇಶ್‍ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಸೇವಾ ಭಾರತಿ ಸಂಸ್ಥೆಯು ಪ್ರಕೃತಿ ವಿಕೋಪ ಸಂಭವಿಸಿದ ದಿನದಿಂದಲೇ ನಿರಾಶ್ರಿತರ ಸೇವೆಯಲ್ಲಿ ತೊಡಗಿದೆ. ನಿರಾಶ್ರಿತರು ಧೈರ್ಯ ಕಳೆದುಕೊಳ್ಳದೆ ಮುಂದಿನ ದಿನಗಳಲ್ಲಿ ಆತ್ಮವಿಶ್ವಾಸದಿಂದ ಜೀವನ ಸಾಗಿಸುವಂತೆ ಸಲಹೆ ನೀಡಿದರು.

ಇದೇ ಸಂದರ್ಭ ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ವಿವಿಧ ವಿದ್ಯಾಸಂಸ್ಥೆಯಲ್ಲಿ ಜಿಲ್ಲೆಯ ಪ್ರಕೃತಿ ವಿಕೋಪ ನಿರಾಶ್ರಿತರಾದ 45 ಮಂದಿ ವಿದ್ಯಾರ್ಥಿಗಳು ಸೇವಾ ಭಾರತಿ ಸಂಸ್ಥೆಯ ಸಹಯೋಗ ದೊಂದಿಗೆ ವಿದ್ಯಾಭ್ಯಾಸ ಮಾಡುತ್ತಿರು ವದನ್ನು ಮಹೇಶ್‍ಕುಮಾರ್ ನೆನಪಿಸಿಕೊಂಡರು.

ಮದೆ, ಮೊಣ್ಣಂಗೇರಿ, ಕಾಲೂರು, ಎಮ್ಮೆತ್ತಾಳು, ಮೇಘತ್ತಾಳು, ಹೊದಕಾನ, ಕಿರಗಂದೂರು ಗ್ರಾಮಗಳ ಪ್ರಕೃತಿ ವಿಕೋಪ ಸಂಕಷ್ಟಕ್ಕೆ ಒಳಗಾದ 30 ಮಂದಿ ವಿದ್ಯಾರ್ಥಿಗಳಿಗೆ ಈ ಸಂದರ್ಭ ವಿದ್ಯಾನಿಧಿ ಸಹಾಯಧನ ವನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಉತ್ತರ ಕರ್ನಾಟಕ ಸ್ನೇಹ ಲೋಕ ಸಂಸ್ಥೆಯ ಟ್ರಸ್ಟಿ ಕುಮಾರ್ ಹಂದೂರ್, ಅವರ ಪುತ್ರ ನಂದೀಶ್ ಹಂದೂರು, ಗಾಳಿಬೀಡು ಗ್ರಾ.ಪಂ. ಸದಸ್ಯ ಧನಂಜಯ, ವಿದ್ಯಾರ್ಥಿಗಳ ಪೋಷಕರು ಹಾಗೂ ಇತರರು ಇದ್ದರು. ಸೇವಾ ಭಾರತಿ ಸಂಸ್ಥೆಯ ಚಂದ್ರ ಉಡೋತ್ ಕಾರ್ಯಕ್ರಮ ನಿರೂಪಿಸಿದರೆ, ಖಜಾಂಚಿ ಡಿ.ಹೆಚ್. ತಮ್ಮಪ್ಪ ವಂದಿಸಿದರು. ಕೊನೆಯಲ್ಲಿ ಶಾಂತಿಮಂತ್ರವನ್ನು ಪಠಿಸಲಾಯಿತು.