ಕೂಡಿಗೆ, ಜು. 21: ಹುದುಗೂರು ಗ್ರಾಮದಲ್ಲಿ ಬ್ರಿಟೀಷರ ಕಾಲದಲ್ಲಿ ಗೋ ಸಂರಕ್ಷಣೆಗಾಗಿ ನಿರ್ಮಿಸಲಾಗಿದ್ದ ಗೋ ಸದನವನ್ನು (ಕೊಟ್ಟಿಗೆ) ಮುಚ್ಚಿದ್ದು, ಈ ಕೇಂದ್ರವನ್ನು ಮರು ಪ್ರಾರಂಭಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಬ್ರಿಟೀಷರ ಕಾಲದಲ್ಲಿ ನಿರ್ಮಿಸಲಾಗಿದ್ದ ಈ ಗೋ ಕೇಂದ್ರವನ್ನು ಕಳೆದ 75 ವರ್ಷಗಳಿಂದ ಹುದುಗೂರು ಗ್ರಾಮಸ್ಥರುಗಳಿಗೆ ಅನುಕೂಲವಾಗುವಂತೆ ತಮ್ಮ ಹಸುಗಳನ್ನು ಸಂರಕ್ಷಣೆ ಮಾಡುತ್ತಿದ್ದರು. ಕಳೆದ ಎರಡು ವರ್ಷಗಳಿಂದ ಪಕ್ಕದಲ್ಲಿದ್ದ ಸುಮಾರು 2 ಎಕರೆ ಪ್ರದೇಶದಲ್ಲಿ ಸಾಮಾಜಿಕ ಅರಣ್ಯ ಇಲಾಖೆಯವರು ರೈತರಿಗೆ ವಿತರಣೆ ಮಾಡಲು ಸಸಿಗಳನ್ನು ಬೆಳೆಸಲು ಉಪಯೋಗಿಸುತ್ತಿದ್ದರು. ಆದರೆ ಇದೀಗ ಜಾಗವನ್ನು ಸಮತಟ್ಟು ಮಾಡಿ ಗಿಡಗಳನ್ನು ಬೆಳೆಸಲಾಗುತ್ತಿದೆ.
ಈ ಸರ್ಕಾರಿ ಜಾಗವು ಕಳೆದ 20 ವರ್ಷಗಳಿಂದ ಗೋ ಸದನಕ್ಕಾಗಿ ಮೀಸಲಿಡಲು ಗ್ರಾಮ ಪಂಚಾಯಿತಿಯ ಮಾಸಿಕ ಸಭೆಯಲ್ಲಿ ತೀರ್ಮಾನಿಸಿ ಪ್ರಸ್ತಾವನೆಯ ಮುಖೇನ ತಾಲೂಕು ಮತು ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಕಳುಹಿಸಲಾಗಿದೆ. ಹುದುಗೂರು ಗ್ರಾಮಗಳ ವ್ಯಾಪ್ತಿಯಲ್ಲಿ ಮದಲಾಪುರ, ಮಾವಿನಹಳ್ಳ, ಸೀತೆಗದ್ದೆ, ಹುಣಸೇಪಾರೆ, ಬ್ಯಾಡಗೊಟ್ಟ ಗ್ರಾಮಗಳಲ್ಲಿ ಹೆಚ್ಚು ಜನರು ಹೈನುಗಾರಿಕೆಯಲ್ಲಿ ತೊಡಗಿದ್ದಾರೆ. ಇದರ ಸಮೀಪದಲ್ಲಿ ಪಶುಪಾಲನಾ ಇಲಾಖೆಯ ವೈದ್ಯಕೀಯ ಕೇಂದ್ರವು ಇದೆ. ಈ ಕೇಂದ್ರದ ಆಸುಪಾಸಿನಲ್ಲಿಯೇ ಹಾರಂಗಿ ನದಿಯೂ ಹರಿಯುತ್ತಿದ್ದು, ಹಸುಗಳಿಗೆ ಬೇಕಾಗುವ ಹುಲ್ಲು ಬೆಳೆಯಲು, ದನ-ಕರುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ, ಚಿಕಿತ್ಸೆ ನೀಡಲು ಪಶು ವೈದ್ಯಕೀಯ ಶಾಲೆ ಇದೆ. ಉತ್ತಮವಾದ ಗೋ ಸದನವೂ ಇನ್ನೂ ಸುಸ್ಥಿತಿಯಲ್ಲೇ ಇರುವದರಿಂದ ಹಸು ಮತ್ತು ಕರುಗಳನ್ನು ಬೇರೆ ಬೇರೆ ಕಟ್ಟಲು ಕೊಠಡಿಗಳು, ಹುಲ್ಲು ಸಂಗ್ರಹದ ಕೊಠಡಿ ಜಾನುವಾರುಗಳ ಸಂರಕ್ಷಣೆಗೆ ಸೂಕ್ತ. ಈ ಗೋ ಸದನವನ್ನು ಪುನರ್ ಪ್ರಾರಂಭಿಸಿ, ಹೈನುಗಾರಿಕೆಯಲ್ಲಿ ತೊಡಗಿರುವ ರೈತರಿಗೆ ಪ್ರೋತ್ಸಾಹ ನೀಡಬೇಕು ಎಂದು ಆಗ್ರಹಿಸಿದ್ದಾರೆ.
- ಕೆ.ಕೆ. ನಾಗರಾಜ್ಶೆಟ್ಟಿ