ಕೂಡಿಗೆ, ಜು. 21: ಕೂಡಿಗೆಯ ಕೃಷಿ ಕ್ಷೇತ್ರದ ಆವರಣದಲ್ಲಿರುವ ಸರಕಾರಿ ಕ್ರೀಡಾ ಪ್ರೌಢಶಾಲೆಯಲ್ಲಿ ಹಾಕಿ ಕ್ರೀಡಾಪಟುಗಳಿಗೆ ಅನುಕೂಲ ವಾಗುವಂತೆ ಹಾಕಿ ಟರ್ಫ್ ಮೈದಾನದ ಕಾಮಗಾರಿಯು ಶೇ. 95 ರಷ್ಟು ನಡೆದಿದ್ದು, ಶೀಘ್ರದಲ್ಲೇ ಕ್ರೀಡಾಪಟುಗಳ ಅಭ್ಯಾಸಕ್ಕೆ ದೊರಕಲಿದೆ. ಕಳೆದ 4 ವರ್ಷಗಳಿಂದ ಸರಕಾರದಿಂದ ಹಣ ಬಿಡುಗಡೆ ಯಾಗಿಲ್ಲ ಎಂಬ ನೆಪದಲ್ಲಿ ಕಾಮ ಗಾರಿ ಆಮೆಗತಿಯಲ್ಲಿ ಸಾಗುತ್ತಿತ್ತು. ಕಳೆದ ತಿಂಗಳು ಕರ್ನಾಟಕ ರಾಜ್ಯ ಸರ್ಕಾರದ ಕ್ರೀಡಾ ಇಲಾಖೆಯ ಆಯುಕ್ತರು ಮತ್ತು ಜಂಟಿ ನಿರ್ದೇಶಕರು ಕೂಡಿಗೆ ಕ್ರೀಡಾಶಾಲೆಗೆ ಭೇಟಿ ನೀಡಿದ ಸಂದರ್ಭ, ಶೀಘ್ರವಾಗಿ ಕಾಮಗಾರಿಯನ್ನು ಪೂರ್ಣ ಗೊಳಿಸಲು ಗುತ್ತಿಗೆದಾರರಿಗೆ ಸೂಚನೆ ನೀಡಿದ್ದರು. ಇದಾದ ನಂತರ ಇದೀಗ ಹಣ ಕಾಮಗಾರಿ ನಡೆಸಲು ಹಣ ಬಿಡುಗಡೆಯಾಗಿ ರಾಜ್ಯಮಟ್ಟದ ಮೇಲಧಿಕಾರಿಗಳಿಂದ ಗುತ್ತಿಗೆ ದಾರನಿಗೆ ಸೂಚನೆ ಬಂದ ಕೂಡಲೇ ಕಾಮಗಾರಿ ಪ್ರಗತಿಯಲ್ಲಿ ಸಾಗಿ ಶೇ. 95 ರಷ್ಟು ಮುಗಿದಿದೆ.

ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳು ಹಾಕಿ ಅಭ್ಯಾಸ ಮಾಡುತ್ತಿರುವ ಈ ಶಾಲಾ ಆವರಣಕ್ಕೆ ಇದೀಗ ಹಾಕಿ ಟರ್ಫ್ ದೊರೆತಿದ್ದು, ಇಲಾಖೆಯ ವತಿಯಿಂದ ಸ್ಥಳ ಹಾಗೂ ವ್ಯವಸ್ಥಿತ ಕಾಮಗಾರಿಯು ನಡೆಯಲು ಅನುಕೂಲ ಮಾಡಿಕೊಡ ಲಾಗಿದ್ದು, ಕ್ರೀಡಾಪಟುಗಳಿಗೆ ಅನುಕೂಲ ವಾಗಲಿದೆ.

ಅದೇ ರೀತಿಯಲ್ಲಿ ಸರಕಾರ ಮತ್ತು ಕ್ರೀಡಾ ಇಲಾಖೆ ಹಂತ ಹಂತವಾಗಿ ಕಾಮಗಾರಿಗೆ ಹಣ ಬಿಡುಗಡೆ ಮಾಡುವ ಮೂಲಕ ಹಾಕಿ ಕ್ರೀಡಾ ಕಲಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ಹಾಗೂ ಅಂತರ ರಾಷ್ಟ್ರೀಯ ಮಟ್ಟದ ತಂತ್ರಜ್ಞಾನದ ವ್ಯವಸ್ಥೆಯಲ್ಲಿ ಉತ್ತಮ ತಾಂತ್ರಿಕತೆಯೊಂದಿಗೆ ಹಾಕಿ ಟರ್ಫ್ ಅನ್ನು ಹಾಕಲಾಗಿದೆ.

ಜಿಲ್ಲೆಯ ಕ್ರೀಡಾಶಾಲೆಯ ವಿದ್ಯಾರ್ಥಿಗಳು ಮಣ್ಣಿನ ಮೈದಾನದಲ್ಲಿ ಹಾಕಿ ಅಭ್ಯಾಸಿಸಿ, ರಾಜ್ಯ ಮತ್ತು ಅಂತರರಾಜ್ಯ ಮಟ್ಟದಲ್ಲಿ ಕೀರ್ತಿ ತರುವದರ ಜೊತೆಗೆ ದೇಶವನ್ನು ಪ್ರತಿನಿಧಿಸಿರುವ ಕ್ರೀಡಾಪಟುಗಳು ಈ ಶಾಲೆಯ ಕ್ರೀಡಾಪಟುಗಳು ಎಂಬ ಹೆಗ್ಗಳಿಕೆಗೆ ಕೂಡಿಗೆ ಕ್ರೀಡಾಶಾಲೆ ಪಾತ್ರವಾಗಿದೆ. ಪೊನ್ನಂಪೇಟೆ ಮತ್ತು ಮಡಿಕೇರಿಯಲ್ಲಿ ಹಾಕಿ ಟರ್ಫ್ ಮೈದಾನಗಳು ಇದ್ದು, ಇದೀಗ ಕೂಡಿಗೆಯಲ್ಲಿಯೂ ಸುಸಜ್ಜಿತವಾಗಿ ಅತೀ ಶೀಘ್ರದಲ್ಲಿ ಹಾಕಿ ಕಲಿಗಳಿಗೆ ಅವಕಾಶ ನೀಡಲು ಇಲಾಖೆಯ ಅಧಿಕಾರಿಗಳು ಪ್ರಯತ್ನ ಮಾಡುತ್ತಿ ದ್ದಾರೆ. ಸರ್ಕಾರದ ಮೇಲಧಿಕಾರಿಗಳು ಗುತ್ತಿಗೆದಾರನಿಗೆ ಆದೇಶ ನೀಡಿದನ್ವಯ ಗುತ್ತಿಗೆದಾರರು ಈಗಾಗಲೇ ಶೇ. 95 ರಷ್ಟು ಕಾಮಗಾರಿಯನ್ನು ಪೂರ್ಣ ಗೊಳಿಸಿದ್ದು, ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಸದುಪಯೋಗಪಡಿಸಿಕೊಳ್ಳಲಾಗುವದು. ಶೀಘ್ರದಲ್ಲೇ ಈ ನೂತನ ಹಾಕಿ ಟರ್ಫ್ ಮೈದಾನ ಉದ್ಘಾಟನೆ ಗೊಳ್ಳಲಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಅಧಿಕಾರಿ ಜಯಲಕ್ಷ್ಮಿ ಬಾಯಿ ತಿಳಿಸಿದ್ದಾರೆ.