ವೀರಾಜಪೇಟೆ, ಜು. 21: ವೀರಾಜಪೇಟೆ ತಾಲೂಕಿನ 8ನೇ ಸಾಹಿತ್ಯ ಸಮ್ಮೇಳನವು ವೀರಾಜಪೇಟೆ ತಾಲೂಕಿನ ಅರಮೇರಿಯ ಕಳಂಚೇರಿ ಮಠದಲ್ಲಿ ತಾ. 29 ನಡೆಯಲಿದ್ದು ವೀರಾಜಪೇಟೆ ತಾಲೂಕು ಘಟಕವು ಸಮ್ಮೇಳನಕ್ಕೆ ಭರದ ಸಿದ್ಧತೆ ನಡೆಸುತ್ತಿದೆ.

ಅರಮೇರಿ ಮಠದ ಲಿಂಗ್ಯೆಕ್ಯ ಶ್ರೀ ದೊಡ್ಡ ಮಹಂತಪ್ಪ ಸ್ವಾಮಿ ಸಭಾಂಗಣದಲ್ಲಿ ಧ್ವಜಾರೋಹಣದ ಮೂಲಕ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗುತ್ತದೆ. ಸಮ್ಮೇಳನದಲ್ಲಿ ವಿಚಾರಗೋಷ್ಠಿ, ಕಾವ್ಯ ಕುಂಚ, ಕವಿ ಗೊಷ್ಠಿ, ಸಾಧಕರಿಗೆ ಸನ್ಮಾನ, ಗ್ರಾಮದ ಹಲವು ವಿಷಯಗಳ ನಿರ್ಣಯ ಸೇರಿದಂತೆ ವಿಭಿನ್ನ ಕಾರ್ಯಕ್ರಮಗಳು ನಡೆಯಲಿವೆ.

ಮೆರವಣಿಗೆ: ಮುಖ್ಯ ರಸ್ತೆಯಿಂದ ಸಮ್ಮೇಳನ ನಡೆಯುವ ಮಠದ ಸಭಾಂಗಣದವರೆಗೆ ಮಂಗಳವಾದ್ಯ, ಕಳಸ, ಸ್ತಬ್ಧಚಿತ್ರಗಳು, ಕಲಾತಂಡಗಳ ಮೆರುಗಿನೊಂದಿಗೆ ಮೆರವಣಿಗೆಯ ಮೂಲಕ ಸಮ್ಮೇಳನಾಧ್ಯಕ್ಷರನ್ನು ಕರೆತರಲಾಗುತ್ತದೆ.

ದ್ವಾರಗಳು-ವೇದಿಕೆ: ಸಮ್ಮೇಳನ ನಡೆಯುವ ಅರಮೇರಿ ಗ್ರಾಮದಲ್ಲಿ ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿ ದಿವಂಗತರಾದವರ ಹೆಸರಿನಲ್ಲಿ 4 ದ್ವಾರಗಳನ್ನು ನಿರ್ಮಿಸಲಾಗುತ್ತದೆ. ಕಾರ್ಗಿಲ್ ವೀರ ಪೆಮ್ಮಂಡ ಕಾವೇರಪ್ಪ ಸ್ಮಾರಕ ದ್ವಾರ, ಸ್ವಾತಂತ್ರ್ಯ ಹೋರಾಟಗಾರ ಕುವೇಲರ ಸೂಫಿ ಸ್ಮಾರಕ ದ್ವಾರ, ಜನಪದ ವೀರ ಮಹಿಳೆ ಅಳಮಂಡ ದೊಡ್ಡವ್ವ ಸ್ಮಾರಕ ದ್ವಾರ ಹಾಗೂ ಸಭಾಂಗಣದ ಮುಂಭಾಗದ ಮುಖ್ಯ ದ್ವಾರಕ್ಕೆ ಲಿಂಗೈಕ್ಯ ಶ್ರೀ ಶಾಂತಮಲ್ಲ ಸ್ವಾಮಿ ಮುಖ್ಯ ದ್ವಾರ ಎಂದು ಹೆಸರಿಡಲಾಗಿದೆ. ವೇದಿಕೆಗೆ ಲಿಂಗ್ಯೆಕ್ಯ ಶ್ರೀ ಸೋಮಶೇಖರ ಸ್ವಾಮಿ ವೇದಿಕೆ ಹಾಗೂ ಸಭಾಂಗಣಕ್ಕೆ ಲಿಂಗ್ಯೆಕ್ಯ ಶ್ರೀ ದೊಡ್ಡ ಮಹಂತಪ್ಪ ಸ್ವಾಮಿ ಸಭಾಂಗಣ ಎಂದು ನಾಮಕರಣ ಮಾಡಲಾಗಿದೆ.

ಸಾಧಕರಿಗೆ ಸನ್ಮಾನ: ತಾಲೂಕು ಸಮ್ಮೇಳನದಲ್ಲಿ ವೀರಾಜಪೇಟೆ ತಾಲೂಕಿನ ಶತಾಯುಷಿ ಕಾಣಂಡ ಬೊಳ್ಳವ್ವ ಹಾಗೂ ತಾಲೂಕಿನಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮುಲ್ಲೆಂಗಡ ಬೇಬಿ ಚೋಂದಮ್ಮ, ಪುಟ್ಟಿಚಂಡ ಅಯ್ಯಣ್ಣ, ಮಾತಂಡ ಕಂಬು ಉತ್ತಯ್ಯ, ಚಟ್ಟಕುಟ್ಟಡ ಬೊಳ್ಯಪ್ಪ, ಬೀಕಚಂಡ ನಂಜಪ್ಪ, ಬಿ.ಬಿ ಜಾಜಿ, ಬಿ.ಕೆ. ರಮೇಶ್, ಕೆ.ಎ. ಹಂಸ, ಡಿ. ಮಂಜುನಾಥ್, ತಾತಂಡ ಪ್ರತಾಪ್ ಬೆಳ್ಯಪ್ಪ, ಪಿ. ಲಕ್ಷ್ಮೀನಾರಾಯಣ, ಪಿ.ಜಿ. ಪಾರ್ವತಿ, ಸದಾಶಿವ ಗೌಡ ಎಂಬವರನ್ನು ಸನ್ಮಾನಿಸಲಾಗುತ್ತದೆ.

ಸಮ್ಮೇಳನದ ಉದ್ಘಾಟನೆಯನ್ನು ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ನೆರವೇರಿಸಲಿದ್ದು, ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ದಿವ್ಯ ಸಾನಿದ್ಯ ವಹಿಸಲಿದ್ದಾರೆ ಜಿಲ್ಲಾ ಕಸಾಪ ಅಧ್ಯಕ್ಷ ಲೋಕೇಶ್ ಸಾಗರ್ ಜಿಲ್ಲಾ ಪಂಚಾಯತ್ ಅಧ್ಯಕ್ಷ ಬಿ.ಎ. ಹರೀಶ್ ಸೇರಿದಂತೆ ಜಿಲ್ಲಾ ಪಂಚಾಯತಿ, ತಾಲೂಕು ಪಂಚಾಯತಿ, ಗ್ರಾಮ ಪಂಚಾಯಿತಿ ಸದಸ್ಯರುಗಳು ಸೇರಿದಂತೆ ಕಸಾಪ ಪದಾಧಿಕಾರಿಗಳು, ಸದಸ್ಯರುಗಳು ಪಾಲ್ಗೊಳ್ಳಲಿದ್ದಾರೆ.

ಸಮ್ಮೇಳನಾಧ್ಯಕ್ಷರಾಗಿ ಬೇಬಿ ಚಿಣ್ಣಪ್ಪ

8ನೇ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಸಾಹಿತಿ ಕೆ.ಬೋಯಿಕೇರಿ ಗ್ರಾಮದ ನಾಯಕಂಡ ಬೇಬಿ ಚಿಣ್ಣಪ್ಪ ಆಯ್ಕೆ ಆಗಿದ್ದಾರೆ.

ಬೇಬಿ ಚಿಣ್ಣಪ್ಪ ವೀರಾಜಪೇಟೆ ತಾಲೂಕು ಅರಮೇರಿ ಗ್ರಾಮದ ನಾಯಕಂಡ ಚಿಣ್ಣಪ್ಪ ಅವರ ಪತ್ನಿಯಾಗಿದ್ದು, ಕೆ. ಬೋಯಿಕೇರಿಯಲ್ಲಿ ನೆಲೆಸಿದ್ದಾರೆ. ಇವರಿಗೆ ನಾಲ್ವರು ಮಕ್ಕಳಿದ್ದಾರೆ.

ಸಮಾಜ ಸೇವಕಿಯಾಗಿ ಹಲವಾರು ಸಂಘ ಸಂಸ್ಥೆಗಳಲ್ಲಿ ಅಧ್ಯಕ್ಷಿಣಿಯಾಗಿ ಉಪಾಧ್ಯಕ್ಷಿಣಿಯಾಗಿ, ನಿರ್ದೇಶಕಿಯಾಗಿ ಸೇವೆ ಸಲ್ಲಿಸುತ್ತಿದ್ದು, ಕಲಾವಿದೆಯಾಗಿ ಮಡಿಕೇರಿ ಆಕಾಶವಾಣಿಯಲ್ಲಿ ಇವರ ಭಕ್ತಿಗೀತೆ ಬೆಳಿಗ್ಗೆ ಪ್ರಸಾರವಾಗುತ್ತಿದೆ. ಮತ್ತು ಕತೆಗಳು ಚಿಂತನಗಳು ಕೂಡ ಮೂಡಿ ಬರುತ್ತಿದೆ.

ಇವರಿಗೆ ಬೆಂಗಳೂರು ಕನ್ನಡ ಅಭಿವೃದ್ದಿ ಬಳಗವು ಕುವೆಂಪು ಪ್ರಶಸ್ತಿ, ಲೇಖಕರ ಬಳಗದಿಂದ ಸನ್ಮಾನ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸನ್ಮಾನ, ಬೆಂಗಳೂರು ಕೊಡವ ಸಮಾಜದ ವತಿಯಿಂದ ಸನ್ಮಾನ, ಕದನೂರು ಕೆ. ಬೋಯಿಕೇರಿ (ಕೊಡವ ಕೇರಿ) ಸಂಘ, ಮಹಿಳಾ ಸಹಕಾರ ಸಂಘದ ವತಿಯಿಂದ ಸನ್ಮಾನ ಸೇರಿದಂತೆ ಹಲವು ಗೌರವಗಳು ಲಭಿಸಿವೆ.

ಇವರಿಂದ ಕನ್ನಡದಲ್ಲಿ ಸಾಂಸಾರಿಕ ಕಾದಂಬರಿಯಾದ ಕಾವ್ಯಾನಂದ ಮತ್ತು ಪ್ರಕೃತಿಯ ಮಡಿಲಲ್ಲಿ ಹಾಗೂ ಮುಗಿಲ ಮಲ್ಲಿಗೆ ಕವನ ಪುಸ್ತಕ ಪ್ರಕಟವಾಗಿವೆ. ಸಣ್ಣ ಕಥಾ ಸಂಕಲನದಲ್ಲಿ ದುರಾಸೆಯ ಫಲ, ವಿಧಿ ತಂದ ಹೂ, ಹೆತ್ತವರು, ಮೆಚ್ಚಿದ ಹೆಣ್ಣು, ಅದೃಷ್ಟ ಬಂದಾಗ, ವಂಶೋಧ್ದಾರಕ, ಋಣಾನುಬಂಧ, ಬಾಡಿದ ಹೂ, ಅಸೂಯೆ, ಪ್ರಕಟವಾಗಿದ್ದು, ಕೊಡವ ಭಾಷೆಯಲ್ಲಿ ಜಿಕ್ಕ್, ಪ್ರೀತಿಯ ಬಳ್ಳಿ, ಐದು ಮುತ್ತುಗಳು, ತಬ್ಬಲಿ ಮಗಳು ಮತ್ತು ತೇನ್ಗೂಡು ಎಂಬ ಕವನ ಸಂಕಲನ ಕೊಡವ ಸಾಹಿತ್ಯ ಅಕಾಡೆಮಿಯಿಂದ ಪ್ರಕಟವಾಗಿದೆ.

ಅರಮೇರಿ ಕಳಂಚೇರಿ ಮಠದಲ್ಲಿ 8ನೇ ತಾಲೂಕು ಸಮ್ಮೇಳನ ವೀರಾಜಪೇಟೆ ತಾಲೂಕಿನ ಎಲ್ಲಾ ಸಾಹಿತ್ಯಾಭಿಮಾನಿಗಳಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ಎಲ್ಲರ ಸಹಕಾರ ಅಗತ್ಯ ಎಂದು ಘಟಕದ ಅಧ್ಯಕ್ಷ ಮಧೋಶ್ ಪೂವಯ್ಯ ಕೋರಿದ್ದಾರೆ.

-ಸುಬ್ರಮಣಿ, ಸಿದ್ದಾಪುರ