ಮಡಿಕೇರಿ, ಜು. 21: ಜಿಲ್ಲೆಯ ಮೂರು ತಾಲೂಕಿನ ಕೆಲವು ನ್ಯಾಯಬೆಲೆ ಅಂಗಡಿಗಳಲ್ಲಿ ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ದರ ಪಡೆಯುತ್ತಿರುವ ಬಗ್ಗೆ ದೂರುಗಳು ಕೇಳಿ ಬಂದಿರುತ್ತದೆ. ಅನ್ನಭಾಗ್ಯ ಯೋಜನೆಯಡಿ ಅಕ್ಕಿ ಉಚಿತವಾಗಿ, ತೊಗರಿ ಬೇಳೆ ಕೆ.ಜಿ.ಗೆ 38 ರೂ.ಗಳನ್ನು ಪಡೆದು ನ್ಯಾಯಬೆಲೆ ಅಂಗಡಿದಾರರು ಪಡಿತರ ಚೀಟಿ ಫಲಾನುಭವಿಗಳಿಗೆ ವಿತರಿಸಬೇಕಾಗಿದೆ. ಇದರೊಂದಿಗೆ ಗ್ರಾಮಾಂತರ ಆದ್ಯತಾ ಅನಿಲ ರಹಿತ ಪಡಿತರ ಚೀಟಿದಾರರಿಗೆ 3 ಲೀಟರ್ ಸೀಮೆಎಣ್ಣೆ ಹಾಗೂ ಎಲ್ಲಾ ವರ್ಗದ ಅನಿಲ ಸಹಿತ ಪಡಿತರ ಚೀಟಿದಾರರು ಸೀಮೆಎಣ್ಣೆ ಪಡೆಯಲು ಆನ್‍ಲೈನ್‍ಲ್ಲಿ ನೋಂದಣಿ ಮಾಡಿಕೊಂಡಲ್ಲಿ ಅಂತಹ ಪಡಿತರ ಚೀಟಿದಾರರಿಗೆ 1 ಲೀಟರ್ ಸೀಮೆಎಣ್ಣೆಯನ್ನು ರೂ. 35 ರಂತೆ ಪ್ರತೀ ಲೀಟರ್‍ಗೆ ವಿತರಿಸಲಾಗುತ್ತಿದೆ. ಸಾರ್ವಜನಿಕರು ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ದರ ನೀಡದಂತೆ ಕೋರಿದೆ.

ದರಕ್ಕೆ ಸಂಬಂಧಿಸಿದ ನಾಮಫಲಕಗಳನ್ನು ನ್ಯಾಯಬೆಲೆ ಅಂಗಡಿಗಳ ಮುಂಭಾಗದಲ್ಲಿ ಪ್ರದರ್ಶಿಸಲಾಗಿದೆ. ನ್ಯಾಯಬೆಲೆ ಅಂಗಡಿ ಮಾಲೀಕರು ಅಥವಾ ಕಾರ್ಯದರ್ಶಿಗಳು ಹೆಚ್ಚಿನ ದರ ವಸೂಲಿ ಮಾಡಿದ್ದಲ್ಲಿ ಉಪ ನಿರ್ದೇಶಕರ ಕಚೇರಿಗೆ ಅಥವಾ ಆಯಾ ತಾಲೂಕಿನ ತಹಶೀಲ್ದಾರ್ ಕಚೇರಿಗೆ ದೂರನ್ನು ಸಲ್ಲಿಸಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕ ಗೌರವ್‍ಕುಮಾರ್ ಕೋರಿದ್ದಾರೆ.