ಗೋಣಿಕೊಪ್ಪಲು, ಜು. 21: ವಿವಿಧ ಸೇವಾ ಕಾರ್ಯಗಳನ್ನು ಪರಿಗಣಿಸಿ ಗೋಣಿಕೊಪ್ಪಲು ಲಯನ್ಸ್ ಸಂಸ್ಥೆಗೆ ಪ್ರಶಸ್ತಿ ನೀಡಲಾಗಿದೆ.
ಕೊಡಗಿನಲ್ಲಿ ಕಳೆದ ವರ್ಷ ಆದ ಅನಾಹುತಗಳಿಗೆ ಹಗಲು-ರಾತ್ರಿ ಎನ್ನದೆ ತಕ್ಷಣ ಸ್ಪಂದಿಸಿ, ಅಲ್ಲಿನ ನಿರಾಶ್ರಿತರಿಗೆ ಅವಶ್ಯಕತೆ ಇದ್ದ ಅಕ್ಕಿ, ಹಾಲು, ಕುಡಿಯುವ ನೀರು, ಕಂಬಳಿ, ಬಟ್ಟೆ, ವೀಲ್ ಚೇರ್, ವೈದ್ಯರುಗಳ ವ್ಯವಸ್ಥೆ, ನಿರಾಶ್ರಿತರಿಗೆ ಶೌಚಾಲಯಗಳ ವ್ಯವಸ್ಥೆ ಹಾಗೂ ವಿಶೇಷವಾಗಿ ಮಹಾ ಮಳೆಯಲ್ಲಿ ಮನೆ ಕಳೆದುಕೊಂಡ ಮೂರು ಕುಟುಂಬದವರಿಗೆ ಕುಂಬಾರಬಾಣಿ ಹಾಗೂ ಸೂರ್ಲಬ್ಬಿಗಳಲ್ಲಿ ದಾನಿಗಳಿಂದ ಹಾಗೂ ಸದಸ್ಯರಿಂದ ಹಣ ಸಂಗ್ರಹಿಸಿ ಮೂರು ಮನೆಗಳನ್ನು 2018-19ನೇ ಸಾಲಿನ ಅಧ್ಯಕ್ಷ ಪುತ್ತಾಮನೆ ಸ್ಮರಣ್ ಸುಬಾಷ್, ಅಧ್ಯಕ್ಷತೆಯಲ್ಲಿ ನಿರ್ಮಿಸಿಕೊಡಲಾಗಿದೆ. ಇದಲ್ಲದೇ ಸುಮಾರು 2000 ಜನರಿಗೆ ಉಪಯೋಗ ಆಗುವಂತೆ ಗೋಣಿಕೊಪ್ಪ, ಬಾಳೆಲೆ, ಬಿರುನಾಣಿ, ಹಾಗೂ ಪಾಲಿಬೆಟ್ಟದಲ್ಲಿ ಆರು ಆರೋಗ್ಯ ತಪಾಸಣಾ ಶಿಬಿರಗಳನ್ನು ಆಯೋಜಿಸಲಾಗಿತ್ತು
ಲಯನ್ಸ್ ಕ್ಲಬ್ ಬೆಂಗಳೂರು ಸಹಯೋಗದಲ್ಲಿ ಇವರುಗಳ ಸೇವಾ ಮನೋಭಾವವನ್ನು ಪರಿಗಣಿಸಿ ವೈದ್ಯರುಗಳಾದ ಡಾ. ಗ್ರೀಶ್ಮ, ಡಾ ಯತಿರಾಜ್, ಹಾಗೂ ಡಾ. ಶಿವಪ್ಪ ಅವರನ್ನು ಸನ್ಮಾನಿಸಲಾಗಿತ್ತು.
ಪ್ರಾಂತೀಯ ಅಧ್ಯಕ್ಷ ಪಿ. ಎನ್. ಪೆಮ್ಮಯ್ಯ ಸಹಕಾರದೊಂದಿಗೆ, ಶೀತಲ ಶವಗಾರೊಂದನ್ನು ದ.ಕೊಡಗಿನ ಜನರ ಅನೂಕೂಲಕ್ಕಾಗಿ ಲೋಪಮುದ್ರ ಆಸ್ಪತ್ರೆಯಲ್ಲಿ ಇರಿಸಲಾಗಿದೆ, ಬಾಡಿಗೆ ರೂಪದಲ್ಲಿ ಇದನ್ನು ನೀಡಲಾಗುತ್ತಿದೆ.
ಈ ಎಲ್ಲ ಸೇವೆಗಳನ್ನು ಪರಿಗಣಿಸಿ ಲಯನ್ಸ್ ಜಿಲ್ಲೆ 317ಡಿ ಯ ಕೊಡಗಿನ ಹನ್ನೊಂದು ಕ್ಲಬ್ ಸೇರಿದಂತೆ ನಾಲ್ಕು ಕಂದಾಯ ಜಿಲ್ಲೆಗಳಾದ ಹಾಸನ, ಮಂಗಳೂರು, ಚಿಕ್ಕಮಗಳೂರಿನ 105 ಕ್ಲಬ್‍ಗಳ ಪೈಕಿ, ಸುಮಾರು ಎರಡು ಲಕ್ಷಕ್ಕಿಂತ ಅಧಿಕ ಪಾಯಿಂಟ್ ಗಳೊಂದಿಗೆ 5ನೇ ಅತ್ಯುತ್ತಮ ಕ್ಲಬ್ ಎಂದು ರಾಜ್ಯಪಾಲ ದೇವದಾಸ್ ಭಂಡಾರಿ, ಸುಕಲತ ಭಂಡಾರಿ ದಂಪತಿಗಳು ಸನ್ಮಾನಿಸಿದರು.
ಕ್ಲಬ್‍ನ ನಿರ್ಗಮಿತ ಅಧ್ಯಕ್ಷ ಪುತ್ತಾಮನೆ ಸ್ಮರಣ್, ಕಾರ್ಯದರ್ಶಿ ಪಾರುವಂಗಡ ಜೀವನ್, ಖಜಾಂಚಿ ಕೊಂಗಂಡ ಅಚ್ಚಯ್ಯ ಹಾಗೂ ಹಾಲಿ ಅಧ್ಯಕ್ಷ ಕಳ್ಳಂಗಡ ನಿತಿ ಸನ್ಮಾನ ಸ್ವೀಕರಿಸಿದರು.