ಮಡಿಕೇರಿ, ಜು. 19 : ಕರ್ನಾಟಕ - ಕೇರಳ ಗಡಿಯಲ್ಲಿರುವ ಕೊಡಗು ಜಿಲ್ಲೆಯ ಕುಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ; ಒಂದು ಸುತ್ತಿನ ಪಯಣದೊಂದಿಗೆ ‘ಶಕ್ತಿ’ ವಾಸ್ತವದೆಡೆಗೆ ಹೆಜ್ಜೆ ಇರಿಸಿದಾಗ; ನಮ್ಮನ್ನಾಳುವ ಸರಕಾರವೇ ಈ ಭಾಗದಲ್ಲಿ ಎಲ್ಲ ಅಕ್ರಮ ದಂಧೆಗೆ ಕುಮ್ಮಕ್ಕು ನೀಡುತ್ತಿದೆ ಎಂದು ಗ್ರಾಮವಾಸಿಗಳು ಗಂಭೀರ ಆರೋಪ ಮಾಡಿದ್ದಾರೆ. ಸ್ವತಃ ಈ ಕ್ಷೇತ್ರದ ಜಿ.ಪಂ. ಸದಸ್ಯರಾಗಿರುವ ಕಾಂಗ್ರೆಸ್ ಮುಖಂಡ ಶಿವು ಮಾದಪ್ಪ ಮತ್ತು ಬಿಜೆಪಿಯ ಅಲ್ಲಿನ ಮುಖಂಡ ನವೀನ್ ಅಯ್ಯಪ್ಪ ಮತ್ತಿತರರು ಕೊಡಗಿನ ಗಡಿಭಾಗದ ಪರಿಸ್ಥಿತಿ ಕುರಿತು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್ ಅಧ್ಯಕ್ಷತೆಯಲ್ಲಿ ಕುಟ್ಟ ಗ್ರಾಮ ಪಂಚಾಯಿತಿಯಲ್ಲಿ ಜರುಗಿದ ಗ್ರಾಮ ಸಂಪರ್ಕ ಸಭೆಯಲ್ಲಿ ಶಿವು ಮಾದಪ್ಪ ಮಾತನಾಡುತ್ತಾ; ಕುಟ್ಟ ನಕ್ಸಲ್ ಪೀಡಿತ ಸೂಕ್ಷ್ಮ ಪ್ರದೇಶವೆಂದು ಸರಕಾರವೇ ಘೋಷಿಸಿದ್ದರೂ; ಜನತೆಯ ರಕ್ಷಣೆಗಾಗಿ ಪೊಲೀಸ್ ಕೂಡ ಇಲ್ಲದೆ ಒಂದು ರೀತಿಯ ಭಯ ಕಾಡುವಂತಾಗಿದೆ ಎಂದು ಮಾರ್ನುಡಿದರು.ಈ ವೇಳೆ ಬಿಜೆಪಿಯ ನವೀನ್ ಅಯ್ಯಪ್ಪ ಧ್ವನಿಗೂಡಿಸಿ ಇಂತಹ ಸೂಕ್ಷ್ಮ ಪ್ರದೇಶದಲ್ಲಿರುವ ಪೊಲೀಸ್ ಠಾಣೆಯಲ್ಲಿ ಖಾಯಂ ಸರ್ಕಲ್ ಇನ್ಸ್‍ಪೆಕ್ಟರ್, ಸಬ್‍ಇನ್ಸ್‍ಪೆಕ್ಟರ್ ಹುದ್ದೆಗಳು ಖಾಲಿಯಿದ್ದು; (ಮೊದಲ ಪುಟದಿಂದ) ಎಎಸ್‍ಐಗಳು ಪ್ರಭಾರ ಹೊಣೆಗಾರಿಕೆ ನಿರ್ವಹಿಸುತ್ತಿದ್ದಾರೆ ಎಂದು ಬೊಟ್ಟು ಮಾಡಿದರು. ಹೀಗಾಗಿ ಗಡಿಭಾಗದಲ್ಲಿ ಅಕ್ರಮ ಗೋವುಗಳ ಸಾಗಾಟ, ಗಾಂಜಾದಂಧೆ, ಮರಗಳ ಹನನ ಇತ್ಯಾದಿ ಎಗ್ಗಿಲ್ಲದೆ ನಡೆಯುತ್ತಿದ್ದು; ಕೇರಳದ ಕಸವನ್ನೆಲ್ಲ ಕುಟ್ಟ ವ್ಯಾಪ್ತಿಯಲ್ಲಿ ಎಲ್ಲೆಂದರಲ್ಲಿ ತಂದೆಸೆÉಯಲಾಗುತ್ತಿದೆ ಎಂದು ಟೀಕಿಸಿದರು.
ಪೊಲೀಸ್ ವರಿಷ್ಠರಿಗೆ ಮನವಿ : ಕುಟ್ಟದ ಪರಿಸ್ಥಿತಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರ್ಥೈಸಿಕೊಂಡು, ಪೊಲೀಸ್ ಠಾಣೆಗೆ ಅಗತ್ಯ ಸಿಬ್ಬಂದಿಗಳನ್ನು ನಿಯೋಜಿಸಲು ಸರಕಾರದ ಗಮನ ಸೆಳೆಯುವಂತೆ ಒತ್ತಾಯಿಸಿದ ಗ್ರಾಮಸ್ಥರು; ಆ ದಿಸೆಯಲ್ಲಿ ಜಿ.ಪಂ. ಅಧ್ಯಕ್ಷರು ಗೃಹಮಂತ್ರಿಗೆ ಪತ್ರ ರವಾನಿಸಿ ಸೂಕ್ತ ವ್ಯವಸ್ಥೆಗೆ ಕ್ರಮ ವಹಿಸಲು ಸಲಹೆ ನೀಡಿದರು.
ತೋರಿಕೆಗೆ ಸಿಸಿ ಕ್ಯಾಮರಾ: ಗಡಿ ಚೆಕ್‍ಪೋಸ್ಟ್‍ಗಳು ಕಾರ್ಯನಿರ್ವಹಿಸದೆ ಶತಮಾನಗಳ ಅರಣ್ಯ ಮತ್ತು ಪೊಲೀಸ್ ತಪಾಸಣಾಗೇಟ್‍ಗಳು ಇದ್ದ ಕಟ್ಟಡ ಇಂದು ಕಾಡು ಪಾಲಾಗಿದ್ದು; ಹೆದ್ದಾರಿಯಲ್ಲಿ ಅಕ್ರಮ ದಂಧೆ ಬಗ್ಗೆ ನಿಗಾ ವಹಿಸುವ ಆಶಯದಿಂದ ಅಳವಡಿಸಿರುವ ಸಿಸಿ ಕ್ಯಾಮರಾಗಳು ಕಾರ್ಯನಿರ್ವಹಿಸದೆ ಕೇವಲ ತೋರಿಕೆಗೆ ಇವೆ ಎಂದು ಬೊಟ್ಟು ಮಾಡಿದರು.
ಗ್ರಾ.ಪಂ. ಮೌನ: ಕುಟ್ಟ ಗ್ರಾಮ ಪಂಚಾಯಿತಿಯ ಕಚೇರಿ ಪಕ್ಕದಲ್ಲೇ ಗಿರಿಜನ ಬಾಲಕಿಯರ ನಿಲಯವಿದ್ದು; ಅಲ್ಲಿನ ಯಾವದೇ ಸಮಸ್ಯೆಗಳನ್ನು ಜನಪ್ರತಿನಿಧಿಗಳು ತಿರುಗಿಯೂ ನೋಡುತ್ತಿಲ್ಲ ಎಂಬ ಅಸಮಾಧಾನ ಒಂದೆಡೆಯಾದರೆ; ಸಂತೆ ಮಾರುಕಟ್ಟೆ ಇದ್ದರೂ; ರಸ್ತೆ ಬದಿಯೇ ಮೀನು ಇತ್ಯಾದಿ ವ್ಯಾಪಾರಕ್ಕೆ ಅವಕಾಶ ನೀಡಲಾಗಿದ್ದು; ಮೂಗು ಹಿಡಿದು ಓಡಾಡುವಂತಹ ಸನ್ನಿವೇಶ ಎದುರಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಂತೆಯಲ್ಲೇ ಕಸದ ಕೊಂಪೆ : ಇನ್ನು ಕುಟ್ಟದ ಸಂತೆ ಮಾರುಕಟ್ಟೆಯಲ್ಲೇ ಸ್ವಚ್ಛ ಭಾರತ ಯೋಜನೆಯಡಿ ಕಸ ಸಂಗ್ರಹಗಾರ ನಿರ್ಮಿಸಿ; ಹಸಿ ಕಸ ಕೊಳೆಯುವಂತೆ ಮಾಡಿ; ಅಲ್ಲೇ ಗೊಬ್ಬರ ತಯಾರಿಕೆಗೆ ಅವಕಾಶ ಕಲ್ಪಿಸಿರುವ ಪರಿಣಾಮ ಇಡೀ ಪ್ರದೇಶ ದುರ್ನಾತದೊಂದಿಗೆ ಸೊಳ್ಳೆ, ನೊಣಗಳ ಕಾಟದಿಂದ ವಾಸ ಮಾಡಲು ಆಗುತ್ತಿಲ್ಲವೆಂದು ಗೃಹಿಣಿ ಆಯಿಷ ದೂರಿದರು. ಮಾರುಕಟ್ಟೆ ವ್ಯಾಪಾರಿಗಳು ಸಂತೆಯಲ್ಲಿ ಕುಳಿತು ವ್ಯಾಪಾರ ಮಾಡಲು ಆಗುತ್ತಿಲ್ಲವೆಂದು ಕೆಟ್ಟ ವಾಸನೆಯತ್ತ ಮೂಗು ಮುರಿದರು.
ಒಣಕಸದಿಂದಲೂ ಆತಂಕ : ಕುಟ್ಟ ಗ್ರಾ.ಪಂ. ಕಚೇರಿ ಬಳಿಯೇ ಒಣಕಸದ ಗೋದಾಮು ನಿರ್ಮಿಸಿ, ಕಸ ಸಂಗ್ರಹಿಸಲಾಗುತ್ತಿದ್ದು; ಈ ಕಸ ಘಟಕಕ್ಕೆ ಹೊಂದಿಕೊಂಡಂತೆ ಪುಟಾಣಿ ಮಕ್ಕಳ ಅಂಗನವಾಡಿ ಇದೆ. ಇಲ್ಲಿ ಕೂಡ ಮಕ್ಕಳ ಆರೋಗ್ಯ ಮತ್ತು ಭವಿಷ್ಯದ ಬೆಳವಣಿಗೆ ಕುರಿತು ಆತಂಕ ತಲೆದೋರಿದೆ ಎಂದು ಪೋಷಕರು ಆತಂಕ ಹೊರಗೆಡವಿದರು. ಇಲ್ಲಿ ಬಡ ಕಾರ್ಮಿಕರ ಮಕ್ಕಳಷ್ಟೇ ಅಂಗನವಾಡಿಗೆ ಬರುತ್ತಾರೆ; ಹಾಗಾಗಿ ಈ ಸ್ಥಿತಿ ಎಂದು ಕೆಲವರು ಟೀಕಿಸಿದರು.
ಆಟೋ ಚಾಲಕರ ಆಕ್ರೋಶ : ಕುಟ್ಟ ಹೆದ್ದಾರಿಯ ಬದಿ ಆಟೋ ರಿಕ್ಷಾಗಳಿಗೆ ನಿಲುಗಡೆ ಕಲ್ಪಿಸಿರುವ ಗ್ರಾಮ ಪಂಚಾಯಿತಿಯು; ಮಾಸಿಕ ರೂ. 40 ರಂತೆ ಪ್ರತಿಯೊಬ್ಬ ಚಾಲಕನಿಂದ ಹಣ ಸಂಗ್ರಹಿಸುತ್ತಿದೆ; ಈ ಸ್ಥಳ ಕೆಸರಿನ ಕೊಂಪೆಯಾಗಿದ್ದು; ಕನಿಷ್ಟ ಸೌಲಭ್ಯ ಕಲ್ಪಿಸುತ್ತಿಲ್ಲವೆಂದು ‘ಶಕ್ತಿ’ ಮುಖಾಂತರ ಗಮನ ಸೆಳೆದರು.
ಆನೆ ಕಂದಕಕ್ಕೆ ಕಸ : ಕುಟ್ಟಕ್ಕೆ ಹೊಂದಿಕೊಂಡಿರುವ ಕೇರಳದ ಮಂದಿ ಅಲ್ಲಿನ ಆಸ್ಪತ್ರೆಗಳು, ರೆಸಾರ್ಟ್‍ಗಳು, ಮಾರುಕಟ್ಟೆ ಮುಂತಾದೆಡೆಯ ಕೊಳೆತು ದುರ್ನಾತ ಬೀರುವ ಕಸವನ್ನು ವಾಹನಗಳಲ್ಲಿ ತಂದು ಎಲ್ಲೆಂದರಲ್ಲಿ ಆನೆ ಕಂದಕಗಳಲ್ಲಿ ಎಸೆಯುತ್ತಿದ್ದು; ಹೆದ್ದಾರಿಯಲ್ಲಿ ಸಂಚರಿಸಲು ಸಾಧ್ಯವಾಗದಷ್ಟು ದುರ್ನಾತ ಬೀರುವಂತಾಗಿದೆ ಎಂದು ಗ್ರಾಮಸ್ಥರು ಬೊಟ್ಟು ಮಾಡಿದರು.
ಇತ್ಯರ್ಥ ಭರವಸೆ : ಜಿ.ಪಂ. ಅಧ್ಯಕ್ಷರು ಹಾಗೂ ಸ್ಥಾಯಿ ಸಮಿತಿ ಸೇರಿದಂತೆ ಇತರ ಜನಪ್ರತಿನಿಧಿಗಳು ಸಮಸ್ಯೆ ಬಗೆಹರಿಸುವ ದಿಸೆಯಲ್ಲಿ ಕ್ರಮಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ತಾಕೀತು ಮಾಡಿದರಲ್ಲದೆ; ಅಗತ್ಯ ಇರುವ ಕಡೆ ಸಿಸಿ ಕ್ಯಾಮರಾ ಅಳವಡಿಸಿ ಪರಿಸ್ಥಿತಿ ಹತೋಟಿಗೆ ತರುವಂತೆ ತಿಳಿ ಹೇಳಿದರು.
ಅಲ್ಲದೇ ಜಿ.ಪಂ. ಸಾಮಾನ್ಯ ಸಭೆಯಲ್ಲಿ ಈ ಎಲ್ಲ ಸಮಸ್ಯೆಗಳ ಬಗ್ಗೆ ಚರ್ಚಿಸಲು ಸೂಕ್ತ ಪರಿಹಾರ ಕಂಡು ಹಿಡಿಯಲು ಪ್ರಯತ್ನಿಸುವದಾಗಿ ಅಧ್ಯಕ್ಷ ಬಿ.ಎ. ಹರೀಶ್ ಹಾಗೂ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಭರವಸೆ ನೀಡಿದರು. ಕುಟ್ಟ ಗ್ರಾ.ಪಂ. ಅಧ್ಯಕ್ಷೆ ಲೀಲಾವತಿ, ಜಿ.ಪಂ. ಪ್ರತಿನಿಧಿಗಳಾದ ಸಿ.ಕೆ. ಬೋಪಣ್ಣ, ಪ್ರಥ್ಯು ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಗ್ರಾ.ಪಂ. ಸದಸ್ಯರು, ಗ್ರಾಮಸ್ಥರು ಸಭೆಯಲ್ಲಿ ಪಾಲ್ಗೊಂಡಿದ್ದರು.