ಕುಶಾಲನಗರ, ಜು. 19: ವಾಲ್ಮೀಕಿ ನಾಯಕ ಸಮುದಾಯದ ಧರ್ಮಗುರು ರಾಜನಹಳ್ಳಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ಕುಶಾಲನಗರಕ್ಕೆ ಭೇಟಿ ನೀಡಿದರು. ಕುಶಾಲನಗರದ ಪ್ರವಾಸಿ ಮಂದಿರದಲ್ಲಿ ಜನಾಂಗ ಬಾಂಧವರಿಗೆ ಆಶೀರ್ವಚನ ನೀಡಿದ ಅವರು ಪರಿಶಿಷ್ಟ ಜನಾಂಗದ ಶೇ. 7.5 ಮೀಸಲಾತಿಯ ಹೋರಾಟದ ಬಗ್ಗೆ ಸಮಾಜದ ಪ್ರಮುಖರೊಂದಿಗೆ ಚರ್ಚೆ ನಡೆಸಿದರು.

ಸಮಾಜದ ರಾಜ್ಯ ಘಟಕದ ಪ್ರಮುಖರಾದ ಹರ್ತಿಕೋಟೆ ವೀರೇಂದ್ರ ಸಿಂಹ ಮಾತನಾಡಿ, ಸಮುದಾಯ ಬಾಂಧವರ ಅಭಿವೃದ್ಧಿಗೆ ಮೀಸಲಾತಿ ಅತ್ಯಗತ್ಯವಾಗಿದೆ. ಈ ನಿಟ್ಟಿನಲ್ಲಿ ಪ್ರಸನ್ನಾನಂದ ಸ್ವಾಮೀಜಿ ಅವರು ರಾಜ್ಯಾದ್ಯಂತ ಪಾದಯಾತ್ರೆ ಕೈಗೊಂಡು ಹೋರಾಟ ನಡೆಸಿದ ಬಗ್ಗೆ ಮನವರಿಕೆ ಮಾಡಿದರು.

ಕೊಡಗು ಜಿಲ್ಲಾ ವಾಲ್ಮೀಕಿ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಮಲ್ಲಪ್ಪ, ಪ್ರಧಾನ ಕಾರ್ಯದರ್ಶಿ ಕೆ.ಎನ್.ಅಶೋಕ್, ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಚಂದನ್ ಕುಮಾರ್, ಜಿಪಂ ಸದಸ್ಯೆ ಕೆ.ಆರ್.ಮಂಜುಳಾ, ಮುಳ್ಳುಸೋಗೆ ಗ್ರಾ.ಪಂ. ಅಧ್ಯಕ್ಷೆ ಭವ್ಯ, ರಾಜ್ಯ ಘಟಕದ ಪ್ರಮುಖ ಜಗದೀಶ್ ಮತ್ತಿತರರು ಇದ್ದರು.

ಹೋರಾಟದ ಎಚ್ಚರಿಕೆ : ನಾಯಕ ಸಮುದಾಯದ 6 ದಶಕಗಳ ಬೇಡಿಕೆ ಈಡೇರಿಕೆಗೆ ಸರಕಾರ ಮುಂದಾಗದಿದ್ದಲ್ಲಿ ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗುವದು ಎಂದು ಪ್ರಸನ್ನಾನಂದ ಸ್ವಾಮೀಜಿ ಎಚ್ಚರಿಸಿದ್ದಾರೆ.

ಕುಶಾಲನಗರದ ಪ್ರವಾಸಿ ಮಂದಿರದಲ್ಲಿ ಸಮುದಾಯ ಬಾಂಧವರ ಸಭೆಯಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮುದಾಯದ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯಾದ್ಯಂತ ಪಾದಯಾತ್ರೆ, ಹೋರಾಟ ಕೈಗೊಂಡ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಎರಡು ತಿಂಗಳ ಗಡುವು ನೀಡಿದೆ. ಎರಡು ತಿಂಗಳ ಒಳಗಾಗಿ ಬೇಡಿಗೆ ಈಡೇರಿಸದಿದ್ದಲ್ಲಿ ಹೋರಾಟ ಹಮ್ಮಿಕೊಳ್ಳಲಾಗುವದು.

ಎರಡು ತಿಂಗಳ ಕಾಲ ಕೈಗೊಂಡ ಪಾದಯಾತ್ರೆ ಸಂದರ್ಭ ಸಹಕರಿಸಿದವರಿಗೆ ಧನ್ಯವಾದ ಸಲ್ಲಿಸುವ ಹಿನ್ನೆಲೆಯಲ್ಲಿ ಎಲ್ಲೆಡೆ ಸಂಚರಿಸಲಾಗುತ್ತಿದೆ ಎಂದರು.