ಒಡೆಯನಪುರ, ಜು. 19: ಇಲ್ಲಿಗೆ ಸಮೀಪದ ಕೊಡ್ಲಿಪೇಟೆ ಹಲಸಿನಮರ ಗೌರಮ್ಮ ಶಾಂತಮಲ್ಲಪ್ಪ ಪ್ರಥಮ ದರ್ಜೆ ಕಾಲೇಜು ವತಿಯಿಂದ ಬ್ಯಾಡಗೊಟ್ಟ ಗ್ರಾ.ಪಂ.ಗೆ ಸೇರಿದ ಕ್ಯಾತಿ ಗ್ರಾಮದ ನಿವಾಸಿ ಕೆ.ಎಸ್. ಪರಮೇಶ್ ಎಂಬವರ ಗದ್ದೆಯಲ್ಲಿ ಕಾಲೇಜಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಹಾಗೂ ಉಪನ್ಯಾಸಕರಿಗಾಗಿ 2ನೇ ವರ್ಷದ ಕೆಸರುಗದ್ದೆ ಕ್ರೀಡಾಕೂಟವನ್ನು ಹಮ್ಮಿಕೊಳ್ಳಲಾಯಿತು. ಕೆಸರುಗದ್ದೆ ಕ್ರೀಡಾ ಕೂಟದಲ್ಲಿ ವಿದ್ಯಾರ್ಥಿ, ವಿದ್ಯಾರ್ಥಿನಿ ಯರಿಗಾಗಿ ಪ್ರತೇಕವಾಗಿ ಥ್ರೋಬಾಲ್, ಹಗ್ಗಜಗ್ಗಾಟ ಮತ್ತು 100 ಮೀ. ಓಟದ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಕಾಲೇಜಿನ ಉಪನ್ಯಾಸಕರಿಗಾಗಿ 100 ಮೀ. ಓಟದ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಯಿತು. ಕ್ರೀಡಾಕೂಟ ಪ್ರಾರಂಭಕ್ಕಿಂತ ಮೊದಲು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಭತ್ತ ನಾಟಿ ಮಾಡಲು ಸಿದ್ಧತೆ ಮಾಡಿದ್ದ ಗದ್ದೆಗೆ ಇಳಿದು ನಾಟಿ ಮಾಡಿದರು. ಕ್ರೀಡಾಕೂಟದಲ್ಲಿ ಕಾಲೇಜಿನ 150ಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳು ವಿವಿಧ ಕ್ರೀಡಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ಈ ಸಂದರ್ಭ ವಿದ್ಯಾಸಂಸ್ಥೆ ಪ್ರಾಂಶುಪಾಲ ಎಂ.ಆರ್. ನಿರಂಜನ್, ವಿದ್ಯಾಸಂಸ್ಥೆ ಆಡಳಿತ ಮಂಡಳಿ ಕಾರ್ಯದರ್ಶಿ ಕೆ.ಎಸ್. ಪರಮೇಶ್, ಬ್ಯಾಡಗೊಟ್ಟ ಗ್ರಾ.ಪಂ. ಮಾಜಿ ಅಧ್ಯಕ್ಷ ಕೆ.ಎಸ್. ಗಣೇಶ್, ಗ್ರಾಮದ ಪ್ರಮುಖರಾದ ಕ್ಯಾತಿ ವಾಸು, ಜಯಪ್ಪ, ಷಣ್ಮುಖಯ್ಯ, ಲಕ್ಷ್ಮಣ, ಉಪನ್ಯಾಸಕ ರಾದ ಯೋಗೇಂದ್ರ, ಅಭಿಲಾಷ್, ರೇಣುಕಾ ಮುಂತಾದವರು ಇದ್ದರು.