ಮಡಿಕೇರಿ, ಜು. 19: ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ವತಿಯಿಂದ ಜಿಲ್ಲೆಯಾದ್ಯಂತ ‘ಕನ್ನಡ ಶಾಲೆ ಉಳಿಸಿ ಬೆಳೆಸಿ’ ಅಭಿಯಾನವನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಅಭಿಯಾನದ ಉದ್ಘಾಟನೆ ಹಾಗೂ ಮಡಿಕೇರಿ ತಾಲೂಕಿನ 10 ಶಾಲೆಯ ವಿದ್ಯಾರ್ಥಿಗಳಿಗೆ ಕುರ್ಚಿ ಮತ್ತು ಮೇಜು ವಿತರಿಸುವ ಕಾರ್ಯಕ್ರಮ ತಾ. 20 ರಂದು (ಇಂದು) ಪೆರಾಜೆಯಲ್ಲಿ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಸಂಘಟನೆಯ ಜಿಲ್ಲಾಧ್ಯಕ್ಷ ಉನೈಸ್ ಪೆರಾಜೆ ಹಾಗೂ ಇತರರು, ಕನ್ನಡ ಶಾಲೆಗಳನ್ನು ಮುಚ್ಚುತ್ತಿರುವ ಇಂದಿನ ಸಮಯದಲ್ಲಿ ಜಿಲ್ಲೆಯಾದ್ಯಂತ ಕನ್ನಡ ಶಾಲೆ ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಸಂಘಟನೆ ವತಿಯಿಂದ ಅಧ್ಯಯನ ನಡೆಸಲಾಗುವದಲ್ಲದೆ, ಈ ಕುರಿತು ಸಂಬಂಧಿಸಿದವರ ಗಮನಸೆಳೆಯುವ ಪ್ರಯತ್ನ ಮಾಡಲಾಗುವದು ಎಂದರು. ಜಿಲ್ಲಾ ಉಪಾಧ್ಯಕ್ಷ ಸೂರಜ್ ಹೊಸೂರು ಮಾತನಾಡಿ, ಜಿಲ್ಲೆಯ ಪ್ರತಿಯೊಂದು ಶಾಲೆಗೂ ಭೇಟಿ ನೀಡುವದರೊಂದಿಗೆ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಲಾಗುವದು ಎಂದರು. ಗೋಷ್ಠಿಯಲ್ಲಿ ಸಂಘಟನೆಯ ಮಡಿಕೇರಿ ತಾಲೂಕು ಅಧ್ಯಕ್ಷ ನೌಫಲ್ ಹಾಗೂ ಜಿಲ್ಲಾ ಮಾಧ್ಯಮ ಪ್ರತಿನಿಧಿ ಸತೀಶ್ ಪೆರಾಜೆ ಉಪಸ್ಥಿತರಿದ್ದರು.