ಕೊಯಮತ್ತೂರು, ಜು.19 : ನದಿ ರಕ್ಷಣೆ ಆಂದೋಲನದ ಮಾದರಿಯಲ್ಲಿಯೇ ಕಾವೇರಿ ನದಿ ಸಂರಕ್ಷಣೆಯ ‘‘ಕಾವೇರಿ ಕೂಗು’’ ಎಂಬ ಆಂದೋಲನಕ್ಕೆ ಸೆ.3 ರಂದು ಕೊಡಗು ಜಿಲ್ಲೆಯ ತಲಕಾವೇರಿಯಲ್ಲಿ ಚಾಲನೆ ನೀಡುವದಾಗಿ ಇಶಾ ಫೌಂಡೇಶನ್‍ನ ಮುಖ್ಯಸ್ಥ ಸದ್ಗುರು ಜಗ್ಗಿ ವಾಸುದೇವ್ ಘೋಷಿಸಿದ್ದಾರೆ.
ಕೊಯಮತ್ತೂರು ಬಳಿಯ ಇಶಾ ಫೌಂಡೇಶನ್‍ನಲ್ಲಿ ‘‘ಕಾವೇರಿ ಕೂಗು’’ ಯೋಜನೆ ಬಗ್ಗೆ ಸುದ್ದಿಗಾರರಿಗೆ ಮಾಹಿತಿ ನೀಡಿದ ಜಗ್ಗಿ ವಾಸುದೇವ್, , 2017 ರಲ್ಲಿ ಇಶಾ ಫೌಂಡೇಶನ್ ವತಿಯಿಂದ ಆಯೋಜಿತವಾಗಿದ್ದ ನದಿ ಸಂರಕ್ಷಣೆಯ ಕುರಿತ ಆಂದೋಲನಕ್ಕೆ 16 ಕೋಟಿ ಜನ ಸ್ಪಂದಿಸಿದ್ದರು. ಇದೀಗ ಕಾವೇರಿ ನದಿ ಮಾಲಿನ್ಯ ಮತ್ತು ಕಾವೇರಿ ನದಿ ವರ್ಷದಲ್ಲಿ ತಿಂಗಳ ಕಾಲ ಸಮುದ್ರ ಸೇರದಿರುವಷ್ಟು ಬರಿದಾಗಿರುವದನ್ನು ಗಮನಿಸಿ ‘‘ಕಾವೇರಿ ಕೂಗು’’ ಎಂಬ ನದಿ ರಕ್ಷಣೆಯ ಆಂದೋಲನಕ್ಕೆ ಸೆ.3 ರಿಂದ ಬೈಕ್ ರ್ಯಾಲಿ ಮೂಲಕ ಚಾಲನೆ ನೀಡಲಾಗುತ್ತಿದ್ದು, ತಮಿಳುನಾಡಿನ ತಿರುವಲ್ಲೂರು ಗ್ರಾಮದ ಬಂಗಾಳಕೊಲ್ಲಿ ತೀರದವರೆಗೂ 3 ತಿಂಗಳ ಅವಧಿಯವರೆಗೆ ಕರ್ನಾಟಕ - ತಮಿಳುನಾಡು ರಾಜ್ಯಗಳ ಕಾವೇರಿ ನದಿ ತೀರದ ಗ್ರಾಮಗಳಲ್ಲಿ ಈ ಆಂದೋಲನ ಸಾಗಲಿದೆ ಎಂದು ಮಾಹಿತಿ ನೀಡಿದರು.
ಕಳೆದ 50 ವರ್ಷಗಳಿಗೆ ಹೋಲಿಸಿದರೆ ಕಾವೇರಿ ನದಿ ಶೇ.40 ರಷ್ಟು ನೀರನ್ನು ಕಳೆದುಕೊಂಡಿದೆ. ಇನ್ನು 25 ವರ್ಷಗಳಲ್ಲಿ ಕಾವೇರಿ ನದಿಯೇ ಇಲ್ಲವಾಗುವ ಆತಂಕವಿದೆ. ಕಾವೇರಿ ನದಿ ನಾಶವಾಗಲು ಎಲ್ಲರೂ ಕಾರಣಕರ್ತರಾಗುವಂತಾಗಿದೆ. ಹೀಗಾಗಿ ‘‘ಕಾವೇರಿ ಕೂಗು’’ ಆಂದೋಲನ ಇಂದಿನ ಅನಿವಾರ್ಯತೆಯೆನಿಸಿದೆ ಎಂದೂ ಸದ್ಗುರು ಜಗ್ಗಿ ವಾಸುದೇವ್ ಹೇಳಿದರು. ‘‘ಕಾವೇರಿ ಕೂಗು’’ ಆಂದೋಲನದ ಅಂಗವಾಗಿ ಕಾವೇರಿ ನದಿ ತೀರದಲ್ಲಿ
(ಮೊದಲ ಪುಟದಿಂದ) 242 ಕೋಟಿ ಸಸಿಗಳನ್ನು ನೆಡಲಾಗುತ್ತದೆ ಎಂದು ಸದ್ಗುರು ಮಾಹಿತಿ ನೀಡಿದರು.
ತಮಿಳುನಾಡಿನ ರೈತರಿಗೆ ಕಾವೇರಿ ನದಿ ನಡೆದು ಬಂದರೆ ಮಾತ್ರ ಭಾಗ್ಯಲಕ್ಷಿಯಾಗುತ್ತಾಳೆ. ಕಾವೇರಿ ನದಿ ಪ್ರವಾಹದಂತೆ ಓಡೋಡಿ ಬಂದರೆ ಭದ್ರಕಾಳಿಯಂತಾಗುತ್ತಾಳೆ ಎಂದು ಮಾರ್ಮಿಕವಾಗಿ ನುಡಿದ ಸದ್ಗುರು, ಆಧುನಿಕ ರೀತಿಯಲ್ಲಿ ಕೃಷಿ ಪದ್ದತಿ ಚಿಂತನೆ ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ರೈತರನ್ನು ಆರ್ಥಿಕ ಸಬಲೀಕರಣಗೊಳಿಸಲು ಕರ್ನಾಟಕ ಹಾಗೂ ತಮಿಳುನಾಡು ರಾಜ್ಯ ಸರ್ಕಾರಗಳು ಆರ್ಥಿಕವಾಗಿ ಕೃಷಿ ಪದ್ದತಿಗೆ ಬೆಂಬಲ ನೀಡಬೇಕೆಂದೂ ಹೇಳಿದರು.
ನದಿ ಜೋಡಣೆ ಸಲ್ಲದು
ಕೇಂದ್ರ ಸರ್ಕಾರದ ಮಹತ್ವಾ ಕಾಂಕ್ಷೆಯ ನದಿ ಜೋಡಣೆ ಯೋಜನೆ ಬಗ್ಗೆ ಪ್ರತಿಕ್ರಿಯಿಸಿದ ಸದ್ಗುರು, ಈ ರೀತಿ ಅವೈಜ್ಞಾನಿಕವಾಗಿ ನದಿ ಜೋಡಣೆಯಿಂದ ನದಿಯನ್ನೇ ಅವಲಂಬಿಸಿರುವ ಕೃಷಿಕರಿಗೆ ಯಾವದೇ ಪ್ರಯೋಜನವಾಗದು. ನದಿಜೋಡಣೆ ಜಾರಿಗೊಂಡಲ್ಲಿ ಅದೊಂದು ದುರಂತ ಎಂದೂ ಅವರು ಹೇಳಿದರು.
ಕಿರು ಅಣೆಕಟ್ಟುಗಳನ್ನು ಹೆಚ್ಚಾಗಿ ನಿರ್ಮಿಸುವ ಮೂಲಕವೂ ಕಾವೇರಿಯಂಥ ನದಿಗಳನ್ನು ಉಭಯ ರಾಜ್ಯಗಳಲ್ಲಿ ಸಾಯಿಸಲಾಗುತ್ತಿದೆ ಎಂದು ವಿಷಾದಿಸಿದರು. ಕರ್ನಾಟಕ, ತಮಿಳುನಾಡು ಸರ್ಕಾರಗಳೊಂದಿಗೆ ಚರ್ಚಿಸಿ ಕಿರು ಅಣೆಕಟ್ಟುಗಳಿಗೆ ಕಡಿವಾಣ ಹಾಕುವ ಬಗ್ಗೆ ಯೋಚಿಸುತ್ತಿರುವೆ ಎಂದೂ ಸದ್ಗುರು ಹೇಳಿದರು.
ಇನ್ನಾದರೂ ರಾಜಕೀಯ ಕಾರಣಗಳಿಗೋಸ್ಕರ ಕಾವೇರಿಯನ್ನು ಬಳಸಿಕೊಳ್ಳದೇ ಕಾವೇರಿ ನದಿಯ ಉಳಿವಿನ ಬಗ್ಗೆ ಗಂಭೀರ ಗಮನ ಹರಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟ ಸದ್ಗುರು, ಮುಂದಿನ ಪೀಳಿಗೆಗೂ ಕಾವೇರಿಯ ಪ್ರಯೋಜನ ದೊರಕುವಂತಾಗಬೇಕು ಎಂದೂ ಹೇಳಿದರು.
ಕಾವೇರಿ ಜಲಾನಯನ ಪ್ರದೇಶದ ರೈತಾಪಿ ವರ್ಗವನ್ನು ಅವರದ್ದೇ ಕೃಷಿ ಜಮೀನಿನಲ್ಲಿ ಮರಗಳನ್ನು ಹೆಚ್ಚು ಬೆಳೆಸುವಂತೆ ಪ್ರೇರೇಪಿಸುವ ಮೂಲಕ ವರ್ಷದುದ್ದಕ್ಕೂ ಕಾವೇರಿ ನದಿಯ ನೀರಿನ ಪ್ರಮಾಣ ಕಡಿಮೆಯಾಗದಂತೆ ಗಮನಿಸುವದೂ ಕಾವೇರಿ ಕೂಗಿನ ಮುಖ್ಯ ಉದ್ದೇಶವಾಗಿದೆ. ಮರಗಳನ್ನು ಬೆಳೆಸುವ ನಿಟ್ಟಿನಲ್ಲಿ ರೈತರನ್ನು ಪ್ರೋತ್ಸಾಹಿಸುವ ಸಲುವಾಗಿ ಮೊದಲ 4 ವರ್ಷಗಳ ಕಾಲ ರೈತರಿಗೆ ಆರ್ಥಿಕ ನೆರವನ್ನು ಉಭಯ ಸರ್ಕಾರಗಳು ನೀಡುವಂತೆ ಮನವಿ ಮಾಡುವದಾಗಿಯೂ ಸದ್ಗುರು ಹೇಳಿದರು. ಸಸಿಗಳನ್ನು ನೆಟ್ಟು ಆರ್ಥಿಕವಾಗಿ ಸಬಲರಾಗುವ ಯೋಜನೆಗೆ ತಮಿಳುನಾಡಿನ 70 ಸಾವಿರ ರೈತರು ಈಗಾಗಲೇ ಸ್ಪಂದಿಸಿದ್ದು ಆರ್ಥಿಕವಾಗಿ ಸ್ವಾವಲಂಬಿಗಳಾಗಿದ್ದಾರೆ ಎಂದೂ ಅವರು ಮಾಹಿತಿ ನೀಡಿದರು.