ಗೋಣಿಕೊಪ್ಪಲು, ಜು.20: ಕರ್ನಾಟಕ ಮತ್ತು ಕೇರಳ ಅಂತರರಾಜ್ಯವನ್ನು ಸಂಪರ್ಕಿಸುವ ಕೂಟುಹೊಳೆ ಸೇತುವೆ ಶಿಥಿಲಾವಸ್ಥೆಯಲ್ಲಿದೆ. ನೂರಾರು ವರ್ಷ ಹಳೆಯ ಬ್ರಿಟೀಷರ ಕಾಲದ ಕಿರಿದಾದ ಈ ಸೇತುವೆ ಇದೀಗ ಕುಸಿಯುತ್ತಿದೆ. ಕಬ್ಬಿಣದ ಸೇತುವೆ ಮೇಲೆ ಡಾಂಬರೀಕರಣ ಮಾಡಲಾಗಿದ್ದರೂ, ನಿರ್ವಹಣೆ ಇಲ್ಲದೆ ಇದೀಗ ಹೊಂಡಗಳಾಗಿ ಮಾರ್ಪಟ್ಟಿದೆ. ಇತ್ತ ಕರ್ನಾಟಕ, ಅತ್ತ ಕೇರಳ ರಾಜ್ಯಕ್ಕೆ ಸೇರುವ ಸಂಪರ್ಕ ಸೇತುವೆ ಮೂಲಕ ಹಗಲು- ರಾತ್ರಿ ಸಾವಿರಾರು ವಾಹನಗಳು ಓಡಾಟ ನಡೆಸುತ್ತಿವೆ. ಬಂಡಿಪುರ ಮಾರ್ಗ ಹಾಗೂ ನಾಗರಹೊಳೆ ರಾಷ್ಟ್ರೀಯ ಸರಹದ್ದಿನಲ್ಲಿರುವ ಬಾವಲಿ- ಕೇರಳ ರಸ್ತೆ ಸಂಚಾರವನ್ನು ರಾತ್ರಿ ನಿಷೇಧಿಸಿರುವ ಹಿನ್ನೆಲೆ ಕೊಡಗಿನ ಮಾಕುಟ್ಟ ರಸ್ತೆ ಹಾಗೂ ಕುಟ್ಟ- ಮಾನಂದವಾಡಿ ಮೂಲಕ ಸಾರಿಗೆ ಮತ್ತು ಖಾಸಗಿ ವಾಹನಗಳ ಓಡಾಟ ಅಧಿಕವಾಗುತ್ತಿದೆ. (ಮೊದಲ ಪುಟದಿಂದ) ಕೂಟುಹೊಳೆ ಶಿಥಿಲ ಸೇತುವೆಗೆ ಬದಲಿಯಾಗಿ ಪಕ್ಕದಲ್ಲಿಯೇ ಕೇರಳ ಸರ್ಕಾರ ನೂತನ ಸೇತುವೆ ನಿರ್ಮಾಣ ಕಾರ್ಯ ಆರಂಭಿಸಿದ್ದು, ಕರ್ನಾಟಕ ಅರಣ್ಯ ಇಲಾಖೆಯ ವಿರೋಧದಿಂದಾಗಿ ಅರ್ಧಕ್ಕೆ ನಿಂತಿದೆ. ಇತ್ತ ಮಾಕುಟ್ಟ ರಸ್ತೆ ಓಡಾಟ ಮಳೆಗಾಲದಲ್ಲಿ ಅಪಾಯಕಾರಿಯಾಗಿ ಪರಿಣಮಿಸಿದೆ. ಕಳೆದ ಸಾಲಿನ ಭಾರೀ ಮಳೆಯಿಂದಾಗಿ ಕೊಡಗು ಜಿಲ್ಲೆಯಲ್ಲಿ ಜಲಪ್ರಳಯದಿಂದಾಗಿ 20ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದರು. ಮೊದಲ ಎರಡು ಸಾವು ಸಂಭವಿಸಿದ್ದು ಇದೇ ಮಾಕುಟ್ಟದಲ್ಲಿ. ಕಳೆದ ವರ್ಷ ಜೂ.13 ರಂದು ಕೇರಳದ ಕಡೆ ತೆರಳುತ್ತಿದ್ದ ಇಟ್ಟಿಗೆ ಲಾರಿಯ ಕ್ಲೀನರ್ ಶರತ್ (25) ಮಾಕುಟ್ಟದ ರಸ್ತೆ ಸಮೀಪದ ಬೆಟ್ಟದಿಂದ ಉರುಳಿದ ಭಾರೀ ಬಂಡೆಕಲ್ಲಿಗೆ ಸಿಲುಕಿ ಸಾವನ್ನಪ್ಪಿದ್ದರೆ, ಅದೇ ದಿನ ರಾತ್ರಿ ಅಲ್ಲಿನ ಮುತ್ತಪ್ಪ ದೇವಸ್ಥಾನ ಹಿಂಭಾಗದ ಚೀಪೆಹೊಳೆ ದಡದಲ್ಲಿ ಮನೆ ನಿರ್ಮಾಣ ಮಾಡಿಕೊಂಡು ವಾಸವಿದ್ದ ಚಾಂಡಿ (58) ಎಂಬಾತ ಜಲಸಮಾಧಿಯಾಗಿದ್ದ. ಈ ದುರ್ಘಟನೆಯ ನಂತರವೇ ಮಡಿಕೇರಿ ಹಾಗೂ ಸೋಮವಾರಪೇಟೆ ತಾಲೂಕಿನಲ್ಲಿ ಜಲಸ್ಫೋಟ, ಭೂಕುಸಿತದಿಂದಾಗಿ ಹಲವರು ಪ್ರಾಣ ಕಳೆದುಕೊಳ್ಳಬೇಕಾಯಿತು. ಈ ಘಟನಾವಳಿಗಳ ನಂತರ ಶಿಥಿಲಗೊಂಡಿದ್ದ ಮಾಕುಟ್ಟ ರಸ್ತೆ ಮೇಲೆ ಜಿಲ್ಲಾಧಿಕಾರಿಗಳ ಆದೇಶ ಉಲ್ಲಂಘಿಸಿ; ನೂರಾರು ವಾಹನಗಳು ಓಡಾಟ ನಡೆಸಿದ್ದವು. ಈ ಹಂತದಲ್ಲಿ ಸ್ವತಃ ಅಂದಿನ ಜಿಲ್ಲಾಧಿಕಾರಿ ಶ್ರೀವಿದ್ಯಾ ಅವರು ಮಾಕುಟ್ಟದಲ್ಲಿ ದಿನವಿಡೀ ಮೊಕ್ಕಾಂ ಹೂಡಿ ನಿಯಮ ಉಲ್ಲಂಘಿಸಿದ್ದ ವಾಹನ ಚಾಲಕರ ವಿರುದ್ಧ ಕ್ರಮ ಜರುಗಿಸಿದ್ದರು. ಕರ್ತವ್ಯ ಲೋಪ ಎಸಗಿದ್ದ ಓರ್ವ ಆರ್.ಟಿ.ಓ. ಸಿಬ್ಬಂದಿಯನ್ನೂ ಅಮಾನತುಗೊಳಿಸಲಾಗಿತ್ತು. ಇಷ್ಟೆಲ್ಲಾ ಕಾನೂನು ಕ್ರಮ ಜರುಗಿದ್ದರೂ, ಇದೀಗ ಮತ್ತೆ ಆದೇಶದ ಸ್ಪಷ್ಟ ಉಲ್ಲಂಘನೆ ಇಲ್ಲಿ ಆಗುತ್ತಿರುವದನ್ನು ಕಾಣಬಹುದು!
ಮಾಕುಟ್ಟ ಕೆರ್ಟಿ- ಉರ್ಟಿ ಬೆಟ್ಟಶ್ರೇಣಿ ಜಲ ಸ್ಫೋಟಗೊಂಡ ಹಿನ್ನೆಲೆ ಭಾರೀ ಗಾತ್ರದ ಮರಗಳು ಪ್ರವಾಹದೊಂದಿಗೆ ಕೊಚ್ಚಿಕೊಂಡು ಚೀಪೆಹೊಳೆ ಸೇತುವೆ ಮತ್ತು ಎರಡು ಹೊಟೇಲ್‍ಗಳಿಗೆ ತೀವ್ರ ಹಾನಿಯಾಗಿತ್ತು. ಇದೀಗ ಎಲ್ಲವೂ ದುರಸ್ತಿ ಕಂಡಿದೆ. ಈವರೆಗೂ ಯಾವದೇ ಹಾನಿ ಸಂಭವಿಸದಿದ್ದರೂ ಕೆಲವು ಮರಗಳು ಧರೆಗುರುಳಿವೆ. ಕುಸಿದ ರಸ್ತೆ, ತಡೆಗೋಡೆ, ಮೋರಿ, ಕಿರುಸೇತುವೆ ಕಾಮಗಾರಿಯನ್ನೂ ವೀರಾಜಪೇಟೆ ಲೋಕೋಪಯೋಗಿ ಇಲಾಖೆ ಪೂರ್ಣಗೊಳಿಸಿದ್ದರೂ, ರಸ್ತೆಯ ಇಬ್ಬದಿಯ ಅರಣ್ಯ ಪ್ರದೇಶದ ಮರಗಳು ಅಂತರರಾಜ್ಯ ರಸ್ತೆಯ ಮೇಲೆ ಉರುಳಲು ಕಾದುಕುಳಿತಿವೆ. ಈ ಬಾರಿ ಸಣ್ಣ ಮಳೆಗೆ ಭಾರೀ ಗಾತ್ರದ ಮರವೊಂದು ತಡೆಗೋಡೆಯಾಗಿ ಅಳವಡಿಸಿದ್ದ ಕಬ್ಬಿಣದ ಬೇಲಿ ಮೇಲೆ ಬಿದ್ದು ಜಖಂಗೊಂಡಿದೆ. ತಿಂಗಳಾದರೂ ಮರವನ್ನು ತೆರವುಗೊಳಿಸುವ ಕೆಲಸ ಲೋಕೋಪಯೋಗಿ ಇಲಾಖೆಯಿಂದ ನಡೆದಿಲ್ಲ ಎಂದು ಆರೋಪ ವ್ಯಕ್ತವಾಗಿದೆ.
ಕಳೆದ ವರ್ಷ ಮಾಕುಟ್ಟ ವ್ಯಾಪ್ತಿಯಲ್ಲಿ 199.68 ಇಂಚು ಮಳೆ ದಾಖಲಾಗಿತ್ತು. ಜೂ.12 (2018) ರ ನಂತರ ಕೇವಲ 4 ದಿನಗಳ ಅಂತರದಲ್ಲಿ 25 ಇಂಚಿಗೂ ಅಧಿಕ ಮಳೆಯಾದ ಹಿನ್ನೆಲೆ ಸುಮಾರು 20 ಕಿ.ಮೀ.ಮಾಕುಟ್ಟ ರಸ್ತೆ ಉದ್ದಕ್ಕೂ ನೂರಾರು ಮರಗಳು, ಬೆಟ್ಟದಲ್ಲಿನ ಕಲ್ಲು ಬಂಡೆಗಳು ರಸ್ತೆಯುದ್ದಕ್ಕೂ ಬಿದ್ದು ಸಂಚಾರ ಸ್ಥಗಿತಗೊಂಡಿತ್ತು. ಕಳೆದ ಬಾರಿ ಜಲಪ್ರಳಯ ಕಂಡ ಮಾಕುಟ್ಟ ಚೀಪೆಹೊಳೆ ನೀರಿನ ಹರಿವು ಇಲ್ಲದೆ ತಳಮಟ್ಟಕ್ಕೆ ತಲಪಿದ ಚಿತ್ರಣ ಈಗ ಕಾಣಿಸುತ್ತಿದೆ. ಆದರೆ, ಅಗಸ್ಟ್ ಅಂತ್ಯದವರೆಗೂ ಮಾಕುಟ್ಟ ರಸ್ತೆಯ ಓಡಾಟದ ಅಪಾಯ ಕಡೆಗಣಿಸುವಂತಿಲ್ಲ. ಈ ಬಗ್ಗೆ ಜಿಲ್ಲಾಡಳಿತ ಖುದ್ದು ವೀಕ್ಷಣೆ ಮಾಡಿ ಕ್ರಮ ಜರುಗಿಸುವ ಅಗತ್ಯವಿದೆ.
ಅಪೂರ್ಣ ಸೇತುವೆ
ಕೂಟುಹೊಳೆಯಲ್ಲಿ ಸುಮಾರು ರೂ.1 ಕೋಟಿಗೂ ಅಧಿಕ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಸೇತುವೆ ಕಾಮಗಾರಿ ಪುನರಾರಂಭಿಸಲು ಸಾರ್ವಜನಿಕರು ತೀವ್ರ ಒತ್ತಡ ಹಾಕುತ್ತಿದ್ದರೂ ಕೇರಳ ಸರ್ಕಾರ ಹಾಗೂ ಕರ್ನಾಟಕ ಸರ್ಕಾರದ ಸಂಬಂಧಿಸಿದ ಅಧಿಕಾರಿ ವರ್ಗ ನಿರ್ಲಕ್ಷ್ಯವಹಿಸಿರುವ ಆರೋಪ ವ್ಯಕ್ತವಾಗಿದೆ. ಕಾಮಗಾರಿ ನಿಲುಗಡೆಯಾಗಿ ವರ್ಷವೇ ಗತಿಸಿದೆ. ಇದೀಗ ಕೊಡಗು ವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಉದ್ದೇಶಿತ ಸೇತುವೆ ನಿರ್ಮಾಣಕ್ಕೆ ಯಾವದೇ ಅಭ್ಯಂತರವಿಲ್ಲವೆಂದು 0.177 ಹೆಕ್ಟೇರ್ ಕರ್ನಾಟಕ ಅರಣ್ಯ ವ್ಯಾಪ್ತಿಯನ್ನು ‘ಡಿ.ನೋಟಿಫಿಕೇಷನ್’ ಮೂಲಕ ಉದ್ದೇಶಿತ ಕೂಟುಹೊಳೆ ಸೇತುವೆ ಪೂರ್ಣಗೊಳಿಸಬಹುದಾಗಿದೆ ಎಂದು ಹೇಳಿದ್ದಾರೆ. ರಾಜ್ಯ ಹಾಗೂ ಕೇಂದ್ರ ಮಟ್ಟದಲ್ಲಿ ಕೇರಳ ಸರ್ಕಾರ ವ್ಯವಹರಿಸಿ ಸೇತುವೆ ಕಾಮಗಾರಿ ಆರಂಭಿಸಲು ಅವಕಾಶವಿದೆ. ಆದರೆ, ಕೇರಳ ಲೋಕೋಪಯೋಗಿ ಇಲಾಖಾಧಿಕಾರಿಗಳು ನಿರ್ಲಕ್ಷ್ಯವಹಿಸಿದ್ದಾರೆ ಎಂಬ ಆರೋಪವೂ ವ್ಯಕ್ತವಾಗಿದೆ.
ಮರ ಶೀಘ್ರ ತೆರವು
ಮಾಕುಟ್ಟ ವ್ಯಾಪ್ತಿಯಲ್ಲಿ ರಸ್ತೆಯ ಮೇಲೆ ಮರ ಉರುಳಿದರೆ ಕೇವಲ ಅರ್ಧಗಂಟೆ ಅವಧಿಯಲ್ಲಿ ತೆರವುಗೊಳಿಸಲಾಗುವದು ಎಂದು ಮಾಕುಟ್ಟ ಬೃಹ್ಮಗಿರಿ ವನ್ಯ ಜೀವಿ ವಿಭಾಗ ವಲಯಾರಣ್ಯಾಧಿಕಾರಿ ಕೇಶವ್ ಮಾಹಿತಿ ನೀಡಿದ್ದಾರೆ. ಸಂಚಾರ ಸುಗಮಗೊಳಿಸಲು ಈ ಬಾರಿ 8 ಮಂದಿ ಇಲಾಖೆಯ ಸಿಬ್ಬಂದಿಗಳನ್ನು ಸಜ್ಜುಗೊಳಿಸಲಾಗಿದ್ದು, ಪೆರುಂಬಾಡಿ ಚೆಕ್‍ಪೆÇೀಸ್ಟ್, ಮಾಕುಟ್ಟ ಕಚೇರಿಯಲ್ಲಿ ನಿರಂತರ ಸಂಪರ್ಕದಲ್ಲಿರುತ್ತಾರೆ. ಎರಡು ಮರ ಕುಯ್ಯುವ ಉಪಕರಣವನ್ನು ಕಚೇರಿಯಲ್ಲಿಡಲಾಗಿದೆ ಎಂದರು.
-ವಿಶೇಷ ವರದಿ: ಟಿ.ಎಲ್.ಶ್ರೀನಿವಾಸ್