ಮಡಿಕೇರಿ, ಜು. 20: ಕೇಂದ್ರ ಸರಕಾರದಿಂದ ರೈತ ಬೆಳೆಯುವ ಕೃಷಿ ಉತ್ಪನ್ನಗಳು ಹಾಗೂ ಜಾನುವಾರುಗಳ ಸಾಕಾಣಿಕೆ ಸೇರಿದಂತೆ ಹೈನುಗಾರಿಕೆಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಈ ಯೋಜನೆಗಳ ಸದುಪಯೋಗ ಪಡೆದುಕೊಳ್ಳುವಂತೆ ನಬಾರ್ಡ್ ಬ್ಯಾಂಕ್ ಸಹಾಯಕ ಮಹಾ ಪ್ರಬಂಧಕ ಮುಂಡಂಡ ಸಿ. ನಾಣಯ್ಯ ಸಲಹೆ ಮಾಡಿದ್ದಾರೆ.ಕೇಂದ್ರ ಸರ್ಕಾರ ಪ್ರಾಯೋಜಿತ ಸಮಗ್ರ ಕೃಷಿ ಮಾರುಕಟ್ಟೆ ಯೋಜನೆಯ ಉಪ ಯೋಜನೆಗಳಾದ ಕೃಷಿ ಮಾರುಕಟ್ಟೆ ಮೂಲ ಸೌಕರ್ಯ ಯೋಜನೆಯು, ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕು (ನಬಾರ್ಡ್) ಮುಖಾಂತರ ಅನುಷ್ಠಾನ ಗೊಳ್ಳುತ್ತಿದೆ. ಕೃಷಿ ಮತ್ತು ಕೃಷಿ ಪೂರಕ ವಲಯಗಳಿಗೆ ಮಾರುಕಟ್ಟೆ ಮತ್ತು ಶೇಖರಣೆ ವ್ಯವಸ್ಥೆ ಅಭಿವೃದ್ಧಿಪಡಿ ಸುವದು, ಸಣ್ಣ ಪ್ರಮಾಣದ ಸಂಸ್ಕರಣಾ ಘಟಕಗಳ ಮೂಲಕ ರೈತರು, ರೈತ ಉತ್ಪಾದಕ ಸಂಸ್ಥೆಗಳಿಗೆ ಅನುಕೂಲ ಮಾಡಿಕೊಡುವದು, ಗ್ರಾಮೀಣ ಕೃಷಿ ಮಾರುಕಟ್ಟೆಗಳ ಅಭಿವೃದ್ಧಿ ಮತ್ತು ಉನ್ನತ್ತೀಕರಣಗೊಳಿಸಿ ರೈತ ಮಾರುಕಟ್ಟೆ ಸಂಬಂಧವನ್ನು ಬಲಪಡಿಸಲಾಗುತ್ತಿದೆ ಅವರು ತಿಳಿಸಿದ್ದಾರೆ. ಈ ಯೋಜನೆಯ ನಿಯಮದಂತೆ ರೈತರು, ರೈತ ಕೂಟಗಳು, ರೈತ ಉತ್ಪಾದಕರ ಸಂಸ್ಥೆಗಳು, ಪಾಲುದಾರಿಕೆ ಒಡೆತನ ಸಂಸ್ಥೆಗಳು, ಸಹಕಾರಿ ಸಂಸ್ಥೆಗಳು, ಸಹಕಾರಿ ಮಾರಾಟ ಮಂಡಳಿಗಳು, ಸರ್ಕಾರಿ ಇಲಾಖೆಗಳ ಸ್ವಾಯತ್ತ ಸಂಸ್ಥೆಗಳು ಮತ್ತು ಇತರ ಸ್ವಾಯತ್ತ ಸಂಸ್ಥೆಗಳು, ರಾಜ್ಯ ಮಟ್ಟದ ಸಂಸ್ಥೆಗಳು ಪ್ರಯೋಜನ ಪಡೆಯಬಹುದಾಗಿದೆ. ಅದರಂತೆ 50 ಮೆಟ್ರಿಕ್ ಟನ್ನಿನಿಂದ ಗರಿಷ್ಠ 10 ಸಾವಿರ ಮೆಟ್ರಿಕ್ ಟನ್ ಸಾಮಥ್ರ್ಯದ ಗೋದಾಮುಗಳ ನಿರ್ಮಾಣ, ಉತ್ಕøಷ್ಟವಾದ ಒಂದು ಸಾವಿರ ಮೆ.ಟನ್ ಸಾಮಥ್ರ್ಯದ ಶೈತಲೀಕರಣ ಗೋದಾಮು ಘಟಕಗಳ ನಿರ್ಮಾಣ, ಕಚ್ಛಾ ಕೃಷಿ ಉತ್ಪನ್ನದ ಮೂಲಗುಣ ಬದಲಾಯಿಸದ ಹಾಗೆ ಮೌಲ್ಯವರ್ಧನಾ ಸಂಬಂಧಿತ ಪ್ರಾರಂಭಿಕ ಸಂಸ್ಕರಣೆ, ದೇಶೀಯ ಎಣ್ಣೆ ಕಾಳುಗಳಿಂದ ಆಹಾರ ಯೋಗ್ಯ ತೈಲ ಸಂಗ್ರಹಣೆ ಮಾಡುವ ಸಕಲ ಸೌಲಭ್ಯ ಕೇಂದ್ರಗಳು, ಇ-ವ್ಯಾಪಾರ, ರೈತ ಉತ್ಪಾದನಾ ಸಂಸ್ಥೆಗಳು/ಕೇಂದ್ರಗಳಿಗೆ ಅವಶ್ಯವಾದ ಮೂಲ ಸೌಕರ್ಯ ಗಳನ್ನು ಒದಗಿಸುವಂತಹ ವ್ಯವಸ್ಥೆಗಳ ನಿರ್ಮಾಣ ಕೈಗೆತ್ತಿಕೊಳ್ಳಬಹುದಾಗಿದೆ ಎಂದು ತಿಳಿಸಿದ್ದಾರೆ.

(ಮೊದಲ ಪುಟದಿಂದ) ಈ ಯೋಜನೆಯ ನಿಯಮದಂತೆ ಪ್ರೋತ್ಸಾಹ ಧನವನ್ನು ಶೇ.25 ರಿಂದ ಶೇ.33.33 ದಂತೆ ನಿಗದಿಪಡಿಸಲಾಗಿದೆ. ಈ ಪ್ರೋತ್ಸಾಹ ಧನವು ಯೋಜನಾ ವೆಚ್ಚದ ಮೇಲೆ ನಿಗದಿಪಡಿಸಿದ್ದು, ಗ್ರಾಹಕರು ಯೋಜನಾ ವೆಚ್ಚದ ಕನಿಷ್ಟ ಶೇ.50 ರಷ್ಟು ಹಣವನ್ನು ಬ್ಯಾಂಕುಗಳಿಂದ ಸಾಲದ ರೂಪದಲ್ಲಿ ಪಡೆಯುವದು ಕಡ್ಡಾಯವಾಗಿದೆ. ಗೋದಾಮು ಹಾಗೂ ಶೈತಲೀಕರಣ ಗೋದಾಮು ವ್ಯವಸ್ಥೆಗೆ ಸಂಬಂಧಿಸಿದಂತೆ ಪ್ರೋತ್ಸಾಹ ಧನವು ಒಂದು ಮೆಟ್ರಿಕ್ ಟನ್ ಸಾಮಥ್ರ್ಯಕ್ಕೆ ರೂ.750 ರಿಂದ ರೂ.1166.55 ಆಗಿ ನಿಗದಿಯಾಗಿರುತ್ತದೆ ಎಂದು ನಾಣಯ್ಯ ಮಾಹಿತಿ ನೀಡಿದ್ದಾರೆ.

ಜಿಲ್ಲೆಯ ಅರ್ಹ ರೈತರು, ರೈತ ಉತ್ಪಾದಕರ ಸಂಸ್ಥೆಗಳು, ಸ್ವಯಂ ಸೇವಾ ಸಂಸ್ಥೆಗಳು, ರೈತ ಕೂಟಗಳು, ಸ್ವ ಸಹಾಯ ಸಂಘಗಳು ಈ ಯೋಜನೆಯ ಸಂಪೂರ್ಣ ಪ್ರಯೋಜನವನ್ನು 2020ರ ಮಾರ್ಚ್ 31ರ ಒಳಗೆ ಹೊಂದಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಶೀಘ್ರವೇ ಸಮೀಪದ ಬ್ಯಾಂಕುಗಳನ್ನು ಸಂಪರ್ಕಿಸಬೇಕಾಗಿದ್ದು, ಈ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ಬ್ಯಾಂಕುಗಳಿಗೆ ಸೂಕ್ತ ಮಾರ್ಗದರ್ಶನ ನೀಡಲಾಗಿದೆ. ಹೆಚ್ಚಿನ ಮಾಹಿತಿಗೆ ನಬಾರ್ಡ್ ಸಹಾಯಕ ಮಹಾ ಪ್ರಬಂಧಕರನ್ನು ಸಂಪರ್ಕಿಸಬಹುದಾಗಿದೆ.

ಜಾನುವಾರು ಯೋಜನೆ

ರೈತರ ಆದಾಯವನ್ನು ದ್ವಿಗುಣಗೊಳಿಸುವ ಮೂಲ ಉದ್ದೇಶದೊಂದಿಗೆ ಸುದೀರ್ಘ, ಸುಸ್ಥಿರ, ಸದೃಢ ಜಾನುವಾರು ವಲಯದ ಗುಣಾತ್ಮಕ ಹಾಗೂ ಗುಣಾತ್ಮಕ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಪ್ರಾಯೋಜಿತ ಹೈನುಗಾರಿಕಾ ಉದ್ಯಮಶೀಲತಾ ಅಭಿವೃದ್ಧಿ ಯೋಜನೆ ಹಾಗೂ ರಾಷ್ಟ್ರೀಯ ಜಾನುವಾರು ಮಿಷನ್ (ನ್ಯಾಷನಲ್ ಲೈದ್ ಸ್ಟಾಕ್ ಮಿಷನ್) ಯೋಜನೆಗಳು ಈಗಾಗಲೇ ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್(ನಬಾರ್ಡ್) ಮುಖಾಂತರ ಅನುಷ್ಠಾನಗೊಳ್ಳುತ್ತಿದೆ ಎಂದು ನಾಣಯ್ಯ ತಿಳಿಸಿದ್ದಾರೆ.

ಹೈನುಗಾರಿಕೆ ಉದ್ಯಮಶೀಲತಾ ಅಭಿವೃದ್ಧಿ ಯೋಜನೆಯಡಿ ಸಾಮಾನ್ಯ ರೈತರು, ರೈತ ಕೂಟಗಳು, ಸ್ವ ಸಹಾಯ ಸಂಘಗಳು, ಜಂಟಿ ಬಾದ್ಯತಾ ಗುಂಪುಗಳು, ಗುಂಪುಗಳ ಸದಸ್ಯರುಗಳು ರೂ.7 ಲಕ್ಷಗಳ ಯೋಜನಾ ವೆಚ್ಚದ ಮಿತಿಯೊಳಗೆ ಕನಿಷ್ಟ ಎರಡು ಹಸುಗಳು ಹಾಗೂ ಗರಿಷ್ಠ 10 ಹಸು/ ಎಮ್ಮೆ ಸಾಕಾಣಿಕೆ, ಹಸು/ ಎಮ್ಮೆ ಸಾಕಾಣಿಕೆ ಘಟಕದ ಜೊತೆಯಲ್ಲಿ ರೂ.25,200 ಯೋಜನಾ ವೆಚ್ಚದ ಎರೆಹುಳು ಗೊಬ್ಬರದ ಘಟಕ, ರೂ.9.70 ಲಕ್ಷದ ಯೋಜನಾ ವೆಚ್ಚದ ಮಿತಿಯೊಳಗೆ ಗರಿಷ್ಠ 20 ಗುಣಮಟ್ಟದ ಕರು ಸಾಕಾಣಿಕೆ ಘಟಕದ ಸ್ಥಾಪನೆ, ರೂ.20 ಲಕ್ಷ ಯೋಜನಾ ವೆಚ್ಚಕ್ಕೆ ಮೀರದಂತೆ 5 ಸಾವಿರ ಲೀ. ಸಾಮಥ್ರ್ಯದ ಹಾಲು ಶೀಥಲೀಕರಣ ಘಟಕದ ಸ್ಥಾಪನೆ ಸ್ಥಾಪಿಸಬಹುದಾಗಿದೆ. ಅಲ್ಲದೆ ಯಂತ್ರೋಪಕರಣಗಳ ಖರೀದಿ, ರೂ.13.20 ಲಕ್ಷ ಯೋಜನಾ ವೆಚ್ಚದಲ್ಲಿ ಹಾಲಿನ ಸಂಸ್ಕರಣಾ ಘಟಕದ ಸ್ಥಾಪನೆ, ರೂ.2,650 ಲಕ್ಷದ ಯೋಜನಾ ವೆಚ್ಚದ ಮಿತಿಯೊಳಗಡೆ ಹಾಲು/ಹಾಲು ಉತ್ಪನ್ನಗಳ ಸಾಗಾಟ ವಾಹನದ ವ್ಯವಸ್ಥೆ, ರೂ.33 ಲಕ್ಷದ ಯೋಜನಾ ವೆಚ್ಚದಲ್ಲಿ ಹಾಲು ಮತ್ತು ಹಾಲು ಉತ್ಪನ್ನಗಳ ಶೀತಶೇಖರಣೆಯ ವ್ಯವಸ್ಥೆಯ ನಿರ್ಮಾಣ, ರೂ.2.60 ಲಕ್ಷದ ಮಿತಿಯಲ್ಲಿ ಪಶು ವೈದ್ಯಕೀಯ ಚಿಕಿತ್ಸಾಲಯದ ನಿರ್ಮಾಣ ಹಾಗೂ ರೂ.3 ಲಕ್ಷ ಯೋಜನಾ ವೆಚ್ಚದಲ್ಲಿ ಹಾಲು/ಹಾಲು ಉತ್ಪನ್ನಗಳ ಮಾರಾಟ ಮಳಿಗೆಯ ಸ್ಥಾಪನೆ ಮಾಡಬಹುದಾಗಿದೆ.

ಈ ಎಲ್ಲಾ ಚಟುವಟಿಕೆಗಳನ್ನು ಒಬ್ಬ ರೈತ ಅಥವಾ ಸಂಸ್ಥೆ ಯಾವದೇ ಒಂದು ಅಥವಾ ಎಲ್ಲವನ್ನು ಕೈಗೆತ್ತಿಕೊಂಡು ನಡೆಸಬಹುದಾಗಿದೆ. ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆಯಡಿಯಲ್ಲಿ ಸಾಮಾನ್ಯ ರೈತರು/ರೈತ ಕೂಟಗಳು/ರೈತ ಉತ್ಪಾದಕರ ಸಂಸ್ಥೆಗಳು, ಸ್ವಸಹಾಯ ಸಂಘಗಳು ಮತ್ತು ಜಂಟಿ ಬಾದ್ಯತಾ ಗುಂಪುಗಳು ಮತ್ತು ಸದಸ್ಯರುಗಳು ಕೋಳಿ ಸಾಕಾಣಿಕೆ, ಆಡು, ಕುರಿ, ಹಂದಿ, ಮೊಲ ಸಾಕಾಣಿಕೆ, ಆಹಾರ ಮಿಶ್ರಣ ಘಟಕ, ಸಾಗಾಟ ವಾಹನದ ಖರೀದಿ, ಸ್ಥಿರ ಹಾಗೂ ಸಂಚಾರಿ ಮಾರಾಟ ಕೇಂದ್ರದ ಸ್ಥಾಪನೆ, ಶೀತ ಶೇಖರಣಾ ಘಟಕದ ಸ್ಥಾಪನೆ, ಹಾಗೂ ಇನ್ನಿತರ ಪ್ರಮುಖ ಚಟುವಟಿಕೆಗಳನ್ನು ಪ್ರಾರಂಭ ಮಾಡಬಹುದಾಗಿದ್ದು, ಇದಕ್ಕೆ ಪೂರಕವಾಗಿ ಸಮೀಪದ ಬ್ಯಾಂಕುಗಳಲ್ಲಿ ಸಾಲಕ್ಕಾಗಿ ಅರ್ಜಿ ಸಲ್ಲಿಸಬಹುದಾಗಿದೆ.

ಈ ಸಂಬಂಧಿತ ಎಲ್ಲಾ ಚಟುವಟಿಕೆಗಳಿಗೆ ಸಾಮಾನ್ಯ ವರ್ಗಕ್ಕೆ ಶೇ.25 ಹಾಗೂ ಪರಿಶಿಷ್ಟ ಜಾತಿ ಮತ್ತು ವರ್ಗಕ್ಕೆ ಶೇ.33.33 ರಂತೆ ಪ್ರೋತ್ಸಾಹ ಧನ ಲಭ್ಯವಿದೆ. ಈ ಎರಡೂ ಯೋಜನೆಗಳ ಅವಧಿ 2020ರ ಮಾರ್ಚ್, 31ರ ತನಕ ಇದ್ದರೂ ಇದು ನಿಗದಿಪಡಿಸಿದ ಪ್ರೋತ್ಸಾಹ ಧನಕ್ಕೆ ಸೀಮಿತವಾಗಿರುವದು. ಆದ್ದರಿಂದ ಜಿಲ್ಲೆಯ ಪ್ರತಿಯೊಬ್ಬ ರೈತರು, ರೈತ ಕೂಟಗಳು, ಸ್ವ ಸಹಾಯ ಸಂಘಗಳು, ಜಂಟಿ ಬಾಧ್ಯತಾ ಗುಂಪುಗಳು ಈ ಯೋಜನೆಗಳ ಸಂಪೂರ್ಣ ಪ್ರಯೋಜನವನ್ನು ಪಡೆಯಲು ಅವರು ಸಲಹೆ ನೀಡಿದ್ದಾರೆ.