ಕುಶಾಲನಗರ, ಜು. 20: ಕುಶಾಲನಗರ ಕಡೆಯಿಂದ ಕುಶಾಲನಗರ ಅರಣ್ಯ ತಪಾಸಣಾ ಗೇಟ್ ಮೂಲಕ ಮೈಸೂರು ಕಡೆಗೆ ಅಕ್ರಮವಾಗಿ ವಾಹನದಲ್ಲಿ ಸಾಗಿಸುತ್ತಿದ್ದ ಬೀಟೆ ಮರದ ನಾಟಾಗಳನ್ನು ಗೇಟ್ ಸಿಬ್ಬಂದಿಗಳು ಪತ್ತೆಹಚ್ಚಿ ವಶಪಡಿಸಿ ಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಶುಕ್ರವಾರ ತಡರಾತ್ರಿ 2.30 ಕ್ಕೆ ಟಾಟಾ ವಿಂಗರ್ ವಾಹನವೊಂದು (ಕೆಎ.45.2837) ಗೇಟ್ ಬಳಿ ನಿಲ್ಲಿಸಲು ಸೂಚನೆ ನೀಡಿದರೂ ನಿಲ್ಲಿಸದೆ ವೇಗವಾಗಿ ತೆರಳಿದ ಸಂದರ್ಭ, ಕರ್ತವ್ಯದಲ್ಲಿದ್ದ ಅರಣ್ಯ ರಕ್ಷಕ ಎಂ.ಜಿ.ಮಣಿಕಂಠ ತನ್ನ ಬೈಕ್ನಲ್ಲಿ ಬೆನ್ನಟ್ಟಿ ಕೊಪ್ಪ ಬೆಟ್ಟದಪುರ ಸಂಪರ್ಕ ರಸ್ತೆ ಬಳಿ ಅಡ್ಡಹಾಕಿ ವಾಹನವನ್ನು ಮಾಲು ಸಮೇತ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಸಂದರ್ಭ ವಾಹನದಲ್ಲಿದ್ದ ಇಬ್ಬರು ಆರೋಪಿಗಳು ಕತ್ತಲೆಯಲ್ಲಿ ಪರಾರಿಯಾಗಿದ್ದಾರೆ. ವಾಹನದಲ್ಲಿದ್ದ 7 ಬೀಟೆ ಮರದ ನಾಟಾಗಳನ್ನು ವಶಪಡಿಸಿಕೊಳ್ಳಲಾಗಿದೆ. ವಾಹನ ಮತ್ತು ಬೀಟೆ ಮರದ ಮೌಲ್ಯ ರೂ. 5 ಲಕ್ಷ ಎಂದು ಅಂದಾಜಿಸಲಾಗಿದೆ.
ಮಡಿಕೇರಿ ವಿಭಾಗ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರನ್ ಮಾರ್ಗದರ್ಶನದಲ್ಲಿ ಕುಶಾಲನಗರ ವಲಯ ಅರಣ್ಯಾಧಿಕಾರಿ ಸಿ.ಆರ್. ಅರುಣ್, ಉಪ ವಲಯ ಅರಣ್ಯಾಧಿಕಾರಿ ಎನ್.ಎಲ್. ಚೇತನ್, ಅರಣ್ಯ ರಕ್ಷಕರಾದ ಎಂ.ಜಿ. ಮಣಿಕಂಠ, ಬಿ.ಸಿ. ಗಣೇಶ್, ಅರಣ್ಯ ವೀಕ್ಷಕ ಟಿ.ಕೆ. ದಿನೇಶ್, ಬಿ.ಆರ್. ಸತೀಶ್, ನಾರಾಯಣ್ ಕಾರ್ಯಾಚರಣೆಯಲ್ಲಿ ಇದ್ದರು.
ಯಾವದೇ ಅನುಮತಿಯಿಲ್ಲದೆ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಸೌದೆ ತುಂಬಿದ ವಾಹನವೊಂದನ್ನು ಕುಶಾಲನಗರ ಅರಣ್ಯ ಅಧಿಕಾರಿಗಳು ವಶಪಡಿಸಿಕೊಂಡು ಇಬ್ಬರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಪಿಕ್ಅಪ್ ವಾಹನ (ಕೆಎಲ್.11. ಪಿ.7065)ದಲ್ಲಿ ಸೌದೆ ತುಂಬಿ ರಾತ್ರಿ ವೇಳೆ ಸಾಗಾಟ ಮಾಡುತ್ತಿದ್ದ ಸಂದರ್ಭ ಕೊಪ್ಪ ಗೇಟ್ ಬಳಿ ವಶಪಡಿಸಿಕೊಂಡು ಇಲಾಖೆ ಕ್ರಮಕೈಗೊಳ್ಳಲಾಗಿದೆ.