ಸೋಮವಾರಪೇಟೆ, ಜು. 20: ತಾಲೂಕಿನ ಗೌಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಂದಿಗುಂದ ನ್ಯಾಯ ಬೆಲೆ ಅಂಗಡಿಯಲ್ಲಿ ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆ ಯಡಿ ವಿತರಿಸಲಾಗುವ ಅಕ್ಕಿಗೆ ಹಣ ವಸೂಲಿ ಮಾಡಲಾಗುತ್ತಿದೆ ಎಂದು ಆರೋಪಿಸಿ ಕರ್ನಾಟಕ ರಕ್ಷಣಾ ವೇದಿಕೆಯ ನೇತೃತ್ವದಲ್ಲಿ ಗ್ರಾಹಕರು ನ್ಯಾಯಬೆಲೆ ಅಂಗಡಿಯ ಎದುರು ಪ್ರತಿಭಟನೆ ನಡೆಸಿದರು.

ಅನ್ನಭಾಗ್ಯ ಯೋಜನೆಯಡಿ ಉಚಿತವಾಗಿ ವಿತರಿಸುವ ಅಕ್ಕಿಗೆ ಅಂಗಡಿಯ ಮಾಲೀಕರು 40 ರಿಂದ 50 ರೂಪಾಯಿ ವಸೂಲಿ ಮಾಡುತ್ತಿದ್ದಾರೆ ಈ ಬಗ್ಗೆ ಕಾರ್ಡ್ ದಾರರು ಪ್ರಶ್ನಿಸಿದ ಸಂದರ್ಭ ಹಣ ಕೊಟ್ಟರೆ ಮಾತ್ರ ಅಕ್ಕಿ ಕೊಡುವದಾಗಿ ಉಡಾಫೆಯ ಉತ್ತರ ನೀಡುತ್ತಿದ್ದಾರೆ ಎಂದು ವೇದಿಕೆಯ ಅಧ್ಯಕ್ಷ ಪ್ರಾಸ್ಸಿಸ್ ಡಿಸೋಜ ಆರೋಪಿಸಿದರು.

ಅಂಗಡಿ ಮಾಲೀಕರ ಕ್ರಮ ಖಂಡಿಸಿ ಕರವೇ ಕಾರ್ಯಕರ್ತರು ನ್ಯಾಯಬೆಲೆ ಅಂಗಡಿ ಮುಂದೆ ಪ್ರತಿಭಟನೆಗಿಳಿದರು. ಈ ಬಗ್ಗೆ ಸೋಮವಾರಪೇಟೆ ತಾಲೂಕು ತಹಶೀಲ್ದಾರ್ ಗೋವಿಂದರಾಜು ಅವರಿಗೆ ಮಾಹಿತಿ ನೀಡಿದ ಮೇರೆ ಸ್ಥಳಕ್ಕಾಗಮಿಸಿದ ತಹಶೀಲ್ದಾರ್ ನ್ಯಾಯಬೆಲೆ ಅಂಗಡಿಯನ್ನು ಪರಿಶೀಲಿಸಿದರು. ಈ ಸಂದರ್ಭ ತಹಶೀಲ್ದಾರ್ ಅವರೊಂದಿಗೆ ಅಂಗಡಿಯ ಮಾಲೀಕರು ಉಡಾಫೆಯಿಂದ ವರ್ತಿಸಿದ ಘಟನೆಯೂ ನಡೆಯಿತು.

ನ್ಯಾಯಬೆಲೆ ಅಂಗಡಿಯ ಅನ್ಯಾಯದ ಬಗ್ಗೆ ತಹಶೀಲ್ದಾರ್ ಅವರಿಗೆ ಲಿಖಿತ ದೂರು ನೀಡಿದ ಹಿನ್ನೆಲೆ ಕ್ರಮ ಜರುಗಿಸುವ ಭರವಸೆ ನೀಡಿದರು. ನಂತರ ಪ್ರತಿಭಟನೆಯನ್ನು ಹಿಂದಕ್ಕೆ ಪಡೆಯಲಾಯಿತು. ಈ ಸಂದರ್ಭ ಕರವೇ ಪ್ರಮುಖರಾದ ದಾಸಯ್ಯ, ನಂದ, ಬಸವನಕೊಪ್ಪ ಸುರೇಶ್, ಅಂಜಲಿಯಮ್ಮ, ರಾಜಮ್ಮ, ಯತೀಶ್, ಶೋಭಾ, ರಂಗಶೆಟ್ಟಿ, ಸೇರಿದಂತೆ ಇತರರು ಉಪಸ್ಥಿತರಿದ್ದರು.