ಕರಿಕೆ, ಜು. 18: ಕರಿಕೆ ವ್ಯಾಪ್ತಿಯಲ್ಲಿ ಕಳೆದ ರಾತ್ರಿಯಿಂದ ಧಾರಾಕಾರವಾಗಿ ಗಾಳಿ ಮಳೆಯಾಗುತ್ತಿದ್ದು, ಇದರಿಂದಾಗಿ ಇಲ್ಲಿನ ಪಂಚಾಯತಿ ವ್ಯಾಪ್ತಿಯ ಮೂರು ಮನೆಗಳ ಮೇಲೆ ಮರಗಳು ಉರುಳಿ ಬಿದ್ದು ಮನೆಗಳು ಜಖಂಗೊಂಡಿರುವ ಬಗ್ಗೆ ವರದಿಯಾಗಿದೆ.
ಚೆತ್ತುಕಾಯ, ದೊಡ್ಡಚೇರಿ ನಿವಾಸಿ ಎನ್.ಸಿ. ದೇವಕ್ಕಿಯವರ ಮನೆ ಮೇಲೆ ಮರ ಬಿದ್ದ ಪರಿಣಾಮ ಮನೆಯ ಮೇಲ್ಛಾವಣಿಯ ಸಿಮೆಂಟ್ ಶೀಟುಗಳು ಪುಡಿಯಾಗಿದ್ದು, ಅಂದಾಜು ಇಪ್ಪತ್ತೈದು ಸಾವಿರದಷ್ಟು ನಷ್ಟ ಸಂಭವಿಸಿದೆ. ಎಳ್ಳುಕೊಚ್ಚಿ ವ್ಯಾಪ್ತಿಯ ನಾರಾಯಣಿ ಬಾಲನ್ ಹಾಗೂ ಕುಡಿಯಂಗಲ್ ಅಡಿಯರ ಚೆರುಂಬ ಎಂಬವರ ಮನೆ ಮೇಲೆ ಕೂಡ ಮರಗಳು ಉರುಳಿ ಬಿದ್ದ ಪರಿಣಾಮ ಮನೆಯ ಮೇಲ್ಚಾವಣಿಯ ಶೀಟು ಪುಡಿಯಾಗಿ ಗೋಡೆ ಬಿರುಕು ಬಿಟ್ಟಿದ್ದು, ತಲಾ ಇಪ್ಪತ್ತು ಸಾವಿರ ರೂಪಾಯಿಗಳ ನಷ್ಟ ಸಂಭವಿಸಿರುವದಾಗಿ ತಿಳಿದು ಬಂದಿದೆ. ಸ್ಥಳಕ್ಕೆ ಕಂದಾಯ ಇಲಾಖೆಯ ಗ್ರಾಮ ಲೆಕ್ಕಾಧಿಕಾರಿ ಪ್ರಭಾಕರ್, ಗ್ರಾಮ ಸಹಾಯಕ ಜನಾರ್ಧನ ಭೇಟಿ ನೀಡಿ ಪರಿಶೀಲನೆ ನಡೆಸಿ ಸರಕಾರಕ್ಕೆ ವರದಿ ಸಲ್ಲಿಸಿದ್ದಾರೆ.
20 ನಿಮಿಷ ಸುರಿದ ಮಳೆ
*ಗೋಣಿಕೊಪ್ಪಲು: ಪೊನ್ನಪ್ಪಸಂತೆ, ಬಾಳೆಲೆ ಮೊದಲಾದ ಭಾಗಕ್ಕೆ ಗುರುವಾರ ಮಧ್ಯಾಹ್ನ 20 ನಿಮಿಷಗಳ ಕಾಲ ಧಾರಾಕಾರ ಮಳೆ ಸುರಿಯಿತು.
ಬೆಳಗ್ಗಿನಿಂದ ಬಿಸಿಲು ಕಾಣಿಸಿಕೊಂಡಿತ್ತು. ಬಳಿಕ ಮಧ್ಯಾಹ್ನ 2.30ರ ವೇಳೆಯಲ್ಲಿ ಗುಡುಗು ಸಹಿತ ಮಳೆ ಸುರಿಯಿತು. ಇದ್ದಕ್ಕಿದ್ದಂತೆ ಮೋಡ ಕವಿದು ಮಳೆ ಸುರಿಯಿತು. 20 ನಿಮಿಷ ಕಳೆದ ಬಳಿಕ ಮತ್ತೆ ಬಿಸಿಲು ಕಾಣಿಸಿಕೊಂಡಿತು.
ಅಲ್ಪಸ್ವಲ್ಪ ಮಳೆಯ ನಡುವೆ ನಾಟಿ ಕೆಲಸ
ಶನಿವಾರಸಂತೆ: ಪಟ್ಟಣ ಹಾಗೂ ಹೋಬಳಿ ವ್ಯಾಪ್ತಿಯಲ್ಲಿ ವಾರದಿಂದ ಪುನರ್ವಸು ಮಳೆ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ. ಮೋಡ ಕವಿದ ವಾತಾವರಣವಿದ್ದು, ಆಗಾಗ್ಗೆ ಬಿಸಿಲು ಮೂಡುತ್ತಿದೆ. ಸಮೀಪದ ದುಂಡಳ್ಳಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಅಲ್ಪಸ್ವಲ್ಪ ಪ್ರಮಾಣದಲ್ಲಿ ಮಳೆಯಾಗಿದ್ದು, ದೊಡ್ಡಬಿಳಾಹ ಗ್ರಾಮದಲ್ಲಿ ಕೃಷಿಕರಾದ ಬಿ.ಬಿ. ಶಾಂತಮಲ್ಲಪ್ಪ ಅವರ 2 ಎಕರೆ ಹಾಗೂ ಚಂದ್ರು ಅವರ ಒಂದೂವರೆ ಎಕರೆ ಗದ್ದೆಯಲ್ಲಿ ನಾಟಿ ಕೆಲಸ ಸುಗಮವಾಗಿ ಸಾಗಿದೆ.
ಉಳಿದಂತೆ ಹಲವಾರು ರೈತರು ಮಳೆಯ ನಿರೀಕ್ಷೆಯಲ್ಲಿ ಕಂಗಾಲಾಗಿದ್ದಾರೆ. ಚೆನ್ನಾಪುರ ಗ್ರಾಮದಲ್ಲಿ ರೈತರು ರಾಗಿ ಮತ್ತು ಜೋಳ ಬಿತ್ತನೆ ಮಾಡಿದ್ದು, ಮಳೆಯಾಗದ ಕಾರಣ ಸಸಿಗಳಿಗೆ ಹುಳು ಕಾಟ ಆರಂಭವಾಗಿದೆ.
ನಿಡ್ತ ಗ್ರಾಮ ಪಂಚಾಯಿತಿಯ ಮುಳ್ಳೂರು ಗ್ರಾಮದ ಗದ್ದೆಗಳಲ್ಲಿ ಹಾಕಿರುವ ಭತ್ತದ ಅಗೆಯೊಂದಿಗೆ ಗದ್ದೆಯೇ ಒಣಗಿ ನಿಂತಿದೆ. ಹಂಡ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಗದ್ದೆಗಳಲ್ಲಿ ಹಾಕಿದ್ದ ಭತ್ತದ ಸಸಿಮಡಿಗೆ ಬೆಂಕಿರೋಗ ತಗುಲಿದೆ ಎಂದು ಅಲ್ಲಿನ ರೈತರು ತೀವ್ರ ಆತಂಕ ವ್ಯಕ್ತಪಡಿಸಿದರು.
ಮಳೆಯನ್ನೇ ಅವಲಂಬಿಸಿ ಕೃಷಿ ಕೆಲಸ ಮಾಡುತ್ತಿದ್ದ ಈ ವಿಭಾಗದ ರೈತರು ಮಳೆ ಕೈಕೊಟ್ಟ ಪರಿಣಾಮ ದಿಕ್ಕು ತೋಚದಂತಾಗಿ ದೇವರ ಮೊರೆ ಹೋಗುತ್ತಿದ್ದಾರೆ.