ಸೋಮವಾರಪೇಟೆ, ಜು.18: ಮಳೆಯಾಗುವ ಮುನ್ಸೂಚನೆ ಇದ್ದುದರಿಂದ ಆಸೆಗಣ್ಣಿನಲ್ಲಿದ್ದ ರೈತರಿಗೆ ಇಂದು ನಿರಾಸೆಯಾಗಿದ್ದು, ನಿನ್ನೆಗಿಂತ ಹೆಚ್ಚು ಬಿಸಿಲಿನ ಬೇಗೆ ಕಂಡುಬಂತು.
ಸೋಮವಾರಪೇಟೆ ವ್ಯಾಪ್ತಿಯಲ್ಲಿ ಬೆಳಗ್ಗಿನಿಂದ ಸಂಜೆಯವರೆಗೂ ಮಳೆಯಾಗಲಿಲ್ಲ. ನಿನ್ನೆ ಸಂಜೆ 6.30ರಿಂದ 7.15ರವರೆಗೆ ಒಂದಿಷ್ಟು ಮಳೆಯಾಗಿದ್ದನ್ನು ಹೊರತುಪಡಿಸಿದರೆ ರಾತ್ರಿಯಿಂದ ಇಂದು ಸಂಜೆಯ ವರೆಗೂ ಮಳೆಯ ಆಗಮನವಾಗಿಲ್ಲ.
ನಿನ್ನೆ ಸಂಜೆ ದಟ್ಟ ಮೋಡ ಆವರಿಸಿ ಭಾರೀ ಮಳೆಯಾಗುವ ಸೂಚನೆ ಕಂಡುಬಂದರೂ ಪಟ್ಟಣ ಸೇರಿದಂತೆ ಸುತ್ತಮುತ್ತಲ ವ್ಯಾಪ್ತಿಯಲ್ಲಿ ಸಾಧಾರಣ ಮಳೆ ಸುರಿಯಿತು. ಆದರೆ ತಾಲೂಕಿನ ಪುಷ್ಪಗಿರಿ ಬೆಟ್ಟಶ್ರೇಣಿ ತಟದಲ್ಲಿರುವ ಹೆಗ್ಗಡಮನೆ ಗ್ರಾಮಕ್ಕೆ 3 ಇಂಚು, ಕೊತ್ನಳ್ಳಿ ಮತ್ತು ಹರಗ ಗ್ರಾಮ ವ್ಯಾಪ್ತಿಯಲ್ಲಿ 2 ಇಂಚು, ಶಾಂತಳ್ಳಿಗೆ ಒಂದೂವರೆ ಇಂಚು ಮಳೆ ಸುರಿಯಿತು.
ಹವಾಮಾನ ಇಲಾಖೆಯ ಮುನ್ಸೂಚನೆಯಿಂದಾಗಿ ಇಂದಿನಿಂದ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗ ಬಹುದು ಎಂಬ ಆಶಾವಾದದಲ್ಲಿದ್ದ ಕೃಷಿಕ ವರ್ಗಕ್ಕೆ ನಿರಾಸೆ ಕಾಡಿತು. ತಾಲೂಕಿನ ಪೂರ್ವ ಭಾಗದ ಯಡವನಾಡು, ಯಲಕನೂರು, ಮದಲಾಪುರ, ಹೆಬ್ಬಾಲೆ, ಶಿರಂಗಾಲ, ತೊರೆನೂರು, ಬಾಣಾವರ, ಆಲೂರುಸಿದ್ದಾಪುರ ವ್ಯಾಪ್ತಿಯಲ್ಲಿ ಕಳೆದ 10 ದಿನಗಳಿಂದ ಮಳೆಯಾಗದ ಹಿನ್ನೆಲೆ ಕೃಷಿ ಚಟುವಟಿಕೆ ಹಿನ್ನಡೆ ಕಂಡಿದೆ. ಭತ್ತ, ಜೋಳ ಕೃಷಿ ಚಟುವಟಿಕೆ ಸ್ಥಗಿತಗೊಂಡಿದೆ.