ಮಡಿಕೇರಿ, ಜು. 18: ಕರ್ನಾಟಕ ಸರ್ಕಾರದ ಅಧಿಸೂಚನೆಯಂತೆ ಸಂಚಾರ ನಿಯಮಗಳ ಉಲ್ಲಂಘನೆಗೆ ವಿಧಿಸುವ ದಂಡದ ಮೊತ್ತವನ್ನು ಪರಿಷ್ಕರಣೆ ಮಾಡಿದ್ದು ನೂತನವಾಗಿ ಪರಿಷ್ಕರಿಸಲ್ಪಟ್ಟ ದಂಡದ ವಿವರಗಳನ್ನು ನಮೂದಿಸಲಾಗಿದೆ.
ನಿಗದಿಪಡಿಸಿರುವ ವೇಗದ ಮಿತಿಗಿಂತ ಅತೀ ವೇಗ ಚಾಲನೆ ಮಾಡುವ ವಾಹನಗಳಿಗೆ ರೂ. 1 ಸಾವಿರ ದಂಡ, ರೂ. 500 ದಂಡ. ಅಪಾಯಕಾರಿ ಚಾಲನೆ-ಮೊಬೈಲ್ ಫೋನ್ ಬಳಕೆ-ಅಪಾಯಕಾರಿ ರೀತಿಯಲ್ಲಿ ಸರಕುಗಳನ್ನು ಸಾಗಾಣೆ ಮಾಡುವ ವಾಹನಗಳಿಗೆ ಮೊದಲನೇ ಸಲ ಒಂದು ಸಾವಿರ ರೂಪಾಯಿ ದಂಡ ಮತ್ತು 2 ಅಥವಾ ಅದಕ್ಕಿಂತ ಹೆಚ್ಚು ಸಲ ಪುನರಾವರ್ತನೆಗೊಂಡಲ್ಲಿ ರೂ. 2 ಸಾವಿರ ದಂಡ. ವಿಮೆ ಇಲ್ಲದೇ ಚಾಲನೆ ಮಾಡುವ ವಾಹನಗಳಿಗೆ ಒಂದು ಸಾವಿರ ರೂಪಾಯಿ ದಂಡ. ಬಸ್ ನಿರ್ವಾಹಕ ಟಿಕೆಟ್ ನೀಡದೇ ಪ್ರಯಾಣ ದರವನ್ನು ಪಡೆದುಕೊಂಡಲ್ಲಿ ನಿಗದಿಪಡಿಸಿದ ಪ್ರಯಾಣ ದರವನ್ನು ತೆಗೆದುಕೊಳ್ಳಲು ನಿರಾಕರಿಸಿದ್ದಲ್ಲಿ ರೂ. 500 ದಂಡ, ಟಿಕೆಟ್ ನೀಡದೇ ಇದ್ದಲ್ಲಿ ರೂ. 500 ದಂಡ, ಅಮಾನ್ಯವಾದ ಟಿಕೆಟ್‍ನ್ನು ನೀಡಿದ್ದಲ್ಲಿ ರೂ. 500 ದಂಡ, ನಿಗದಿಪಡಿಸಿರುವ ಮೊತ್ತಕ್ಕಿಂತ ಕಡಿಮೆ ಬೆಲೆಯ ಟಿಕೆಟ್‍ನ್ನು ನೀಡಿದ್ದಲ್ಲಿ ರೂ. 500 ದಂಡ, ಬಸ್ ಪಾಸ್/ಟಿಕೆಟ್‍ನ್ನು ಪರಿಶೀಲಿಸಲು ನಿರ್ಲಕ್ಷ್ಯತನ ತೋರಿದ್ದಲ್ಲಿ ರೂ. 500 ದಂಡ, ನೋಂದಣಿ ಇಲ್ಲದ ವಾಹನವನ್ನು ಚಾಲನೆ ಮಾಡುವದು, ಸಾರ್ವಜನಿಕ ರಸ್ತೆಯಲ್ಲಿ ಚಾಲನೆ ಮಾಡುವ ವಾಹನಗಳಿಗೆ ಮೊದಲನೇ ಸಲ ರೂ. 5 ಸಾವಿರ ದಂಡ ಮತ್ತು 2 ಅಥವಾ ಅದಕ್ಕಿಂತ ಹೆಚ್ಚು ಸಲ ಪುನರಾವರ್ತನೆಗೊಂಡಲ್ಲಿ ರೂ. 10 ಸಾವಿರ ದಂಡ, ಎಫ್.ಸಿ. ಇಲ್ಲದೇ ವಾಹನವನ್ನು ಚಾಲನೆ ಮಾಡುವದು/ ಸಾರ್ವಜನಿಕ ರಸ್ತೆಯಲ್ಲಿ ಚಾಲನೆ ಮಾಡುವ ವಾಹನಗಳಿಗೆ ಮೊದಲನೇ ಸಲ ರೂ. 2 ಸಾವಿರ ದಂಡ ಮತ್ತು 2 ಅಥವಾ ಅದಕ್ಕಿಂತ ಹೆಚ್ಚು ಸಲ ಪುನರಾವರ್ತನೆಗೊಂಡಲ್ಲಿ ರೂ. 5 ಸಾವಿರ ದಂಡ, ಸುರಕ್ಷಿತವಲ್ಲದ ರೀತಿಯಲ್ಲಿ ವಾಹನವನ್ನು ಸಾರ್ವಜನಿಕ ರಸ್ತೆಯಲ್ಲಿ ಸಂಚಾರಿ ನಿಯಮ ಉಲ್ಲಂಘನೆ ಮಾಡಿ ಚಾಲನೆ ಮಾಡುವದು, ನಿಷೇಧಿತ ಸ್ಥಳದಲ್ಲಿ ವಾಹನ ನಿಲುಗಡೆ ಮಾಡುವದು, ಅಪಾಯಕಾರಿ ರೀತಿಯಲ್ಲಿ ವಾಹನವನ್ನು ನಿಲುಗಡೆ ಮಾಡುವ ವಾಹನಗಳಿಗೆ ರೂಪಾಯಿ. ಒಂದು ಸಾವಿರ ದಂಡ ವಿಧಿಸಲಾಗಿದೆ.
ಈ ಬಗ್ಗೆ ಎಲ್ಲಾ ರೀತಿಯ ವಾಹನ ಚಾಲಕರುಗಳು ಹಾಗೂ ಸಾರ್ವಜನಿಕರು ವಾಹನಗಳನ್ನು ಚಲಾಯಿಸುವಾಗ ಯಾವದೇ ರೀತಿಯ ವಾಹನ ಚಾಲನ ಅಥವಾ ಇನ್ನಿತರ ಸಂಚಾರಿ ನಿಯಮಗಳನ್ನು ಉಲ್ಲಂಘಿಸದಂತೆ ಕೋರಲಾಗಿದೆ. ನಿಯಮಗಳನ್ನು ಉಲ್ಲಂಘಿಸುವ ವಾಹನ ಚಾಲಕರುಗಳ ವಿರುದ್ಧ ಮೇಲಿನ ನೂತನ ಸರಕಾರಿ ಅಧಿಸೂಚನೆ ಪ್ರಕಾರ ಕ್ರಮ ಕೈಗೊಳ್ಳಲಾಗುವದು ಎಂಬದಾಗಿ ಜಿಲ್ಲಾ ಪೊಲೀಸ್ ಪ್ರಕಟಣೆ ತಿಳಿಸಿದೆ.