ಮಡಿಕೇರಿ, ಜು. 18: ಜಿಲ್ಲೆಯ ವಿವಿಧೆಡೆಗಳಲ್ಲಿ ಶೈಕ್ಷಣಿಕ ಸಂಸ್ಥೆಗಳ ಚಟುವಟಿಕೆ ಜರುಗಿತು.

ಮಡಿಕೇರಿ: ಮಡಿಕೇರಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶ್ರೀ ರಾಮಕೃಷ್ಣ ಆಶ್ರಮ, ಪೊನ್ನಂಪೇಟೆ ಇವರ ವತಿಯಿಂದ ಪದವಿ ತರಗತಿಯ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ವಿತರಣಾ ಸಮಾರಂಭವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಶ್ರೀ ರಾಮಕೃಷ್ಣ ಆಶ್ರಮ, ಪೊನ್ನಂಪೇಟೆಯ ಹಿರಿಯ ಸ್ವಾಮೀಜಿ ಶ್ರೀ ಭೋದಸ್ವರೂಪನಂದ ಸ್ವಾಮೀಜಿಯವರು ದಿವ್ಯ ಸಾನಿಧ್ಯವಹಿಸಿ ಸ್ವಾಮಿ ವಿವೇಕಾನಂದರ ತತ್ವ ಆದರ್ಶಗಳನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು.

ವಿದ್ಯಾರ್ಥಿಗಳು ಸ್ವಾಮಿ ವಿವೇಕಾನಂದರ ಜೀವನ ತತ್ವಗಳನ್ನು ತಮ್ಮ ಜೀವನದಲ್ಲಿ ಆಳವಡಿಸಿಕೊಳ್ಳಬೇಕು ಎಂದರು. ಕಾರ್ಯಕ್ರಮದಲ್ಲಿ ಶ್ರೀ ರಾಮಕೃಷ್ಣ ಆಶ್ರಮದ ಭಕ್ತರಾದÀ ಶಶಿಚಂಗಪ್ಪ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಧ್ಯಾಪಕರಾದ ಡಾ. ದಯಾನಂದ ಕೆ.ಸಿ. ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಎಲ್ಲಾ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಚೆಟ್ಟಳ್ಳಿ: ಪರಿಸರ ಸ್ವಚ್ಛತೆಯ ಕುರಿತಾದ ಅರಿವು ವಿದ್ಯಾರ್ಥಿ ಜೀವನದಿಂದಲೇ ಮೈಗೂಡಿಸಿಕೊಳ್ಳಬೇಕೆಂದು ಗ್ರೀನ್ ಸಿಟಿ ಫೋರಂ ಸದಸ್ಯೆ ಮೋಂತಿ ಗಣೇಶ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಮುತ್ತಪ್ಪ ಯುವ ಕಲಾ ಸಂಘ ಹಾಗೂ ನೆಹರು ಯುವ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ನೆಲ್ಲಿಹುದಿಕೇರಿ ಪಬ್ಲಿಕ್ ಶಾಲೆಯ ಸಭಾಂಗಣದಲ್ಲಿ ನಡೆದ ಸ್ವಚ್ಛತಾ ಆಂದೋಲನ ಕಾರ್ಯಕ್ರಮದಲ್ಲಿ ಕಸ ಪ್ರತ್ಯೇಕತೆಯ ಕುರಿತು ಮಾತನಾಡಿದ ಮೋಂತಿ ಗಣೇಶ್, ವಿದ್ಯಾರ್ಥಿ ಜೀವನದಲ್ಲಿ ಸ್ವಚ್ಛತೆಯ ಕುರಿತಾದ ಅರಿವು ಮೈಗೂಡಿಸಿಕೊಂಡು ಅದನ್ನು ತಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.

ವಿದ್ಯಾರ್ಥಿಗಳು ತಮ್ಮ ಮನೆಯಲ್ಲಿ ಸಂಗ್ರಹವಾಗುವ ಕಸಗಳನ್ನು ಹಸಿ ಕಸ, ಒಣ ಕಸ ಎಂದು ಪ್ರತ್ಯೇಕಿಸಿ ಅವುಗಳನ್ನು ಮರುಬಳಕೆಗೆ ಪ್ರಯತ್ನಿಸಬೇಕು. ಪ್ಲಾಸ್ಟಿಕ್ ಪದಾರ್ಥಗಳನ್ನು ಬಳಸುವದರಿಂದ ಅದು ಮಣ್ಣಿನಲ್ಲಿ ಸೇರಿ ಭೂಮಿಯ ಅಂತರ್ ಜಲ ಸಂಗ್ರಹಕ್ಕೆ ತಡೆಯುಂಟಾಗಿದ್ದು, ಪ್ಲಾಸ್ಟಿಕ್ ಚೀಲಗಳನ್ನು ಬಳಸುವದನ್ನು ಸಂಪೂರ್ಣವಾಗಿ ತಡೆಗಟ್ಟಿ, ಪರಿಸರದ ಕುರಿತು ಜಾಗೃತಿ ಮೂಡಿಸುವಲ್ಲಿ ವಿದ್ಯಾರ್ಥಿಗಳು ಮುಂದಾಗಬೇಕು. ಅಲ್ಲದೆ ಸ್ವಚ್ಛತೆಗೆ ಪ್ರಥಮ ಆದ್ಯತೆ ನೀಡಬೇಕೆಂದರು.

ಕಾರ್ಯಕ್ರಮದಲ್ಲಿ ಮುತ್ತಪ್ಪ ಯುವಕಲಾ ಸಂಘದ ಉಪಾಧ್ಯಕ್ಷ ಅನೀಶ್, ಕಾರ್ಯದರ್ಶಿ ಪ್ರಮೋದ್, ನೆಲ್ಲಿಹುದಿಕೇರಿ ಪಬ್ಲಿಕ್ ಶಾಲೆ ಆಡಳಿತ ಮಂಡಳಿಯ ಸದಸ್ಯ ಸುಕುಮಾರ್, ಉಪನ್ಯಾಸಕರುಗಳು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು. ಮುತ್ತಪ್ಪ ಯುವ ಕಲಾ ಸಂಘದ ಸದಸ್ಯ ಶರಣ್ ನಿರೂಪಿಸಿ, ಪ್ರಾಂಶುಪಾಲ ಜಸ್ಟಿನ್ ಕೊರಿಯ ಸ್ವಾಗತಿಸಿ, ವಂದಿಸಿದರು.

ಕೊಡ್ಲಿಪೇಟೆ-ಆಲೂರುಸಿದ್ದಾಪುರ: ಕೊಡ್ಲಿಪೇಟೆ ಕಲ್ಲುಮಠದ ಶಿವಕುಮಾರ ಸ್ವಾಮೀಜಿ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಶಾಲೆ ವತಿಯಿಂದ ಉಚಿತವಾಗಿ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸಲಾಯಿತು.

ಸಂಸ್ಥೆಯ ಅಧ್ಯಕ್ಷ ಮಹಂತ ಸ್ವಾಮೀಜಿ ಪುಸ್ತಕ ವಿತರಿಸಿ ಮಾತನಾಡಿ, ಶಿವಕುಮಾರ ಸ್ವಾಮೀಜಿಯವರ ಹೆಸರಿನಲ್ಲಿರುವ ಈ ವಿದ್ಯಾಸಂಸ್ಥೆ ಪ್ರಾರಂಭವಾಗಿರುವದರಿಂದ ಶಿವಕುಮಾರ ಸ್ವಾಮಿಜಿಯವರ ತತ್ವಾದರ್ಶಗಳನ್ನು ಪಾಲಿಸುವ ಮೂಲಕ ಈ ವಿದ್ಯಾಸಂಸ್ಥೆ ಮುನ್ನಡೆಯುತ್ತಿದೆ. ಇಲ್ಲಿ ಬಡವ-ಶ್ರೀಮಂತರೆನ್ನದೆ ಎಲ್ಲರಿಗೂ ಒಂದೇ ರೀತಿಯ ಶಿಕ್ಷಣ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ನೀಡಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ವಸುಧಾಮಣಿ, ಪ್ರೌಢಶಾಲಾ ಮುಖ್ಯ ಶಿಕ್ಷಕ ಅಭಿಲಾಷ್ ಮುಂತಾದವರಿದ್ದರು.ಸುಂಟಿಕೊಪ್ಪ: ಇಲ್ಲಿನ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ 2019-2020ನೇ ಸಾಲಿನ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭ ಹಾಗೂ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ ನಡೆಯಿತು.

ಸಮಾರಂಭದ ಉದ್ಘಾಟನೆಯನ್ನು ಕಾಲೇಜಿನ ಅಭಿವೃದ್ಧಿ ಸಮಿತಿ ಅಧ್ಯಕ್ಷ ವೈ.ಎಂ. ಕರುಂಬಯ್ಯ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಶಿಸ್ತಿನಿಂದ ಮತ್ತು ಏಕಾಗ್ರತೆಯಿಂದ ವಿದ್ಯಾಬ್ಯಾಸದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಕಾಲೇಜಿಗೆ ಕೀರ್ತಿ ತರುವದರ ಮೂಲಕ ದೇಶದ ಉತ್ತಮ ಪ್ರಜೆಯಾಗಿ ಎಂದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಪಿ.ಎಫ್. ಜಾನ್ ಮಾತನಾಡಿ, ವಿದ್ಯಾರ್ಥಿಗಳು ಕಾಲೇಜಿನ ನೀತಿ ನಿಯಮಗಳ ಜೊತೆಗೆ ಸದ್ಗುಣಗಳನ್ನು ಮೈಗೂಡಿಸಿಕೊಂಡು ಕಾಲೇಜಿಗೆ ಉತ್ತಮ ಫÀಲಿತಾಂಶ ತರುವದರ ಮೂಲಕ ಅಧ್ಯಯನದಲ್ಲಿ ತೊಡಗಿಸಿಕೊಳ್ಳಿ. ಕಾಲೇಜಿನಲ್ಲಿ ನುರಿತ ಅನುಭವ ಹೊಂದಿರುವ ವಿದ್ಯಾರ್ಥಿ ಸ್ನೇಹಿ ಉಪನ್ಯಾಸಕರಿಂದ ಜ್ಞಾನವನ್ನು ಪಡೆಯುವ ತವಕದಲ್ಲಿ ವಿದ್ಯಾರ್ಥಿಗಳು ಕಾಲೇಜಿಗೆ ತಪ್ಪದೆ ಹಾಜರಾಗಿ ನಿಮ್ಮ ಜೀವನವನ್ನು ಸಾರ್ಥಕ ಪಡಿಸಿಕೊಳ್ಳಬೇಕು ಎಂದರು. ಸಂತ ಮೇರಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಸೆಲ್ವರಾಜ್ ಮಾತನಾಡಿ, ಶಿಕ್ಷಣವು ವಿದ್ಯಾರ್ಥಿಗಳ ಜೀವನದಲ್ಲಿ ಲಭ್ಯವಾಗುವ ಅಪಾರ ಸಂಪತ್ತು. ಅದನ್ನು ನಿರ್ಲಕ್ಷ್ಯ ಮಾಡಿದರೆ ಮತ್ತೆ ಪಡೆಯಲು ಸಾಧ್ಯವಾಗುವದಿಲ್ಲ ತಮ್ಮ ವಿದ್ಯಾರ್ಥಿ ಜೀವನದಲ್ಲಿ ಹೇಗಿರುತ್ತಾರೆ ಎಂಬದರ ಮೇಲೆ ಅವರ ಮುಂದಿನ ಭವಿಷ್ಯ ನಿರ್ಧಾರವಾಗುತ್ತದೆ. ಜೀವನದಲ್ಲಿ ದೊರೆತ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ ಎಂದರು.

ಉಪನ್ಯಾಸಕ ಪಿ. ಸೋಮಚಂದ್ರ. ಬೆಳ್ಳಿಯಪ್ಪ ಮಾತನಾಡಿದರು. ಇತಿಹಾಸ ಉಪನ್ಯಾಕಿ ಕೆ.ಸಿ. ಕವಿತ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಈ ಸಂದರ್ಭ ಎಸ್.ಹೆಚ್. ಈಶ, ಕಾಲೇಜಿ ಉಪನ್ಯಾಸರಾದ ಫಿಲಿಫ್ ವಾಸ್, ಡಾ. ಸುಕನ್ಯ, ಕವಿತಾಭಕ್ತ್, ಕಾವ್ಯ, ಪದ್ಮಾವತಿ ಹಾಜರಿದ್ದರು. ವಿದ್ಯಾರ್ಥಿಗಳಾದ ನಿಶ್ಚಿತ ಸ್ವಾಗತಿಸಿ, ರುಮಾನ ಬಾನು ನಿರೂಪಿಸಿ, ಸೌಂದರ್ಯ ವಂದಿಸಿದರು.

ಭಾಗಮಂಡಲ: ಇಂದು ಶಿಕ್ಷಣ ಸಂಸ್ಥೆಗಳು ವ್ಯಾಪಾರೀಕರಣಗೊಳ್ಳುತ್ತಿ ರುವದರಿಂದ ಪೋಷಕರಿಗೆ ಹೊರೆ ಬೀಳುತ್ತಿದೆ ಎಂದು ಇಲ್ಲಿನ ಕಾವೇರಿ ಕಾಲೇಜಿನ ಆಡಳಿತ ಮಂಡಳಿ ಉಪಾಧ್ಯಕ್ಷ ಹ್ಯಾರೀಸ್ ಹೇಳಿದರು.

ಕಾವೇರಿ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪ್ರಮಾಣವಚನ ಬೋಧನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಗ್ರಾಮೀಣ ಮಟ್ಟದಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ದೊರೆಯುತ್ತಿದ್ದು, ಇದನ್ನು ವಿದ್ಯಾರ್ಥಿಗಳು ಹಾಗೂ ಪೋಷಕರು ಪಡೆದುಕೊಳ್ಳಬೇಕು ಎಂದರು. ಕಾಲೇಜಿನ ಪ್ರಾಂಶುಪಾಲೆ ಜಾನಕಿ ಮಾತನಾಡಿ, ನಾಯಕರಾದವರಲ್ಲಿ ದರ್ಪದ ಗುಣ ಇರಬಾರದು. ಸಹ ವಿದ್ಯಾರ್ಥಿಗಳೊಂದಿಗೆ ಆತ್ಮೀಯತೆಯಿಂದ, ಪ್ರೀತಿಯಿಂದ ವರ್ತಿಸಬೇಕು. ಕಾಲೇಜು ಜೀವನದಲ್ಲಿ ಅಂಜಿಕೆ ದೂರವಾಗಲಿದೆ ಎಂದರು. ಶಾಲಾ ನಾಯಕನಾಗಿ ದ್ವಿತೀಯ ಪಿ.ಯು.ಸಿ.ಯ ನರಸಿಂಹ, ಉಪ ನಾಯಕನಾಗಿ ಲವಿನ್, ಕಾರ್ಯದರ್ಶಿಯಾಗಿ ಸುರಭಿ, ಉಪ ಕಾರ್ಯದರ್ಶಿಯಾಗಿ ಸಂಜಯ್ ಆಯ್ಕೆಯಾಗಿದ್ದು, ವಿವಿಧ ಉಪ ಸಮಿತಿಗಳನ್ನು ರಚಿಸಿ ಪ್ರಮಾಣವಚನ ಬೋಧಿಸಲಾಯಿತು. ವೇದಿಕೆಯಲ್ಲಿ ಪ್ರೌಢಶಾಲಾ ಮುಖ್ಯ ಶಿಕ್ಷಕ ಶ್ರೀಕೃಷ್ಣ, ಶಿಕ್ಷಕರಾದ ಕೆ. ಪೂಣಚ್ಚ, ಅವಿನಾಶ್, ಲೋಕನಾಥ್ ಉಪಸ್ಥಿತರಿದ್ದರು.

ಗೋಣಿಕೊಪ್ಪಲು: ಗೋಣಿಕೊಪ್ಪಲಿನ ಲಯನ್ಸ್ ಶಾಲೆಯ ಪ್ರಾಥಮಿಕ, ಪ್ರೌಢ ಮತ್ತು ಪದವಿ ಕಾಲೇಜಿನ 2019-2020ನೇ ಸಾಲಿನ ವಿದ್ಯಾರ್ಥಿ ಸಂಘಗಳ ನಾಯಕರಿಗೆ ಪ್ರಮಾಣ ವಚನ ಬೋಧಿಸಲಾಯಿತು. ವಿದ್ಯಾಸಂಸ್ಥೆಯ ಪ್ರಾಂಶುಪಾಲೆ ಎಂ. ಅಕ್ಕಮ್ಮ ವಿದ್ಯಾರ್ಥಿ ನಾಯಕರಿಗೆ ಪ್ರಮಾಣ ವಚನ ಬೋಧಿಸಿದರು.

ಸಂಸ್ಥೆಯ ಅಧ್ಯಕ್ಷ ಸಿಎಂ ಅಪ್ಪಣ್ಣ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಹಿತವಚನ ನುಡಿದರು. ವಿದ್ಯಾಸಂಸ್ಥೆಯ ಘನತೆ ಗೌರವ ಕಾಪಾಡುವದರೊಂದಿಗೆ ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿಗೆ ಶ್ರಮಿಸುವದಾಗಿ ವಿದ್ಯಾರ್ಥಿ ನಾಯಕರು ಇದೇ ಸಂದರ್ಭ ಪ್ರಮಾಣ ಮಾಡಿದರು. ಸಂಸ್ಥೆಯ ಉಪಾಧ್ಯಕ್ಷ ಚಂಗಪ್ಪ, ಕಾರ್ಯದರ್ಶಿ ಪೆಮ್ಮಯ್ಯ, ಖಜಾಂಚಿ ಧನು ಉತ್ತಯ್ಯ, ಲಯನ್ಸ್ ಅಧ್ಯಕ್ಷ ಪೂಣಚ್ಚ ಈ ಸಂದರ್ಭ ಉಪಸ್ಥಿತರಿದ್ದರು.