ಕೂಡಿಗೆ, ಜು. 18: ಕೊಡಗು ಜಿಲ್ಲಾ ಆರೋಗ್ಯ ಕೇಂದ್ರ ಮತ್ತು ಕಲ್ಯಾಣ ಇಲಾಖೆ, ಜಿಲ್ಲಾ ಕ್ಷಯ ರೋಗ ನಿಯಂತ್ರಣ ಕೇಂದ್ರ ಇವರ ನಿರ್ದೇಶನದಂತೆ ಕೂಡಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಕ್ಷಯರೋಗ ನಿಯಂತ್ರಣ ಕಾರ್ಯಕ್ರಮಕ್ಕೆ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಚಾಲನೆ ನೀಡಲಾಯಿತು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ವೈದ್ಯಾಧಿಕಾರಿ ಡಾ. ರವಿಚಂದ್ರ ಮಾತನಾಡಿ, ದೇಶ ಮತ್ತು ರಾಜ್ಯ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕ್ಷಯರೋಗ ನಿಯಂತ್ರಣದ ಕಾರ್ಯಕ್ರಮ ದಡಿಯಲ್ಲಿ ನಮ್ಮ ಆರೋಗ್ಯ ಕೇಂದ್ರದ ವತಿಯಿಂದಲೂ ಟಿ.ಬಿ. ರೋಗದ ನಿಯಂತ್ರಣದ ಬಗ್ಗೆ, ಜ್ವರ ಪ್ರಕರಣ, ಕೆಮ್ಮುಗಳ ಬಗ್ಗೆ ದಾಖಲಾತಿ ಪಡೆಯುವದು. ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಗೊಳಪಡುವ ಎಲ್ಲಾ ಗ್ರಾಮಗಳಿಗೆ ಆಶಾ ಕಾರ್ಯಕರ್ತೆಯರು ಆರೋಗ್ಯ ಸಹಾಯಕರು, ಆಯಾ ಗ್ರಾಮಗಳಿಗೆ ಮೂರು ಜನರ ತಂಡಗಳಂತೆ ಪ್ರತಿ ಮನೆಗಳಿಗೆ ತೆರಳಿ ಸಮೀಕ್ಷೆ ನಡೆಸಿ, ಕೆಮ್ಮು ಇದ್ದಲ್ಲಿ ಸ್ಥಳದಲ್ಲೇ ಕಫವನ್ನು ಪಡೆದು ಆರೋಗ್ಯ ಕೇಂದ್ರದ ಪ್ರಯೋಗಾಲಯಕ್ಕೆ ತಲಪಿಸುವದು. ಕ್ಷಯ ರೋಗವಿದ್ದಲ್ಲಿ ಜಿಲ್ಲಾ ಪ್ರಯೋಗಾಲಯದಲ್ಲಿ ಮರು ಪರೀಕ್ಷೆ ನಡೆಸಿ, ರೋಗಿಗಳಿಗೆ ಚಿಕಿತ್ಸೆ ನೀಡಿ ಕ್ಷಯ ರೋಗ ನಿಯಂತ್ರಣ ಮಾಡುವದು ಈ ಕಾರ್ಯಕ್ರಮದ ಉದ್ದೇಶವಾಗಿದೆ.

ಇದರಂತೆ ಈ ವ್ಯಾಪ್ತಿಯ 25 ಮಂದಿ ಆಶಾ ಕಾರ್ಯಕರ್ತೆಯರು, ನಾಲ್ಕು ಆರೋಗ್ಯ ಸಹಾಯಕ, ಸಹಾಯಕಿಯರು ಕಾರ್ಯ ಪ್ರವೃತ್ತರಾಗಿದ್ದಾರೆ ಎಂದರು.

ಈ ಸಂದರ್ಭ ಕೂಡಿಗೆ ಮತ್ತು ಕೂಡುಮಂಗಳೂರು ವ್ಯಾಪ್ತಿಯ ಜನಪ್ರತಿನಿಧಿಗಳು, ಗ್ರಾಮಸ್ಥರು ಪಾಲ್ಗೊಂಡಿದ್ದರು.