ಬೆಂಗಳೂರು, ಜು. 18: ಮಡಿಕೇರಿಯ ಐತಿಹಾಸಿಕ ಕೋಟೆ ಹಾಗೂ ಅರಮನೆಯನ್ನು ಅ. 31 ರೊಳಗೆ ಪುರಾತತ್ವ ಇಲಾಖೆಗೆ ಹಸ್ತಾಂತರಿಸಬೇಕು ಎಂದು ರಾಜ್ಯ ಸರಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.
ಆಲೂರು-ಸಿದ್ದಾಪುರ ಗ್ರಾಮದ ಜೆ.ಎಸ್. ವಿರೂಪಾಕ್ಷಯ್ಯ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ್ ಹಾಗೂ ನ್ಯಾಯಮೂರ್ತಿ ಹೆಚ್.ಟಿ. ನರೇಶ್ ಪ್ರಸಾದ್ ಅವರಿದ್ದ ಪೀಠ ವಿಚಾರಣೆ ನಡೆಸಿತು.
ಪುರಾತತ್ವ ಇಲಾಖೆ ಪರ ವಕೀಲೆ ಎಂ.ಸಿ. ನಾಗಶ್ರೀ ವಾದ ಮಂಡಿಸಿ, ಐತಿಹಾಸಿಕ ಕೋಟೆ ಮತ್ತು ಅರಮನೆಯನ್ನು ಸಂರಕ್ಷಿತ ಪ್ರದೇಶ ಎಂದು ಕೇಂದ್ರ ಸರಕಾರ ಘೋಷಿಸಿದೆ. ಆದರೆ ಅದು ಸದ್ಯ ರಾಜ್ಯ ಸರಕಾರದ ಸುಪರ್ದಿಯಲ್ಲಿದೆ ಎಂದರು.
ಸರಕಾರ ಪರ ವಾದ ಮಂಡಿಸಿದ ವಕೀಲರು, ಸದ್ಯಕ್ಕೆ ಕೋಟೆಯಲ್ಲಿ ಕೆಲ ಸರಕಾರಿ ಕಚೇರಿಗಳು ಕಾರ್ಯನಿರ್ವಹಿಸುತ್ತಿದ್ದು, ಅವುಗಳನ್ನು ಬೇರೆಡೆಗೆ ಸ್ಥಳಾಂತರಿಸುವ ಕಾರ್ಯ ನಡೆಯುತ್ತಿದೆ. ಅಕ್ಟೋಬರ್ ಅಂತ್ಯದ ವೇಳೆಗೆ ಕೋಟೆಯನ್ನು ಹಸ್ತಾಂತರ ಮಾಡಲಾಗುವದು ಎಂದು ನ್ಯಾಯ ಪೀಠಕ್ಕೆ ತಿಳಿಸಿದರು.
ವಾದ - ಪ್ರತಿವಾದ ಆಲಿಸಿದ ಪೀಠ, ಸರಕಾರ ತಾನೇ ಹೇಳಿರುವಂತೆ ಅ. 31 ರೊಳಗೆ ಕೋಟೆ, ಅರಮನೆಯನ್ನು ಪುರಾತತ್ವ ಇಲಾಖೆಗೆ ಹಸ್ತಾಂತರಿಸಬೇಕು. ಪುರಾತತ್ವ ಇಲಾಖೆ ಅಧಿಕಾರಿಗಳು ಕೋಟೆ ಹಾಗೂ ಅರಮನೆ ಸ್ಥಳಕ್ಕೆ ಭೇಟಿ ನೀಡಿ ಅದು ಶಿಥಿಲಾವಸ್ಥೆಯಲ್ಲಿದೆಯೇ ಇಲ್ಲವೇ ಎಂಬದನ್ನು ಪರಿಶೀಲಿಸಿ ತಾತ್ಕಾಲಿಕ ದುರಸ್ತಿ ಕಾಮಗಾರಿ ಕೈಗೊಳ್ಳುವ ಬಗ್ಗೆ ವರದಿಯನ್ನು ಸಲ್ಲಿಸಬೇಕು ಎಂದು ನಿರ್ದೇಶಿಸಿ, ವಿಚಾರಣೆಯನ್ನು ಆ. 28 ಕ್ಕೆ ಮುಂದೂಡಿತು.