ಕುಶಾಲನಗರ, ಜು. 18: ಉತ್ತರ ಪ್ರದೇಶದಲ್ಲಿ ಕೊಡಗು ಜಿಲ್ಲೆಯ ಅರಣ್ಯಾಧಿಕಾರಿಗಳು ಸೇರಿದಂತೆ ರಾಜ್ಯದ ಕಾರ್ಯಾಚರಣೆ ತಂಡ ನರಹಂತಕ ಆನೆಗಳನ್ನು ಹಿಡಿಯುವಲ್ಲಿ ಯಶಸ್ವಿಯಾಗಿದೆ. ಕೊಡಗು ಜಿಲ್ಲೆಯ ದುಬಾರೆ ಸಾಕಾನೆ ಶಿಬಿರದ ಉಸ್ತುವಾರಿ ಅಧಿಕಾರಿ ಕನ್ನಂಡ ರಂಜನ್, ಹಾಸನದ ಶಾರ್ಪ್ ಶೂಟರ್ ವೆಂಕಟೇಶ್, ಮೈಸೂರಿನ ಅಕ್ರಂ ಮತ್ತು ವನ್ಯಜೀವಿ ತಜ್ಞ ಡಾ.ಮುಜೀಬ್ ಅವರ ತಂಡ ಕಳೆದ 16 ರಿಂದ ಉತ್ತರ ಪ್ರದೇಶದ ಬರೇಲಿಯ ರಾಂಪುರ ಎಂಬಲ್ಲಿ 6 ಜನರನ್ನು ಬಲಿ ಪಡೆದ ಎರಡು ಕಾಡಾನೆಗಳನ್ನು ಹಿಡಿದು ಕಾಡಿಗಟ್ಟುವ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಉತ್ತರ ಪ್ರದೇಶದಲ್ಲಿ ಕಾಡಾನೆಗಳ ಹಾವಳಿ ಅಧಿಕವಾಗಿದ್ದು ಬರೇಲಿ ಜಿಲ್ಲೆಯ ರಾಂಪುರ ಪಟ್ಟಣದಲ್ಲಿ ಹಲವು ದಿನಗಳಿಂದ ಬೀಡುಬಿಟ್ಟಿದ್ದ ಎರಡು ಕಾಡಾನೆಗಳು ಅಲ್ಲಿನ ಅರಣ್ಯ ಇಲಾಖೆ ನೌಕರನೊಬ್ಬ ಸೇರಿದಂತೆ ಒಟ್ಟು 6 ಜನರನ್ನು ಕೊಂದು ಹಾಕಿತ್ತು. ಇದರಿಂದ ತಲೆನೋವಾದ ಉತ್ತರ ಪ್ರದೇಶ ಸರಕಾರ ಕರ್ನಾಟಕ ರಾಜ್ಯ ಸರಕಾರದ ಮೊರೆಹೋದ ಹಿನೆÀ್ನಲೆಯಲ್ಲಿ ಕಾಡಾನೆಗಳನ್ನು ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲಿ ಮುಂದಾಳತ್ವ ವಹಿಸುತ್ತಿದ್ದ ಕುಶಾಲನಗರ ದುಬಾರೆ ಸಾಕಾನೆ ಶಿಬಿರದ ಉಸ್ತುವಾರಿ ಅಧಿಕಾರಿ ಕನ್ನಂಡ ರಂಜನ್ ಮತ್ತು ತಂಡವನ್ನು ಕಳುಹಿಸಿಕೊಟ್ಟಿತ್ತು.
ಒಂದು ವಾರಗಳ ಕಾಲ ಕಾರ್ಯಾಚರಣೆ ಮಾಡಿದ ತಂಡ ನರಹಂತಕ ಆನೆಗಳನ್ನು ಹಿಡಿಯುವ ಕಾರ್ಯಾಚರಣೆಯಲ್ಲಿ ಯಶಸ್ವಿಯಾಗಿದ್ದು ಆನೆಗಳನ್ನು ನೇಪಾಳದ ಗಡಿ ಭಾಗದ ಅರಣ್ಯಕ್ಕೆ ಸ್ಥಳಾಂತರಿಸಲಾಯಿತು ಎಂದು ಕನ್ನಂಡ ರಂಜನ್ ಶಕ್ತಿಗೆ ತಿಳಿಸಿದ್ದಾರೆ.
-ವರದಿ-ಚಂದ್ರಮೋಹನ್