ಮಡಿಕೇರಿ, ಜು. 17: ಮಡಿಕೇರಿ ನಗರದ ಹೃದಯಭಾಗವಾದ ಮಹದೇವಪೇಟೆ ಸೇರಿದಂತೆ ನಗರದ ಹದಗೆಟ್ಟಿರುವ ರಸ್ತೆಗಳು, ಅಸಮರ್ಪಕ ಚರಂಡಿ ಕಾಮಗಾರಿ, ಪಾದಚಾರಿ ರಸ್ತೆಗಳ ಅವ್ಯವಸ್ಥೆಯನ್ನು ಖಂಡಿಸಿ ಸಾರ್ವಜನಿಕರು ಮಾರುಕಟ್ಟೆ ಬಳಿ ಪ್ರತಿಭಟಿಸಿದರು.
ಮಹದೇವಪೇಟೆ ಮತ್ತು ಗಣಪತಿ ಬೀದಿಯ ಸಾರ್ವಜನಿಕರು ಎಸ್ಡಿಎಸಿಯು, ಮಾರ್ಕೆಟ್ ವ್ಯಾಪಾರಿಗಳ ಹಿತರಕ್ಷಣಾ ಸಮಿತಿ, ಮಡಿಕೇರಿ ಹಿತರಕ್ಷಣಾ ಸಮಿತಿ ಹಾಗೂ ಇನ್ನಿತರ ಸಂಘ ಸಂಸ್ಥೆಯವರು, ವ್ಯಾಪಾರಿಗಳು, ಆಟೋ ಚಾಲಕರು, ಮಾರುಕಟ್ಟೆ ಜಂಕ್ಷನ್ ಬಳಿ ಪ್ರತಿಭಟನೆ ಮಾಡಿದರು. ಮಹದೇವಪೇಟೆ ರಸ್ತೆ ಅಭಿವೃದ್ಧಿ ಪಡಿಸಿ ಒಂದೂವರೆ ವರ್ಷದ ಹಿಂದೆ ಕಾಂಕ್ರಿಟ್ ರಸ್ತೆ ನಿರ್ಮಿಸಲಾಗಿದ್ದು, ರಸ್ತೆ 6 ತಿಂಗಳಲ್ಲಿ ಕಿತ್ತು ಬಂದಿರುತ್ತದೆ. ಅಲ್ಲದೆ, ಪಾದಚಾರಿಗಳ ಸಂಚಾರಕ್ಕಾಗಿ ಚರಂಡಿಗೆ ಸ್ಲ್ಯಾಬ್ ಅಳವಡಿಸಿ ಇಂಟರ್ಲಾಕ್ ಹಾಕಬೇಕಿತ್ತಾದರೂ ಇನ್ನೂ ಕೆಲಸ ಆರಂಭಿಸಿಲ್ಲ. ಈ ರಸ್ತೆಯಲ್ಲಿ ಆಗಾಗ್ಗೆ ಅಪಘಾತಗಳು ಸಂಭವಿಸುತ್ತಿರುತ್ತವೆ. ಅಲ್ಲದೆ ನಗರದ ಇತರ ರಸ್ತೆಗಳೂ ಹದಗೆಟ್ಟಿದ್ದು, ಸಂಚಾರ ಅಸ್ತವ್ಯಸ್ತವಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಕಾಮಗಾರಿ ಕೈಗೊಂಡ ಗುತ್ತಿಗೆದಾರನ ವಿರುದ್ಧ ಕಾನೂನು ಕ್ರಮ ಕೈಗೊಂಡು ಕಪ್ಪುಪಟ್ಟಿಗೆ ಸೇರಿಸಬೇಕು, ತಾಂತ್ರಿಕ ಅಧಿಕಾರಿಯನ್ನು ಅಮಾನತುಗೊಳಿಸಬೇಕು ಎಂದು ಆಗ್ರಹಿಸಿದ್ದರಲ್ಲದೆ, ನಗರಸಭೆ ವಿರುದ್ಧ ದಿಕ್ಕಾರ ಕೂಗಿದರು. ಆಯುಕ್ತರು, ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಆಗಮಿಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸ್ಥಳಕ್ಕಾಗಮಿಸಿದ ಸಹಾಯಕ ಅಭಿಯಂತರ ಗೋಪಾಲಯ್ಯ, ವನಿತಾ ಅವರುಗಳನ್ನು ಪ್ರತಿಭಟನಾಕಾರರು ತರಾಟೆಗೆ ತೆಗೆದುಕೊಂಡರು. ಪ್ರತಿಕ್ರಿಯಿಸಿದ ಅಭಿಯಂತರರು ಈಗಾಗಲೇ ರಸ್ತೆ ಗುಂಡಿ ಮುಚ್ಚುವ ಕೆಲಸ ಕೈಗೆತ್ತಿಕೊಂಡಿರುವದಾಗಿ ಪ್ರತಿಭಟನಾಕಾರರನ್ನು ಸಮಾಧಾನ ಪಡಿಸಿದರು. ಪ್ರತಿಭಟನಾಕಾರರು ಮನವಿ ಸಲ್ಲಿಸಿದರು.
ಅಧಿಕಾರಿಗಳಿಗೆ ಜ್ಞಾನೋದಯ...!
ರಸ್ತೆ ಅವ್ಯವಸ್ಥೆ ವಿರುದ್ಧ ಪ್ರತಿಭಟನೆ ನಡೆಸುವ ಬಗ್ಗೆ ಸಂದೇಶಗಳು ನಿನ್ನೆಯಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ಅಧಿಕಾರಿಗಳಿಗೆ ಜ್ಞಾನೋದಯವಾಗಿದೆ. ವಿಚಿತ್ರವೆಂದರೆ, ಇತ್ತ ಮಾರುಕಟ್ಟೆ ಜಂಕ್ಷನ್ನಲ್ಲಿ ಪ್ರತಿಭಟನೆ ನಡೆಯುತ್ತಿದ್ದರೆ, ಅದೇ ಮಾರ್ಗದಲ್ಲಿ ಕಾಂಕ್ರಿಟ್ ಮಿಕ್ಸರ್ ವಾಹನವೊಂದು ಸಾಗಿ ಬಂದಿತು. ಪ್ರತಿಭಟನಾಕಾರರು ಅದಕ್ಕೆ ದಾರಿ ಬಿಟ್ಟುಕೊಟ್ಟರು. ಆದರೆ, ಅದು ಎಲ್ಲಿಗೆ ಹೋಗುತ್ತಿದೆ ಎಂದು ಯಾರಿಗೂ ತಿಳಿದಿರಲಿಲ್ಲ.
ಸ್ವಲ್ಪ ಸಮಯದ ಬಳಿಕ ಕೆಳಗಡೆ ಇಂದಿರಾಗಾಂಧಿ ವೃತ್ತದಲ್ಲಿ ನಿರ್ಮಾಣಗೊಂಡಿರುವ ದೊಡ್ಡ ಹೊಂಡವನ್ನು ಕಾಂಕ್ರಿಟ್ನಿಂದ ಮುಚ್ಚುತ್ತಿದ್ದದು ಕಂಡು ಬಂದಿತು. ನಂತರದಲ್ಲಿ ಮಾರುಕಟ್ಟೆ ಬಳಿ ಸೇರಿದಂತೆ ಕೆಲವು ಗುಂಡಿಗಳನ್ನು ಮುಚ್ಚಲಾಯಿತು. ಆದರೆ, ಸಂಜೆ ಸುರಿದ ಮಳೆಗೆ ಒಂದಿಷ್ಟು ಕಾಂಕ್ರಿಟ್ ಕೊಚ್ಚಿಹೋಯಿತು...!