ಕೂಡಿಗೆ, ಜು. 17 : ಯಲಕನೂರು ಕಲ್ಲುಕೋರೆಯಿಂದ ಕುಶಾಲನಗರ ಕಡೆಗೆ ಕಲ್ಲು ತುಂಬಿಕೊಂಡು ಸಾಗುತ್ತಿದ್ದ 20 ಕ್ಕೂ ಹೆಚ್ಚು ಲಾರಿಗಳನ್ನು ಕಣಿವೆ ಸಮೀಪದ ಭುವನಗಿರಿಯಲ್ಲಿ ತಡೆಗೆ ಗ್ರಾಮಸ್ಥರು ಪ್ರತಿಭಟನೆ ನಡೆಸಿದ ಘಟನೆ ನಡೆಯಿತು.
ಕಲ್ಲುಕೋರೆಯಿಂದ ಸೀಗೆಹೊಸೂರು ಮೂಲಕ ಮದಲಾಪುರ ರಸ್ತೆ ಮಾರ್ಗವಾಗಿ ಹೋಗುತ್ತಿದ್ದ ಲಾರಿಗಳು ಇದೀಗ ಸೀಗೆಹೊಸೂರು-ಮಲಾಪುರ ರಸ್ತೆ ಕಾಮಗಾರಿ ನಡೆಯುತ್ತಿರುವದರಿಂದ, ಬದಲಿ ರಸ್ತೆಯಾಗಿ ಸೀಗೆಹೊಸೂರು- ಕಣಿವೆ ಮಾರ್ಗದಲ್ಲಿ ಚಲಿಸುತ್ತಿವೆ. ಈ ಕಣಿವೆ - ಸೀಗೆಹೊಸೂರು ರಸ್ತೆಯು ಲೋಕೋಪಯೋಗಿ ಇಲಾಖೆಯ ರಸ್ತೆಯಾಗಿದ್ದು, ಈ ರಸ್ತೆಯಲ್ಲಿ ದಿನಂಪ್ರತಿ 20ಕ್ಕೂ ಅಧಿಕ ಲಾರಿಗಳು ಕಲ್ಲು ತುಂಬಿಸಿ ಸಾಗುವದರಿಂದ ರಸ್ತೆಯ ಅಲ್ಲಲ್ಲಿ ಗುಂಡಿ ಬಿದ್ದಿದ್ದು, ಅನಾಹುತಗಳಾಗುತ್ತಿವೆ ಎಂದು ಆರೋಪಿಸಿ ಅಲ್ಲಿನ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಈ ಸಂದರ್ಭ ಕಲ್ಲುಕೋರೆಯ ಲಾರಿಯ ಮಾಲೀಕರು ಸ್ಥಳಕ್ಕಾಗಮಿಸಿ. ರಸ್ತೆ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ರಸ್ತೆಯಲ್ಲಿ ಲಾರಿಗಳು ಬರುತ್ತಿವೆ. ಈ ರಸ್ತೆಯು ಗ್ರಾಮಾಂತರ ಪ್ರದೇಶದ ರಸ್ತೆಯಾಗಿರುವದರಿಂದ ಲಾರಿಯು ಕಲ್ಲು ತುಂಬಿಸಿ ಈ ಮಾರ್ಗವಾಗಿ ನಿಧಾನವಾಗಿ ಸಂಚರಿಸಬೇಕು. ಖಾಲಿ ಹೋಗುವ ಲಾರಿಯು ಬೇರೆ ರಸ್ತೆಯಲ್ಲಿ ಚಲಿಸಬೇಕೆಂದು ಲಾರಿ ಚಾಲಕರಿಗೆ ಸೂಚಿಸಿದರು. ಲಾರಿ ಮಾಲೀಕರ ಮತ್ತು ಗ್ರಾಮಸ್ಥರ ಮಾತಿನ ಚಕಮಕಿಯು ಪೊಲೀಸರ ಸಮ್ಮುಖದಲ್ಲಿ ಇತ್ಯರ್ಥವಾಯಿತು.