*ಸಿದ್ದಾಪುರ, ಜು. 17: ವಾಲ್ನೂರು-ತ್ಯಾಗತ್ತೂರು ಗ್ರಾಮ ಪಂಚಾಯಿತಿ ಅಧೀನಕ್ಕೆ ಒಳಪಡುವ ರಸ್ತೆಗಳು ಅತಿಕ್ರಮಣಗೊಂಡಿವೆ. ಒತ್ತುವರಿಯಾಗಿರುವ ರಸ್ತೆಗಳು ಮರಳಿ ಗ್ರಾಮ ಪಂಚಾಯಿತಿ ಸ್ವಾದೀನಕ್ಕೆ ತೆಗೆದುಕೊಳ್ಳುವ ಕ್ರಮಕ್ಕೆ ಮುಂದಾಗುವದರ ಬಗ್ಗೆ ಚರ್ಚೆ ನಡೆದು ನಿರ್ಣಯ ಕೈಗೊಳ್ಳಲಾಯಿತು.

ವಾಲ್ನೂರು-ತ್ಯಾಗತ್ತೂರು ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯು ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಾಗರತ್ನ ಅಧ್ಯಕ್ಷತೆಯಲ್ಲಿ ನಡೆಯಿತು.

ಕೇಂದ್ರ ಸರ್ಕಾರದ ಉಜ್ವಲ ಯೋಜನೆಯಡಿ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಉಚಿತ ಸಿಲಿಂಡರ್ ಮತ್ತು ಗ್ಯಾಸ್ ಸ್ಟೌ ವಿತರಿಸ ಬೇಕೆಂದು ಕಡ್ಡಾಯ ನಿಯಮವಿದ್ದರೂ, ಚೆಟ್ಟಳ್ಳಿಯ ಇಂಡಿಯನ್ ಗ್ಯಾಸ್ ಏಜನ್ಸಿಯವರು ಬಡ ಬಿಪಿಎಲ್ ಕಾರ್ಡ್ ಹೊಂದಿ ಉಜ್ವಲ ಯೋಜನೆಯಡಿ ಅಡುಗೆ ಅನಿಲ ಕಿಟ್ ಪಡೆಯುವವರಿಂದ ಹಣ ಪಡೆದುಕೊಳ್ಳುತ್ತಿದ್ದಾರೆ. ಇದು ಗಂಭೀರ ಅಪರಾಧವಾಗಿದ್ದು, ಗ್ರಾಮಸ್ಥರಿಂದ ದೂರು ಬಂದ ಹಿನ್ನೆಲೆ ಚೆಟ್ಟಳ್ಳಿಯ ಇಂಡಿಯನ್ ಗ್ಯಾಸ್ ಏಜನ್ಸಿಯನ್ನು ಮುಚ್ಚಬೇಕು ಮತ್ತು ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಮತ್ತು ಸಂಬಂಧಿಸಿದ ಅಧಿಕಾರಿಗಳಿಗೆ ದೂರು ನೀಡಲು ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ವಾಲ್ನೂರಿನಲ್ಲಿ ಅನೇಕ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸದೇ ಕೂಲಿ ಸೇರಿದಂತೆ ಇತರ ಕೆಲಸಗಳಿಗೆ ಕಳುಹಿಸುತ್ತಿರುವ ಪ್ರಕರಣಗಳು ಇರುವದರಿಂದ ಅಂಥ ಪೋಷಕರನ್ನು ಪತ್ತೆ ಹಚ್ಚಿ ಸರ್ಕಾರದಿಂದ ಅವರಿಗೆ ಸಿಗುತ್ತಿರುವ ಸೌಲಭ್ಯಗಳನ್ನು ರದ್ದುಪಡಿಸುವದು, ಕಂದಾಯ ಅಧಿಕಾರಿಗಳು ಮತ್ತು ಆಹಾರ ಇಲಾಖೆಯ ಅಧಿಕಾರಿಗಳಿಗೆ ದೂರು ಸಲ್ಲಿಸಿ ಅಂತಹವರ ಪಡಿತರ ಚೀಟಿಯನ್ನು ರದ್ದುಗೊಳಿಸುವ ಬಗ್ಗೆ ತೀರ್ಮಾನಿಸಲಾಯಿತು.

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಕೆಲವು ಸಾರ್ವಜನಿಕ ಕೆರೆಗಳು ಒತ್ತುವರಿಯಾಗಿವೆ. ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಂಡು ಒತ್ತುವರಿಯಾಗಿರುವ ಕೆರೆಗಳನ್ನು ಪಂಚಾಯಿತಿ ಸುಪರ್ಧಿಗೆ ತೆಗೆದುಕೊಂಡು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಚರ್ಚೆನಡೆಯಿತು. ವಾಲ್ನೂರಿ ನಲ್ಲಿರುವ 2 ಎಕರೆ ವಿಸ್ತೀರ್ಣದ ಸಾರ್ವಜನಿಕ ಕೆರೆಯೊಂದು ಒತ್ತುವರಿಯಾಗಿ ಇದೀಗ 95 ಸೆಂಟ್ ಮಾತ್ರ ಉಳಿದಿದೆ. ಈ ಕೆರೆಯನ್ನು ಪಂಚಾಯಿತಿ ಸ್ವಾಧೀನಕ್ಕೆ ತೆಗೆದುಕೊಂಡು ಅಭಿವೃದ್ಧಿಪಡಿಸಲು ನಿರ್ಣಯ ಮಾಡಲಾಯಿತು.

ಸಭೆಯಲ್ಲಿ ಗ್ರಾಮಾಭಿವೃದ್ಧಿ ಅಧಿಕಾರಿ ಅನಿಲ್, ಉಪಾಧ್ಯಕ್ಷ ಸತೀಶ್, ಸದಸ್ಯರಾದ ಅಂಚೆಮನೆ ಸುಧಿ, ಭುವನೇಂದ್ರ, ಬಿ.ಕೆ. ಯಶೋದ, ಕಮಲಮ್ಮ, ಕವಿತ, ಜಮೀಲ, ಸಲೀಂ ಉಪಸ್ಥಿತರಿದ್ದರು.