ಕರಿಕೆ, ಜು. 16: ಇಲ್ಲಿನ ಸರಕಾರಿ ಪ್ರೌಢಶಾಲೆ ಎಳ್ಳುಕೊಚ್ಚಿಯಲ್ಲಿ ಎಸ್‍ಡಿಎಂಸಿ ವತಿಯಿಂದ 2019 ನೇ ಸಾಲಿನ ಎಸ್‍ಎಸ್‍ಎಲ್‍ಸಿಯಲ್ಲಿ ಉತ್ತಮ ಅಂಕ ಪಡೆದು ಉತ್ತೀರ್ಣ ರಾದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಪುನೀತ ಕೆ.ಸಿ. 519, ಸಾನಿಯಾ ಕೆ.ಟಿ. 515, ಪಲ್ಲವಿ ಹೆಚ್.ಡಿ. 505, ದಿವ್ಯ ಪಿ.ಸಿ. 502 ಹಾಗೂ ಉತ್ತೀರ್ಣ ರಾದ ಎಲ್ಲಾ ವಿದ್ಯಾರ್ಥಿಗಳಿಗೂ ನಗದು ಬಹುಮಾನ ನೀಡಿ ಗೌರವಿಸಲಾಯಿತು. ಪೊಲೀಸ್ ಠಾಣೆ, ಅರಣ್ಯ ಇಲಾಖೆ, ಅಂಗನವಾಡಿ, ಗ್ರಾಮ ಪಂಚಾಯಿತಿ ಕರಿಕೆ, ಡ್ರೈವರ್ ಪ್ರಶಾಂತ್, ಪ್ರದೀಪ್, ಎಸ್‍ಡಿಎಂಸಿ ಶಿಕ್ಷಕರುಗಳು ನಗದು ಬಹುಮಾನ ಪ್ರಾಯೋಜಿಸಿದ್ದರು. ಈ ಸಂದರ್ಭ ಮಂಗಳೂರು ವಿಶ್ವವಿದ್ಯಾಲಯದಿಂದ ಎಂಎಸ್‍ಸಿ ಬಯೋಟೆಕ್‍ನಲ್ಲಿ ದ್ವಿತೀಯ ರ್ಯಾಂಕ್ ಗಳಿಸಿದ ಶಾಲೆಯ ಹಳೆಯ ವಿದ್ಯಾರ್ಥಿ ಕಾವ್ಯ ಹೆಚ್.ಹೆಚ್. ಹಾಗೂ ರಾಜ್ಯಮಟ್ಟದ ಅಥ್ಲೀಟ್ ರಂಜಿತ್ ಕೆ.ಎಸ್. ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು. ಜಿಲ್ಲಾ ಪಂಚಾಯಿತಿ ಸದಸ್ಯೆ ಕವಿತಾ ಪ್ರಭಾಕರ್, ಗ್ರಾ.ಪಂ. ಅಧ್ಯಕ್ಷ ಬಾಲಚಂದ್ರ ನಾಯರ್ ಸನ್ಮಾನ ಕಾರ್ಯಕ್ರಮ ನೆರವೇರಿಸಿ ಕೊಟ್ಟರು. ಎಸ್‍ಡಿಎಂಸಿ ಅಧ್ಯಕ್ಷ ಶಿವಪ್ಪ ಕೆ.ಆರ್. ಅಧ್ಯಕ್ಷತೆ ವಹಿಸಿದ್ದರು. ಪೊಲೀಸ್ ಇಲಾಖೆಯ ಗೋವಿಂದ ಅವರು ಮಕ್ಕಳ ಜಾಗ್ರತೆ ಬಗ್ಗೆ ಪೋಷಕರಿಗೆ ಮಾಹಿತಿ ನೀಡಿದರು.

ಬಾಲಚಂದ್ರ ನಾಯರ್ ಮಾತನಾಡಿ, ವಿದ್ಯೆ ಎಲ್ಲಾ ಸಾಧನೆಗೂ ಅಸ್ತ್ರ ಎಂಬದನ್ನು ಅರಿತು ವಿದ್ಯಾರ್ಥಿಗಳು ಸಾಧನೆ ಮಾಡಬೇಕು ಎಂದು ಮಾರ್ಮಿಕವಾಗಿ ತಿಳಿಸಿಕೊಟ್ಟರು. ಶಾಲೆಯಲ್ಲಿ ಉತ್ತಮ ಅಂಕಗಳಿಸಿ ಉನ್ನತ ವ್ಯಾಸಂಗಮಾಡಿ ಉನ್ನತ ಹುದ್ದೆ ಅಲಂಕರಿಸಿದಾಗ ಶಿಕ್ಷಕರಿಗೆ, ಪೋಷಕರಿಗೆ, ಗ್ರಾಮಕ್ಕೆ ಕೀರ್ತಿ ಬರುತ್ತದೆ ಅದಕ್ಕೆ ಈ ಸಾಧಕರೇ ಸಾಕ್ಷಿ ಎಂದು ತಿಳಿಸಿದರು. ಮುಂದಿನ ದಿನಗಳಲ್ಲಿ ಈ ಫಲಿತಾಂಶ ಇನ್ನಷ್ಟು ಎತ್ತರಕ್ಕೇರಲು ಈ ವರ್ಷದ ವಿದ್ಯಾರ್ಥಿಗಳು ಶ್ರಮವಹಿಸಿ ಅಧ್ಯಯನ ನಿರತರಾಗಬೇಕೆಂದು ಕರೆಕೊಟ್ಟರು. ಜಿಲ್ಲಾ ಪಂಚಾಯಿತಿ ಸದಸ್ಯೆ ಕವಿತಾ ಪ್ರಭಾಕರ್ ಮಾತನಾಡಿ, ಉತ್ತಮ ಫಲಿತಾಂಶಕ್ಕೆ ಶ್ರಮಿಸಿದ ಶಾಲೆಯ ಎಲ್ಲ ಶಿಕ್ಷಕರನ್ನು ಅಭಿನಂದಿಸಿದರು. ಈ ರೀತಿಯ ಕಾರ್ಯಕ್ರಮಗಳು ಇದೇ ರೀತಿ ಮುಂದುವರಿಯುವಂತೆ ವಿದ್ಯಾರ್ಥಿಗಳು ಶಿಕ್ಷಕರ ಮಾರ್ಗದರ್ಶನ ಪಡೆದು ಅಧ್ಯಯನ ನಿರತರಾಗಬೇಕು ಹಾಗೂ ಮೊಬೈಲ್, ಟಿ.ವಿ., ಸಿನಿಮಾ, ಆಟಗಳಲ್ಲೇ ಹೆಚ್ಚು ಸಮಯ ಕಳೆದು ಕಾಲಹರಣ ಮಾಡಿಕೊಂಡು ಭವಿಷ್ಯ ದಲ್ಲಿ ಪಶ್ಚಾತಾಪ ಪಡುವಂತಾಗದೇ ಇತರ ಚಟುವಟಿಕೆಗಳಿಂದ ದೂರ ಇರುವಂತೆ ನೋಡಿಕೊಳ್ಳುವದು ಪ್ರತಿಯೊಬ್ಬ ಪೋಷಕರ ಕರ್ತವ್ಯ ಎಂದು ಪೋಷಕರನ್ನು ಎಚ್ಚರಿಸಿದರು. ವೆಂಕಪ್ಪ ಮಾತನಾಡಿ, ಶಾಲೆಯ ಫಲಿತಾಂಶಕ್ಕೆ ಎಲ್ಲಾ ಶಿಕ್ಷಕರನ್ನು ಅಭಿನಂದಿಸಿದರು. ಸಭೆಯಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಿಪಿನ್ ಕೆ.ಜೆ., ಉಪಾಧ್ಯಕ್ಷೆ ಶೋಲಿ ಜಾರ್ಜ್, ಹಿರಿಯ ಪ್ರಾಥಮಿಕ ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷರುಗಳು ಎಸ್.ಡಿ.ಎಂ.ಸಿ. ಮಾಜಿ ಅಧ್ಯಕ್ಷರುಗಳಾದ ನಾರಾಯಣ ಕೆ.ಎ. ವಿಜಯಕುಮಾರ್, ಎಸ್.ಕೆ. ವೆಂಕಪ್ಪ ಗೌಡ, ಗ್ರಾ.ಪಂ. ಸದಸ್ಯರುಗಳು, ಆಡಳಿತ ಮಂಡಳಿ ಸದಸ್ಯರು, ಶಿಕ್ಷಕರುಗಳು, ವಿದ್ಯಾರ್ಥಿಗಳು ಹಾಜರಿದ್ದರು. ಶಿಕ್ಷಕರಾದ ಅಶೋಕ ಸ್ವಾಗತಿಸಿ, ಮುಖ್ಯ ಶಿಕ್ಷಕರು ವಂದಿಸಿದರು.