ವೀರಾಜಪೇಟೆ, ಜು. 16: ವೀರಾಜಪೇಟೆ ಸಮುಚ್ಚಯ ನ್ಯಾಯಾಲಯಗಳಲ್ಲಿ ಜುಲೈ ಒಂದರಿಂದ ಇಲ್ಲಿಯವರೆಗೆ ಹಮ್ಮಿಕೊಂಡಿದ್ದ ರಾಷ್ಟ್ರೀಯ ಲೋಕ ಅದಾಲತ್‍ನಲ್ಲಿ ನಿನ್ನೆಯ ತನಕ ಒಟ್ಟು 85 ಪ್ರಕರಣಗಳು ರಾಜಿ ಸಂಧಾನದಲ್ಲಿ ಇತ್ಯರ್ಥಗೊಂಡಿದ್ದು, ಇದರಲ್ಲಿ ವಿವಾಹ, ಮೋಟಾರು ಕಾಯಿದೆ, ಹಣಕಾಸಿಗೆ ಸಂಬಂಧಿಸಿದಂತೆ ಚೆಕ್ ಪ್ರಕರಣಗಳು, ರಾಷ್ಟ್ರೀಯ ಬ್ಯಾಂಕ್‍ಗಳ ಸಾಲದಲ್ಲಿ ಬಡ್ಡಿ ರಿಯಾಯಿತಿ ಪ್ರಕರಣಗಳು ಸೇರಿವೆ.ರಾಷ್ಟ್ರೀಯ ಲೋಕ ಅದಾಲತ್‍ನಲ್ಲಿ ರಾಜಿ ಸಂಧಾನದಲ್ಲಿ ಇತ್ಯರ್ಥಪಡಿಸಲು ಒಟ್ಟು 260 ಕಡತಗಳು ಅದಾಲತ್‍ನ ಮುಂದೆ ಬಂದಿದ್ದು ಈ ಪೈಕಿ ನ್ಯಾಯ ಮಂಡಳಿಯ ಪ್ರಯತ್ನದಿಂದ 85 ಪ್ರಕರಣಗಳು ಇತ್ಯರ್ಥಗೊಂಡಿವೆ.

ಅದಾಲತ್‍ನಲ್ಲಿ ಸಮುಚ್ಚಯ ನ್ಯಾಯಾಲಯಗಳ ಹಿರಿಯ, ಕಿರಿಯ ಶ್ರೇಣಿಯ ನ್ಯಾಯಾಧೀಶರುಗಳು, ಹಿರಿಯ ವಕೀಲರು, ಕಿರಿಯ ವಕೀಲರು ಭಾಗವಹಿಸಿದ್ದರು.