ಕೂಡಿಗೆ, ಜು. 16: ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ನೀರಿಗಾಗಿ ಮಳೆರಾಯನನ್ನು ಭೂಮಿಗೆ ಕರೆಸುವ ಸಲುವಾಗಿ ಕಪ್ಪೆಗಳಿಗೆ ಮದುವೆ ಮಾಡುವ ಪದ್ಧತಿ ಇದೆ. ಮುಂಗಾರು ಕೈ ಕೊಟ್ಟು ರೈತರು, ಜನ ಜಾನುವಾರುಗಳಿಗೆ ನೀರಿಲ್ಲದೆ ಪರದಾಡುವ ಸಂದರ್ಭ ರೈತರು ಮಳೆಗಾಗಿ ಕಪ್ಪೆಗಳ ಮದುವೆ ಮಾಡಿ, ಮಳೆರಾಯನಲ್ಲಿ ಪ್ರಾರ್ಥಿಸುವದು ಸಂಪ್ರದಾಯವಾಗಿದೆ.ಕೊಡಗು ಜಿಲ್ಲೆಯಲ್ಲೂ ಮಳೆ ಈ ಭಾರಿ ಸಂಪೂರ್ಣ ಕ್ಷೀಣಿಸಿರುವ ಪರಿಣಾಮ, ಇಳೆಯು ಒಣಗುತ್ತಿದ್ದು, ವ್ಯವಸಾಯದಲ್ಲಿ ತೊಡಗಿರುವ ರೈತರು ಕಂಗಾಲಾಗಿದ್ದಾರೆ. ಜಿಲ್ಲೆಯಲ್ಲಿ ಬರಗಾಲದ ಛಾಯೆ ಎದ್ದು ಕಾಣುತ್ತಿದ್ದು, ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲ್ಲೇನಹಳ್ಳಿ ಗ್ರಾಮದ ರೈತರು ಮಳೆಗಾಗಿ ಸಾಂಪ್ರದಾಯದಂತೆ ಕಪ್ಪೆಗಳ ಮದುವೆ ಮಾಡಿದ ವಿಶೇಷ ಘಟನೆ ನಡೆಯಿತು. ಇಲ್ಲಿನ ಗ್ರಾಮಸ್ಥರು ಸಮೀಪದ ಹಳ್ಳದಿಂದ ಗಂಡು ಮತ್ತು ಹೆಣ್ಣುಕಪ್ಪೆಯನ್ನು ಹಿಡಿದು ತಂದು ರೈತರೊಬ್ಬರ ಜಮೀನ ಮರವೊಂದರ ಕೆಳಭಾಗದಲ್ಲಿ ಚಪ್ಪರ ನಿರ್ಮಿಸಿ ಸಿಂಗರಿಸಿ, ಎರಡು ಕಪ್ಪೆಗಳಿಗೆ ಶಾಸ್ತ್ರೋಕ್ತವಾಗಿ ಮದುವೆ ಮಾಡಿದರು.
(ಮೊದಲ ಪುಟದಿಂದ) ಕಪ್ಪೆಗಳ ಮದುವೆಗೂ ಊಟದ ವ್ಯವಸ್ಥೆ ಮಾಡಲಾಗಿತ್ತು. ಮನುಷ್ಯರ ಮದುವೆಯ ಸಂಪ್ರದಾಯದಂತೆಯೇ ಈ ಕಪ್ಪೆಗಳ ಮದುವೆಯೂ ನಡೆಯಿತು.
ಕಪ್ಪೆಗಳ ಮದುವೆ ಮಾಡಿದ ನಂತರ ಮಳೆರಾಯನಲ್ಲಿ ರೈತರು ಮಳೆಗಾಗಿ ಪ್ರಾರ್ಥಿಸಿದರು.
ಈ ಸಂದರ್ಭ ಗ್ರಾಮಸ್ಥರಾದ ಮಂಜುನಾಥ್, ಗೋವಿಂದ, ಗಿರೀಶ್, ಗಣೇಶ್, ನಾಗರಾಜ್, ಚಿಣ್ಣಪ್ಪ, ಶೋಭ, ಮಂಜಮ್ಮ, ಸುಶೀಲಮ್ಮ ಸೇರಿದಂತೆ ಊರಿನ ರೈತರು, ಗ್ರಾಮಸ್ಥರು ಪಾಲ್ಗೊಂಡು ವರುಣನಲ್ಲಿ ಪ್ರಾರ್ಥಿಸಿದರು.