ಸೋಮವಾರಪೇಟೆ, ಜು. 16: ಕಳೆದ ನಾಲ್ಕೈದು ದಿನಗಳಿಂದ ಮಳೆಯ ಬಿರುಸು ತಗ್ಗಿದ್ದು, ಕೃಷಿ ಕಾರ್ಯಕ್ಕೆ ಅಣಿಯಾಗಿದ್ದ ರೈತರು ನಿರಾಶೆಗೊಳಗಾಗಿದ್ದಾರೆ.
ಪ್ರಾರಂಭದಲ್ಲಿ ಸುರಿದ ಮಳೆ ಯನ್ನು ನಂಬಿ ಗದ್ದೆಯನ್ನು ಉಳುಮೆ ಮಾಡಿದ್ದ ರೈತರಿಗೆ ಮುಂಗಾರಿನಲ್ಲಿ ಬಿಸಿಲಿನ ವಾತಾವರಣ ಉಂಟಾಗಿದ್ದ ರಿಂದ ಸಮಸ್ಯೆಯಾಗಿದ್ದು, ಗದ್ದೆಗಳನ್ನು ಹಾಗೆಯೇ ಬಿಟ್ಟರೆ ಒಣಗುವ ಭೀತಿಯಿಂದ ಕೆರೆಗಳ ನೀರನ್ನು ಹರಿಸುತ್ತಿದ್ದಾರೆ.
ತಾಲೂಕಿನಾದ್ಯಂತ ಕಳೆದ ಮೂರ್ನಾಲ್ಕು ದಿನಗಳಿಂದ ಮುಂಗಾರು ಮಾಯವಾಗಿದ್ದು, ಉಳುಮೆ ಮಾಡಿದ ಭತ್ತದ ಗದ್ದೆಗಳು ಒಣಗಲು ಪ್ರಾರಂಭಿಸಿವೆ. ಕೆರೆಯ ವ್ಯವಸ್ಥೆ ಹೊಂದಿರುವ ಕೃಷಿಕರು ಮೋಟಾರ್ ಪಂಪ್ ಮೂಲಕ ಗದ್ದೆಗಳಿಗೆ ನೀರು ಹಾಯಿಸಿ ನಾಟಿ ಮಾಡುತ್ತಿದ್ದಾರೆ.
ಜುಲೈ ಮೊದಲ ವಾರದಲ್ಲಿ ಮುಂಗಾರು ಬಿರುಸುಗೊಂಡ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದಲ್ಲಿ ಭತ್ತ ಕೃಷಿಕರು ಗದ್ದೆಗಳನ್ನು ಉತ್ತು ಹದ ಮಾಡಲು ಪ್ರಾರಂಭಿಸಿದ್ದರು. ಕೃಷಿ ಚಟುವಟಿಕೆ ವಿಳಂಬವಾದ ಹಿನ್ನೆಲೆಯಲ್ಲಿ ದುಪ್ಪಟ್ಟು ಬಾಡಿಗೆ ಕೊಟ್ಟು ಟ್ರ್ಯಾಕ್ಟರ್ ಮತ್ತು ಟಿಲ್ಲರ್ ಮೂಲಕ ಗದ್ದೆಗಳ ಉಳುಮೆ ಮಾಡಿಸಿದ್ದರು.
ಉಳುಮೆ ಮುಗಿದ ಒಂದು ವಾರದೊಳಗೆ ಭತ್ತ ಸಸಿ ನಾಟಿ ಮಾಡುವ ಸಿದ್ಧತೆಯಲ್ಲಿರುವಾಗಲೇ ಮುಂಗಾರು ಮಳೆ ಮಾಯವಾಗಿದೆ. ಈಗಾಗಲೇ ಉಳುಮೆ ಮಾಡಿದ ಗದ್ದೆಗಳಲ್ಲಿ ನೀರು ಒಣಗಿದ್ದು, ಮುಂದಿನ ದಿನಗಳಲ್ಲಿ ಮಳೆ ಪ್ರಾರಂಭವಾದ ಮೇಲೆ ಮತ್ತೊಮ್ಮೆ ಉಳುಮೆ ಮಾಡಬೇಕಾಗಿದೆ. ಇದರಿಂದ ಉತ್ಪಾದನಾ ವೆಚ್ಚವೂ ಜಾಸ್ತಿಯಾಗುವ ಸಂಭವವಿದೆ.
ಬಹುತೇಕ ಕೃಷಿಕರು, ಕೃಷಿ ಹೊಂಡ, ಕೆರೆ, ಗ್ರಾಮದ ಹೊಳೆಯ ನೀರನ್ನು ನಂಬಿಕೊಂಡೇ ಭತ್ತದ ಬೇಸಾಯ ಮಾಡುತ್ತಾರೆ. ಆದರೆ ಜುಲೈ ತಿಂಗಳಲ್ಲೂ ಕೆರೆ, ಹೊಂಡಗಳು ತುಂಬಿಲ್ಲ. ಹೊಳೆಯಲ್ಲಿ ನೀರು ಹರಿಯುತ್ತಿಲ್ಲ. ಇಂತಹ ಪ್ರದೇಶಗಳಲ್ಲಿ ಗದ್ದೆಗಳನ್ನು ಹಾಗೆಯೇ ಬಿಟ್ಟು ಬಿರುಸಿನ ಮಳೆಗಾಗಿ ಆಕಾಶ ನೋಡುವಂತಾಗಿದೆ.
ತಾಲೂಕಿನ ಗೌಡಳ್ಳಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಕೃಷಿ ಬಿರುಸುಗೊಂಡಿದೆ. ಮಳೆಯ ಪ್ರಮಾಣ ಕಡಿಮೆಯಿದ್ದರೂ ಸಹ ಅಕ್ಕಪಕ್ಕದ ಕೆರೆಗಳಿಂದ ನೀರನ್ನು ಗದ್ದೆಗೆ ಹಾಯಿಸಿ ನಾಟಿ ಕಾರ್ಯ ಮಾಡಲಾಗುತ್ತಿದೆ.
ಕಳೆದ ನಾಲ್ಕೈದು ದಿನಗಳಿಂದ ಮಳೆ ಮಾಯವಾಗಿದ್ದು, ಕೃಷಿ ಕಾರ್ಯಕ್ಕೆ ತೀವ್ರ ಹಿನ್ನಡೆಯಾಗಿದೆ. ಪ್ರಾರಂಭದ ಮಳೆಯನ್ನು ನಂಬಿ ಸಸಿಮಡಿ ತಯಾರಿ ಮಾಡಲಾಗಿದೆ. ನಂತರದಲ್ಲಿ ಗದ್ದೆಗಳನ್ನು ಉಳುಮೆ ಮಾಡಲಾಗಿದ್ದು, ಇದೀಗ ನಾಟಿ ಕಾರ್ಯ ಮಾಡಲು ಮಳೆಯೇ ಇಲ್ಲವಾಗಿದೆ. ಹೀಗೇ ಬಿಟ್ಟರೆ ಸಸಿಮಡಿ ಸೊರಗುವದರೊಂದಿಗೆ ಗದ್ದೆಗಳೂ ಒಣಗುವ ಹಿನ್ನೆಲೆ ಕೆರೆಗಳಿಂದ ನೀರನ್ನು ಗದ್ದೆಗೆ ಹಾಯಿಸಿ ನಾಟಿ ಕಾರ್ಯ ಮಾಡಲಾಗುತ್ತಿದೆ ಎಂದು ಅಜ್ಜಳ್ಳಿ ಗ್ರಾಮದ ಕೃಷಿಕ ನವೀನ್ ತಿಳಿಸಿದ್ದಾರೆ.
ಈ ತಿಂಗಳಿನಲ್ಲಿ ಆಶಾದಾಯಕ ಮಳೆ ಸುರಿದರೆ ನಾಟಿ ಕಾರ್ಯಕ್ಕೆ ಹೆಚ್ಚಿನ ಅನುಕೂಲವಾಗುತ್ತದೆ. ಮಳೆ ಇನ್ನಷ್ಟು ವಿಳಂಬವಾದರೆ ಕೃಷಿ ಕಾರ್ಯಕ್ಕೆ ಪೆಟ್ಟು ಬೀಳಲಿದೆ. ಈಗ ನಾಟಿ ಮಾಡಿದರೆ ಭತ್ತದ ಸಸಿಗಳು ಬೇರುಬಿಟ್ಟು ಬೆಳವಣಿಗೆಗೆ ಸಹಕಾರಿಯಾಗುತ್ತದೆ. ಆಗಸ್ಟ್‍ನಲ್ಲಿ ನಾಟಿ ಮಾಡಿದರೆ ಭಾರೀ ಮಳೆಗೆ ಭತ್ತದ ಸಸಿ ಕೊಚ್ಚಿ ಹೋಗುವ ಸಂಭವಸಿದೆ ಎಂದು ನವೀನ್ ಅಭಿಪ್ರಾಯಿಸಿದ್ದಾರೆ.
ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ತಾಲೂಕಿನ 10 ಸಾವಿರ ಹೆಕ್ಟೇರ್ ನಲ್ಲಿ ಭತ್ತ ಬೆಳೆಯುವ ಗುರಿಯಿದ್ದು, ಮಳೆಯಾಶ್ರಿತ 7790 ಹೆಕ್ಟೇರ್, ಚಿಕ್ಲಿಹೊಳೆ, ಹಾರಂಗಿ ನೀರಾವರಿ ಪ್ರದೇಶದ 2210 ಹೆಕ್ಟೇರ್‍ನಲ್ಲಿ ಭತ್ತ ನಾಟಿಯಾಗಬೇಕಿದೆ. ಆದರೆ ಮಳೆಯಿಲ್ಲದೆ ಹಾರಂಗಿಗೆ ಒಳಹರಿವು ತುಂಬ ಕಡಿಮೆ ಇರುವ ದರಿಂದ, ಕೃಷಿಗೆ ಹಿನ್ನಡೆಯಾಗುತ್ತಿವೆ.
ಮಳೆಯ ಪ್ರಮಾಣ ಕಡಿಮೆ ಯಾಗಿರುವ ಹಿನ್ನೆಲೆ ಹಲವಷ್ಟು ಕೆರೆಗಳಲ್ಲಿ ನೀರಿನ ಕೊರತೆ ಕಂಡುಬಂದಿದೆ. ತಾಲೂಕಿನಲ್ಲಿ 200 ಸುರಕ್ಷಿತ ಕೆರೆಗಳಿದ್ದು, ದೊಡ್ಡಮಳ್ತೆಯ ಹೊನ್ನಮ್ಮನ ಕೆರೆ, ಯಡೂರು ಕೆರೆ, ಅಂಕನಳ್ಳಿಯ ದೇವಕೆರೆ, ಕಿತ್ತೂರು ಕೆರೆ, ಆಲೂರು ಕೆರೆಗಳಲ್ಲಿ ಅಲ್ಪಸ್ವಲ್ಪ ನೀರಿದ್ದು, ಕೃಷಿ ಉಪಯೋಗಕ್ಕೆ ಲಭ್ಯವಿಲ್ಲದಂತಾಗಿದೆ.
ಪಟ್ಟಣದ ಆನೆಕೆರೆ, ಶನಿವಾರಸಂತೆಯ ತೋಯಳ್ಳಿ ಕೆರೆ, ಮಾದಾಪುರ ಹಾಡಗೇರಿ ಕೆರೆ, ಗುಡ್ಡೆಹೊಸೂರಿನ ಕಾಟಿಕೆರೆ, ಹರದೂರು ಕೆರೆ, ಕಿತ್ತೂರು ಕೆರೆ, ಕೂಗೂರು ಕೆರೆ, ಹಿರಿಕರ ಗ್ರಾಮದ ಗುಡಿಕೆರೆ, ಚನ್ನಾಪುರ ಕೆರೆ, ಕೂಗೇಕೋಡಿ ಕೆರೆ ಸೇರಿದಂತೆ ಇತರ ಕೆರೆಗಳಲ್ಲಿ ನಿರೀಕ್ಷಿತ ಮಟ್ಟದಲ್ಲಿ ನೀರು ಸಂಗ್ರಹವಾಗಿಲ್ಲ.
ತಾಲೂಕಿನ ಕೊಡ್ಲಿಪೇಟೆ, ಶನಿವಾರಸಂತೆ, ಸೋಮವಾರಪೇಟೆ ಕಸಬ, ಸುಂಟಿಕೊಪ್ಪ ಹೋಬಳಿ ವ್ಯಾಪ್ತಿಯಲ್ಲೂ ಮಳೆಯಿಲ್ಲದೆ ಭತ್ತ ಕೃಷಿಕರು ಆತಂಕದಲ್ಲಿದ್ದಾರೆ. ಕಳೆದ ವರ್ಷ ಧಾರಾಕಾರ ಮಳೆಯಿಂದ ಭತ್ತ ಕೃಷಿ ನಾಶವಾಯಿತು. ಪ್ರಸಕ್ತ ವರ್ಷ ಮಳೆಯಿಲ್ಲದೆ ಸಮಸ್ಯೆ ಎದುರಿಸುವಂತಾಗಿದೆ ಎಂದು ತೋಳೂರುಶೆಟ್ಟಳ್ಳಿ ಗ್ರಾಮದ ಕೃಷಿಕ ಕೆ.ಕೆ. ಸುಧಾಕರ್ ಅಭಿಪ್ರಾಯಿಸಿದ್ದಾರೆ.
ಈಗಾಗಲೇ ಸಿದ್ಧಗೊಂಡಿರುವ ಭತ್ತದ ಸಸಿ ಮಡಿಯನ್ನು ರೋಗಮುಕ್ತವಾಗಿ ಇಟ್ಟುಕೊಳ್ಳಬೇಕು. ಬೆಂಕಿ ರೋಗ ಹರಡದಂತೆ ಎಚ್ಚರ ವಹಿಸಬೇಕು. ನಾಟಿಗೆ ಒಂದು ವಾರದ ಮೊದಲು ಸಸಿಮಡಿಗೆ 10 ಲೀಟರ್ ನೀರಿಗೆ 10 ಗ್ರಾಂ ಬ್ಯಾವಿಸ್ಟೀನ್ ಮತ್ತು 200ಮೀ.ಲೀ ಕ್ಲೋರೋಪೈರಿಪಾಸ್‍ನ್ನು ಮಿಶ್ರಣ ಮಾಡಿ ಸಿಂಪಡಿಸಬೇಕು. ಸಸಿಮಡಿ ನಾಶವಾಗದಂತೆ ಎಚ್ಚರಿಕೆ ವಹಿಸಬೇಕೆಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರಾಜಶೇಖರ್ ಕೃಷಿಕರಿಗೆ ಸಲಹೆ ನೀಡಿದ್ದಾರೆ.