ಮಡಿಕೇರಿ, ಜು. 16: ಈ ಪ್ರಾಣಿ ಸಂಕುಲ ವಿಶಿಷ್ಟ ರೀತಿಯದ್ದಾಗಿತ್ತು ಒಂದು ಜಾಗದಲ್ಲಿ ಒಂದು ಪ್ರಾಣಿ ಊಳಿಡುತ್ತಾ (ಕೂಗು) ತನ್ನ ಸಂತಸ ವ್ಯಕ್ತಪಡಿಸಲಾರಂಭಿಸಿತೆಂದರೆ ಸಾಕು... ಇದಕ್ಕೆ ಬೇರೆ ಬೇರೆ ಕಡೆಗಳಿಂದ ದನಿಗಳು ಬೆರೆತುಕೊಳ್ಳುವ ಮೂಲಕ ಸರಣಿ - ಸರಣಿಯಾಗಿ ಈ ಶಬ್ದ ಬೇರೆ ಬೇರೆ ದಿಕ್ಕುಗಳಿಂದ ಸಂಪರ್ಕ ಸೇತುವಾಗುತ್ತಿತ್ತು. ಬಹುಶಃ ಜಿಲ್ಲೆಯಲ್ಲಿ ಹುಟ್ಟಿ ಬೆಳೆದವರೆಲ್ಲರೂ ಈ ವಿಶಿಷ್ಟವಾದ ‘ಉಕ್ಕೈ ಹೋೀೀ’ ಕೂಗನ್ನು ಕೇಳಿದವರೇ ಆಗಿದ್ದಾರೆ. ಆದರೆ ಇತ್ತೀಚಿನ ಎಂಟತ್ತು ವರ್ಷಗಳಿಂದ ಇದು ಕೇಳಿ ಬರುತ್ತಿಲ್ಲ. ಇದರ ಮೂಲ ಹುಡುಕುತ್ತಾ ಹೋದರೆ ಈ ಪ್ರಾಣಿಗಳ ಸಂತತಿಯೇ ಕೊಡಗಿನಲ್ಲಿ ನಶಿಸಿ ಹೋಗಿದೆ. ಹೌದು ಇವಿಷ್ಟು ಪೀಠಿಕೆಯಿಂದಲೇ ಇದು ಯಾವ ಪ್ರಾಣಿಯೆಂದು ಅರ್ಥವಾಗಿರಬಹುದು ಅಲ್ಲವೇ...ನರಿ (ಗುಳ್ಳೆನರಿ) ಸ್ಥಳೀಯ ಭಾಷೆಯಾಗಿರುವ ಕೊಡವ ಭಾಷೆಯಲ್ಲಿ ಕರೆಯಲ್ಪಡುವ ಕುರ್ಕ. ಈ ಪ್ರಾಣಿಯ ಬುದ್ಧಿಯನ್ನು ಹಲವು ರೀತಿಯಲ್ಲಿ ತಮಾಷೆಯಾಗಿಯೂ; ಕುಚೇಷ್ಟೆಯಾಗಿಯೂ ವಿಶ್ಲೇಷಿಸಲಾಗುತಿತ್ತು. ಛತ್ರಿಬುದ್ಧಿಯ ಗುಳ್ಳೆನರಿ ಎಂದರೆ ಒಂದು ರೀತಿಯಲ್ಲಿ ಹಾಸ್ಯಾಸ್ಪದವಾಗಿಯೂ, ಆಯಾ ಪರಿಸ್ಥಿತಿಯನ್ನು ಹೋಲಿಸಿಕೊಂಡು ಗಂಭೀರ ರೀತಿಯಲ್ಲೂ ಮಾತನಾಡಿಕೊಳ್ಳಲಾಗುತಿತ್ತು. ಪರಸ್ಪರ ಹೋಲಿಕೆ ಮಾಡಲಾಗುತಿತ್ತು. ಇದು ಒತ್ತಟ್ಟಿಗಿರಲಿ ಆದರೆ ದಶಕದಿಂದ ಈಚೆಗೆ ಈ ವಿಶಿಷ್ಟವಾದ ಪ್ರಾಣಿ ಸಂಕುಲವೇ ಕಣ್ಮರೆಯಾಗಿ ಹೋಗಿದೆ. ಮಾಂಸಾಹಾರಿಯೂ, ಸಸ್ಯಹಾರಿಯಾಗಿಯೂ ಬದುಕುತ್ತಿದ್ದು, ಈ ಪ್ರಾಣಿಗಳ ಸಂತತಿ ನಶಸಿ ಹೋಗಿರುವದು ವನ್ಯಜೀವಿ ಪ್ರಿಯರು ಮಾತ್ರವಲ್ಲದೆ ಪ್ರಾಣಿಪ್ರಿಯರು ಗಂಭೀರವಾಗಿ ಚಿಂತಿಸಬೇಕಾದ ಸಂಗತಿಯಾಗಿದೆ. ಈ ಗುಳ್ಳೆ ನರಿ ಎಂಬ ಪ್ರಾಣಿ ಅಲ್ಲಲ್ಲಿ ಜನತೆ ತಾವು ಸಾಕುತ್ತಿದ್ದ ಕೋಳಿಗಳನ್ನು ಉಪಾಯದಿಂದ ಲಪಟಾಯಿಸುತ್ತಿದ್ದುದು ಬಿಟ್ಟರೆ ಈ ಜೀವಿಯಿಂದ ಇತರ ರೀತಿಯಲ್ಲಿ ಉಪದ್ರವಗಳಿರಲಿಲ್ಲ. ಒಂದು ರೀತಿಯಲ್ಲಿ ಇದು ರೈತ ಸ್ನೇಹಿಯಾದ ಪ್ರಾಣಿಯೇ ಆಗಿತ್ತು ಎಂಬದರಲ್ಲಿ ಎರಡು ಮಾತಿಲ್ಲ.
ಕಾರಣವೇನು?
ಕೆಲವು ವರ್ಷಗಳ ಹಿಂದೆ ಅರಣ್ಯ ಪ್ರದೇಶಗಳಲ್ಲಿ ಮಾತ್ರವಲ್ಲ, ನಗರ ಪ್ರದೇಶಗಳಲ್ಲೂ, ನಾಡಿನ ತೋಟಗಳಲ್ಲೂ, ಇವು ಕಂಡು ಬರುತ್ತಿತ್ತು. ಸಂಜೆಯಾಯಿತೆಂದರೆ ‘ಉಕ್ಕೈ ಹೋ’ ಕೂಗು ಬಹುಶಃ ಎಲ್ಲೆಡೆ ಕೇಳಿಬರುತಿತ್ತು. ಬೆಳಿಗ್ಗೆ ಈ ಜೀವಿಯ ಮುಕದರ್ಶನವಾದರೆ ಅದೃಷ್ಟ ಎಂದೂ ಪರಿಗಣಿಸುತ್ತಿದ್ದುದನ್ನು ಜನತೆ ಮರೆತಿರಲಾರರು. ಆದರೆ ಇಂದು ಕಣ್ಣು ಅಗಲಿಸಿ ಹುಡುಕಾಟ ನಡೆಸಿದರೂ ಎಲ್ಲೂ ಈ ಪ್ರಾಣಿಗಳು ಗೋಚರಿಸುತ್ತಿಲ್ಲ. ಗುಳ್ಳೆನರಿಗಳು ಇಲ್ಲವಾಗಿವೆ ಎಂದು ಜನತೆ ಮಾತನಾಡಿಕೊಳ್ಳುತ್ತಿರುವದು ಕೇಳಿಬರುತ್ತಿದೆಯಾದರೂ ಇದರ ಕಾರಣಗಳನ್ನು ಯಾರೂ ಕೆದಕುತ್ತಿಲ್ಲ ಎನಿಸುತ್ತದೆ.
ಕಾಡಾನೆ, ಹುಲಿ, ಚಿರತೆಯಂತಹ ಪ್ರಾಣಿಗಳ ವಿಚಾರ ಬೇರೆಯಾಗಿದೆ ಆದರೆ ಈ ಗುಳ್ಳೆನರಿ ಎಂಬ ಪ್ರಾಣಿ ನಿಜವಾಗಿಯೂ ಕೋಳಿಗಳನ್ನು ಕಬಳಿಸುತ್ತಿ ದ್ದುದನ್ನು ಹೊರತುಪಡಿಸಿದರೆ, ರೈತಸ್ನೇಹಿಯೇ ಆಗಿತ್ತು.
(ಮೊದಲ ಪುಟದಿಂದ) ಈ ಹಿಂದೆ ಗದ್ದೆಗಳಲ್ಲಿ, ಗದ್ದೆಗಳ ಸನಿಹದ ತೋಡುಗಳಲ್ಲಿ ಏಡಿಗಳು, ಇಲಿ, ಹೆಗ್ಗಣಗಳನ್ನು ಭಕ್ಷಿಸುತ್ತಾ ಈ ಜೀವಿಗಳಿಂದ ರೈತರಿಗೆ ಆಗುತ್ತಿದ್ದ ಸಮಸ್ಯೆಗಳನ್ನು ಈ ಪ್ರಾಣಿ ಇಲ್ಲವಾಗಿಸುತಿತ್ತು.
ಶುಂಠಿ ಬೆಳೆ ಬಂದಿದ್ದೇ ಮಾರಕ
ಕೊಡಗು ಜಿಲ್ಲೆಯಲ್ಲಿ ವಿವಿಧ ಕಾರಣಗಳಿಂದ ಯಾವತ್ತೂ ಭತ್ತದ ಕೃಷಿಯತ್ತ ರೈತರ ಆಸಕ್ತಿ ಕಡಿಮೆಯಾಗಿ ಲಾಭದ ದೃಷ್ಟಿಕೋನದ ಶುಂಠಿ ಬೆಲೆ ಎಂಬದು ಜಿಲ್ಲೆಗೆ ಕಾಲಿರಿಸಿತೋ ಅಂದಿನಿಂದ ಈ ಗುಳ್ಳೆನರಿಗಳ ಜೀವಕ್ಕೆ ಸಂಚಕಾರ ಬಂದಿದೆ ಎಂಬದು ಹಲವು ವನ್ಯಪ್ರೇಮಿಗಳು, ಅನುಭವಸ್ಥರ ಅಭಿಪ್ರಾಯವಾಗಿದೆ.
ಶುಂಠಿ ಬೆಳೆಯನ್ನು ಪೋಷಿಸಲು, ರಕ್ಷಿಸಲು, ಕಾಡು ಹಂದಿಗಳ ಹಾವಳಿಯಂತಹ ಕಾರಣಗಳಿಂದ ಉಳಿಸಿಕೊಳ್ಳಲು ವಿವಿಧ ವಿಷಕಾರಿ ರಾಸಾಯನಿಕಗಳನ್ನು ಬಳಸಲಾಗುತ್ತದೆ. ಇದಕ್ಕಾಗಿ ಸಿಂಪಡಿಸುವ ಇಂತಹ ರಾಸಾಯನಿಕ ಪದಾರ್ಥಗಳನ್ನು ತಿಂದು; ಏಡಿ, ಇಲಿ, ಹಾವು, ಹೆಗ್ಗಣದಂತಹ ಪ್ರಾಣಿಗಳು ಕೃಷಿ ಪ್ರದೇಶಗಳ ವ್ಯಾಪ್ತಿಯಲ್ಲಿ ಸಾವಿಗೀಡಾದರೆ, ಇವುಗಳನ್ನು ತಿಂದ ಗುಳ್ಳೆನರಿಗಳು ಪ್ರಾಣಕಳೆದುಕೊಂಡಿವೆ ಎಂಬದು ಒಂದು ಕಾರಣವೆನ್ನಲಾಗುತ್ತಿದೆ. ಯಾವದೋ ಒಂದು ರೀತಿಯ ಕಾಯಿಲೆ ಬಂದಿರುವ ಸಾಧ್ಯತೆ ಇದ್ದರೂ ಈ ತನಕ ಮತ್ತೆ ಈ ಸಂತತಿ ಕಂಡುಬರಬೇಕಿತ್ತು ಎಂಬದು ಕೂಡ ಈ ವಿಚಾರದಲ್ಲಿ ಅನುಭವಸ್ಥರ ಅಭಿಪ್ರಾಯವಾಗಿದೆ.
ಶುಂಠಿ ಬೆಳೆಯೊಂದಿಗೆ ಹಲವಾರು ಗದ್ದೆಗಳಲ್ಲಿ ಶಾಶ್ವತ ಬೆಳೆಯಾದ ತಾಳೆಯನ್ನೂ ನೆಡಲಾಗಿದೆ. ಇದರ ಪೋಷಣೆಗೂ ಬಳಸುವ ರಾಸಾಯನಿಕ ವಸ್ತುಗಳು, ತೋಟಗಳಲ್ಲಿ ಕಚ್ಚಡ - ಕಾಡುಗಳನ್ನು ನಿಯಂತ್ರಿಸಲು ಬಳಸುವ ವೀಡ್ಕಿಲ್ಲರ್ನಂತಹ ವಸ್ತು ಇದರೊಂದಿಗೆ ವಿಷಕಾರಿ ವಸ್ತುಗಳನ್ನು ಬಳಿಸಿ ಇನ್ನಿತರ ವನ್ಯಜೀವಿಗಳ ಉಪಟಳ ತಡೆಯ ಯತ್ನದಂತಹ ಕಾರಣಗಳಿಂದಲೂ ಇವನ್ನು ಸೇವಿಸಿದ ಈ ಗುಳ್ಳೆನರಿಗಳು (ಕುರ್ಕಂಗ) ನಶಿಸಿಹೋಗಿವೆ ಎಂದು ಕೂರ್ಗ್ ವೈಲ್ಡ್ ಲೈಫ್ ಫಸ್ಟ್ನ ಪ್ರಮುಖ, ನಿವೃತ್ತ ಅರಣ್ಯಾಧಿಕಾರಿ ಕೆ.ಎಂ. ಚಿಣ್ಣಪ್ಪ ಅವರು ಹೇಳುತ್ತಾರೆ. ಮಾನವನಿಗೆ ಕೆಲವು ರೀತಿಯಲ್ಲಿ ಕೆಲವು ಪ್ರಾಣಿಗಳಿಂದ ಉಪದ್ರವವಿದ್ದರೂ ಹೆಚ್ಚಿನ ಪಾಲು ಉಪಯೋಗವಿರುವದನ್ನು ಅರ್ಥೈಸಿಕೊಳ್ಳಬೇಕು ಎಂಬದು ಅವರ ಮಾತು. ಕೇವಲ ಗುಳ್ಳೆನರಿಗಳು ಮಾತ್ರವಲ್ಲ, ಮೊಲ, ಜೇನು, ಹಿಂದೆ ಕಂಡುಬರುತ್ತಿದ್ದ ಗೂಬೆಗಳು ಕಡಿಮೆಯಾಗುತ್ತಿರುವದು ಕೂಡ ಗಮನಿಸಬೇಕಾದ ಅಂಶವಾಗಿದೆ. ಇವುಗಳಿಂದ ಮಾನವನಿಗೆ ಅದರಲ್ಲೂ ರೈತರಿಗೆ ಒಂದಲ್ಲಾ ಒಂದು ರೀತಿಯಲ್ಲಿ ಪ್ರಯೋಜನವಿದೆ.
ಇಲ್ಲಿಗೆ ಅವೈಜ್ಞಾನಿಕವಾದ ಥಾಯ್ಲ್ಯಾಂಡ್ನಿಂದ ತಂದ ಥಾಯಿಬ್ರೂಡ್ ಶೇಕ್, ಜಪಾನ್ನಿಂದ ತಂದ ಕಕೂನ್ ತಳಿಯ ಜೇನುಗಳು ಕೊಡಗಿನ ಪ್ರಯೋಜನಕ್ಕೆ ಬಂದಿಲ್ಲ ಎಂದು ಚಿಣ್ಣಪ್ಪ ಅವರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಪೊನ್ನಂಪೇಟೆಯ ಅರಣ್ಯ ಮಹಾವಿದ್ಯಾಲಯದ ಡೀನ್ ಡಾ. ಸಿ.ಜಿ. ಕುಶಾಲಪ್ಪ, ನಿವೃತ್ತ ಡಿಎಫ್ಓ ಎಂ.ಎಂ. ಜಯ, ಕೂರ್ಗ್ ವೈಲ್ಡ್ಲೈಫ್ನ ಎ.ಎ. ತಮ್ಮು ಪೂವಯ್ಯ ಅವರಂತಹವರೂ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.