ಕೂಡಿಗೆ, ಜು. 16 : ತೊರೆನೂರು ಗ್ರಾಮದಲ್ಲಿ ಕಳೆದ ಹದಿನೈದು ದಿನಗಳಿಂದ ಕೆಲವರು ಸಾಂಕ್ರಾಮಿಕ ರೋಗದಿಂದ ಬಳಲುತ್ತಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ತಾಲೂಕು ಆರೋಗ್ಯ ಅಧಿಕಾರಿ ಶ್ರೀನಿವಾಸ್ ಅವರ ಮಾರ್ಗದರ್ಶನ ಕಳೆದ 10 ದಿನಗಳಿಂದ ಚಿಕಿತ್ಸೆ ನೀಡುವದರ ಜೊತೆಗೆ ಸಾಂಕ್ರಾಮಿಕ ರೋಗದಿಂದ ಬಳಲುತ್ತಿರುವವರ ರಕ್ತವನ್ನು ಪಡೆದು ಪರೀಕ್ಷೆಗೆ ಕಳುಹಿಸಲಾಗಿದೆ.
ಜ್ವರದಿಂದ ಬಳಲುತ್ತಿರುವ ಮನೆಯವರೆಲ್ಲರೂ ಗುಂಪು ಗುಂಪಾಗಿ ಜಿಲ್ಲಾಸ್ಪತ್ರೆಗೆ ಸಮೀಪದ ಜಿಲ್ಲೆಗಳಾದ ಮೈಸೂರು ಮತ್ತು ಹಾಸನ ಜಿಲ್ಲೆಗಳ ಆಸ್ಪತ್ರೆಗಳಿಗೆ ತೆರಳುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿಗಳ ಆದೇಶದಂತೆ ತಾಲೂಕು ಆರೋಗ್ಯ ಅಧಿಕಾರಿ ಹಾಗೂ ಜಿಲ್ಲಾ ಆರೋಗ್ಯ ಪರಿವೀಕ್ಷಣಾಧಿಕಾರಿ ಹಾಗೂ ಸಮೀಪದ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿಗಳು, ಆರೋಗ್ಯ ಸಹಾಯಕರು, ಆಶಾ ಕಾರ್ಯಕರ್ತೆಯರು ಎಲ್ಲಾ ಮನೆ ಮನೆಗಳಿಗೂ ತೆರಳಿ ಚಿಕಿತ್ಸೆ ನೀಡುವದರಲ್ಲಿ ತೊಡಗಿದ್ದಾರೆ. ಇಲಾಖೆ ವತಿಯಿಂದ ದೊರಕುವ ಔಷಧೋಪಚಾರ ಮತ್ತು ಮಾತ್ರೆಗಳನ್ನು ವಿತರಿಸಲಾಗುತ್ತಿದೆ.
ಈ ಸಂದರ್ಭ ಶುಚಿತ್ವದ ಬಗ್ಗೆ ಹಾಗೂ ಸೊಳ್ಳೆಗಳ ನಿಯಂತ್ರಣದ ಬಗ್ಗೆ ಆಯಾ ಬೀದಿಗಳಲ್ಲಿ ಮಾಹಿತಿ ನೀಡಿ, ಶುಚಿತ್ವ ಕಾಪಾಡಿಕೊಳ್ಳಲು ತಿಳಿಹೇಳಿದ್ದಾರೆ. ಅಲ್ಲದೆ, ಈ ತಂಡ ಗ್ರಾಮ ಪಂಚಾಯ್ತಿಗೂ ಭೇಟಿ ನೀಡಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಈ ಪ್ರಕರಣದ ಬಗ್ಗೆ ತೀವ್ರವಾಗಿ ಗಮನಕ್ಕೆ ತೆಗೆದುಕೊಂಡು, ಗ್ರಾಮದ ಸ್ವಚ್ಛತೆಗೆ ಆದ್ಯತೆ ನೀಡುವದರ ಬಗ್ಗೆ ಚರ್ಚೆ ನಡೆಸಿದರು. ಜಿಲ್ಲಾ ಪರಿವೀಕ್ಷಣಾಧಿಕಾರಿ ಡಾ.ಶಿವಕುಮಾರ್, ತಾಲೂಕು ವೈದ್ಯಾಧಿಕಾರಿ ಡಾ.ಶ್ರೀನಿವಾಸ್, ಕೂಡಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ.ರವಿಚಂದ್ರ, ತಾಲೂಕು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಾಂತಿ, ಆರೋಗ್ಯ ಸಹಾಯಕರಾದ ಮಂಜುನಾಥ್, ನಾಗೇಂದ್ರ ಹಾಗೂ ಆಶಾ ಕಾರ್ಯಕರ್ತರು, ಇಲಾಖೆಯ ಸಿಬ್ಬಂದಿಗಳು ಇದ್ದರು.